ಬಾವಲಿಯ ಕಬಿನಿ ದಡದಲ್ಲಿ ಮದ್ಯದ ಬಾಟಲಿಗಳನ್ನು ಒಡೆದಿರುವುದು
ಪ್ರಜಾವಾಣಿ ಚಿತ್ರ
ಮೈಸೂರು: ‘ನೋಡಿ ಸಾ... ಬಾವಲಿ ಹಾಡಿ ಮನೆಗಳಲಿ ಹೆಂಗಸ್ರು, ಮಕ್ಳು ಮಾತ್ರ ಅವ್ರೆ. ಯಾವ್ ಮನೇಲೂ ಗಂಡಸ್ರಿಲ್ಲ. ಕುಡ್ದೂ ಕುಡ್ದೂ ಸತ್ತೋಗವ್ರೆ. ಕುಡಿಯೋದು, ಸಾಲ ಮಾಡಾದು, ತೀರಿಸಕಾಯ್ದೆ ಕಾಡಿಗೋಗಿ ಮರಕ್ಕೆ ನೇಣಾಕಳದು..’
–ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬಾವಲಿ ಗ್ರಾಮದ ನಿವಾಸಿ ಜಯಮ್ಮ ಅವರ ಸಂಕಟದ ನುಡಿಗಳಿವು.
ಒಂದು ಬದಿ ವನ್ಯಜೀವಿಗಳ ಸಮೃದ್ಧ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಮತ್ತೊಂದು ಬದಿ ಭೋರ್ಗರೆಯುತ್ತ ಹರಿಯುವ ಕಬಿನಿ ನದಿ. ಕಾಡಿನ ತೊರೆಗಳಿಂದ ನಳನಳಿಸುತ್ತಿರುವ ಭತ್ತದ ಗದ್ದೆಗಳ ಮಧ್ಯೆ ನಿಂತ ಹಾಡಿಗಳಲ್ಲಿ ‘ಮದ್ಯ’ದ ಹೊಳೆ ಹರಿಯುತ್ತಿದೆ. ಅದರಿಂದ ನಲುಗಿರುವ ಬುಡಕಟ್ಟು ಮಹಿಳೆಯರ–ಮಕ್ಕಳ ಗೋಳು ಕೇಳುವವರಿಲ್ಲ.
ಕೇರಳ ಗಡಿಗೆ ತಾಗಿಕೊಂಡಿರುವ ಬಾವಲಿ, ಕಡೆಗದ್ದೆ, ತಿಮ್ಮನಹೊಸಳ್ಳಿ, ಡಿ.ಬಿ.ಕುಪ್ಪೆ, ಮಾನಿಮೂಲೆ, ಗೂಳೂರು, ಮಚ್ಚೂರು, ವಡಕನಮಾಳ, ಆನೆಮಾಳ ಸೇರಿದಂತೆ ವಿವಿಧ ಹಾಡಿಗಳ ನಿವಾಸಿಗರು ಮದ್ಯದಂಗಡಿಗಳನ್ನು ಮುಚ್ಚಿಸುವಂತೆ ದಶಕದಿಂದ ಹೋರಾಟ ನಡೆಸುತ್ತಿದ್ದರೂ, ಕಾಡಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮದ್ಯ ಮಾರಾಟ ನಿಂತಿಲ್ಲ. ಒಂದಿದ್ದ ಬಾರ್ ನಾಲ್ಕಾಗಿದೆ. ದುಡಿಯುವ ಗಂಡ, ಮಕ್ಕಳನ್ನು ಕಳೆದುಕೊಂಡಿರುವವರ ಕಣ್ಣೀರು ಕಾಣದಷ್ಟು ವ್ಯವಸ್ಥೆ ಕುರುಡಾಗಿದೆ.
‘2013ರಿಂದಲೂ ಬಾರ್‌ಗಳ ಹಾವಳಿ. ಆಗ ಚೆಕ್‌ಪೋಸ್ಟ್ ಹತ್ರ ಬಾರಿತ್ತು. ತೊಂದ್ರಿ ಇರಲಿಲ್ಲ. ಈಗ ಮನೆ ಹತ್ತಿರವೇ ಬಂದಿದೆ. ಚಿಕ್ಕ ಮಕ್ಕಳೂ ಎಣ್ಣೆ ಕುಡಿಯವ್ರೇ. ಓದಕ್ಕೆ ಹೋಗಲ್ಲ. ಹಾಡೀಲಿ ಪೊನ್ನಮ್ಮ ಎಂಬವ್ರ ಕಿರೀ ಮಗಳೂ ಕೆಲವು ದಿನಗಳ ಹಿಂದೆ ಸತ್ತೋದ್ಲು. ಕೊಡಗಿಗೆ ಕೂಲಿಗೆ ಹೋದಾಗ ಕುಡಿದು ಜಗಳಾಡ್ತಾ ಚಾಕು ಹಾಕಿಬಿಟ್ರು. ಆವಮ್ಮನ ಮೂವರು ಗಂಡು, ಹೆಣ್ಮಕ್ಕಳು ಈಗಿಲ್ಲ. ಆ ಅಜ್ಜಿ ಭಿಕ್ಷೆ ಬೇಡ್ತ ಜೀವ್ನ ಮಾಡ್ತಾವ್ರೆ. ಮಾರಿ, ಜಾನಮ್ಮ, ನೀಲಮ್ಮ ಎಲ್ಲರ ಮನೇಲೂ ಕಷ್ಟವೇ’ ಎನ್ನುತ್ತಾರೆ ಅವರು.
‘ನಿನ್ನೆ ಮೊನ್ನೆ ತಾನೇ ಅಣ್ತಮ್ಮದೀರೂ ಜಗಳಾಡ್ತಾ ಗುದ್ಲಿಲೀ ವೊಡೆದಾಡ್ಕಂಡವ್ರೆ. ಪಂಚಾಯ್ತಿಲೀರೋ ಎಲ್ಲ ಬಾರ‍್ನೂ ತೆಗೆದಾಕ್ಬಿಡಿ. ರಸ್ತೆಲೀ ದನ–ಕರ ವಡ್ಕೊಂಡ್ ಓಡಾಂಗಿಲ್ಲ. ಕೇರಳ್ದವ್ರೇ ದಾರಿ ತುಂಬಾ. ಮಚ್ಚೂರಲ್ಲೂ ಐದು ವರ್ಸದಿಂದೇ ಬಾರು ಸುರ್ವಾಯ್ತು. ಅಲ್ಲೂ ಇದೇ ಕಥೆ’ ಎಂದು ನೋವಿನಿಂದ ಹೇಳಿದರು.
ನಿಯಮ ಉಲ್ಲಂಘನೆ
ಡಿ.ಬಿ.ಕುಪ್ಪೆ ಗಿರಿಜನ ಆಶ್ರಮ ಶಾಲೆ, ಬಾವಲಿ ಹಾಡಿ ಪಕ್ಕದಲ್ಲೇ ತಲೆ ಎತ್ತಿರುವ ಬಾರ್ ಮತ್ತು ರೆಸಾರ್ಟ್‌ನಲ್ಲಿ ರೂಂ ಪಡೆದ ಅತಿಥಿಗಳಿಗೆ ಮದ್ಯ ಮಾತ್ರ ನೀಡಬೇಕೆಂಬ ಅಬಕಾರಿ ಇಲಾಖೆಯು ನೀಡಿದ ‘ಸಿಎಲ್–7’ ಪರವಾನಗಿ ನಿಯಮವಿದ್ದರೂ, ಅದನ್ನು ಉಲ್ಲಂಘಿಸಿ ಸ್ಥಳೀಯರು ಹಾಗೂ ಕೇರಳದ ಜನರಿಗೆ ಮದ್ಯಮಾರಾಟ ಮಾಡಲಾಗುತ್ತಿದೆ. ಸನ್ನದು ರದ್ದುಗೊಳಿಸುವಂತೆ ‘ಶ್ರೀ ಶಕ್ತಿ ಕರಿಗಾಳಿಯಮ್ಮ ಮಹಿಳಾ ಸಂಘ’ದವರು ಜಿಲ್ಲಾಧಿಕಾರಿಗೆ ಮೇ 9ಕ್ಕೆ ಪತ್ರ ಬರೆದಿದ್ದರೂ ಕ್ರಮವಾಗಿಲ್ಲ.
ಪರಿಸರ ಸೂಕ್ಷ್ಮ ವಲಯದಲ್ಲಿರುವ ಬಾವಲಿ, ತಿಮ್ಮನಹೊಸಳ್ಳಿ ಬಾರ್‌ಗಳಿಗೆ ಬಾಡಿಗೆ ವಾಹನ, ಟೆಂಪೊ ಟ್ರಾವಲರ್ಸ್‌ಗಳಲ್ಲಿ, ಡಿ.ಬಿ.ಕುಪ್ಪೆ, ಮಚ್ಚೂರು ಗ್ರಾಮದಲ್ಲಿ ಕಬಿನಿ ನದಿ ದಡದಲ್ಲಿಯೇ ತಲೆ ಎತ್ತಿರುವ ಎರಡು ಬಾರ್‌ಗಳಿಗೆ ದೋಣಿ, ತೆಪ್ಪಗಳಲ್ಲಿ ಕೇರಳದ ಜನ ನದಿ ದಾಟಿ ಬರುತ್ತಿದ್ದಾರೆ. ಅಲ್ಲಿನ ಪುಲ್ಪಳ್ಳಿ, ಮಾನಂದವಾಡಿ, ಕಾಟಿಕೊಳಂ, ತಿರುನೇಲಿ, ಪೆರಿಕ್ಕಾಲ್ಲೂರು, ಚೇಗಾಡಿ, ಕೊಡಗಿನ ಕುಟ್ಟ ಕಡೆಯಿಂದಲೂ ಬರುತ್ತಿದ್ದು, ಕೆಲವರು ಬೆಳಿಗ್ಗೆ 5.30ಕ್ಕೆ ಮೊಕ್ಕಾಂ ಹೂಡಿರುತ್ತಾರೆ!
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮಚ್ಚೂರಿಗೆ ಮದ್ಯ ಸೇವನೆಗಾಗಿ ದೋಣಿಯಲ್ಲಿ ನದಿ ದಾಟಿ ಬರುತ್ತಿರುವ ಕೇರಳದ ಜನರು –ಪ್ರಜಾವಾಣಿ ಚಿತ್ರ
ಕುಡಿದವರು ಬುಡಕಟ್ಟು ಜನ ವಾಸಿಸುವ ಹಾಡಿಗಳ ಗುಡಿಸಲುಗಳಿಗೆ ಹೋಗಿ ಅಸಭ್ಯವಾಗಿ ವರ್ತಿಸುತ್ತಾರೆ ಎನ್ನುವ ಆರೋಪವಿದೆ. ಬಾವಲಿ, ಡಿ.ಬಿ.ಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಕ್ರಮವಾಗಿ 150 ಮೀಟರ್ ಹಾಗೂ 1 ಕಿ.ಮೀ ಸಮೀಪದಲ್ಲಿದ್ದರೆ, ಮಚ್ಚೂರು ಗಿರಿಜನ ಆಶ್ರಮ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳೂ ಬಾರ್‌ಗಳಿಂದ 500 ಮೀಟರ್ ಸನಿಹವೇ ಇವೆ. ಶಾಲೆಗಳಿಗೆ ತೆರಳುವ ಬಾಲಕಿಯರನ್ನು ರೇಗಿಸಿದ, ಅವರಿಗೆ ಗುಪ್ತಾಂಗ ಪ್ರದರ್ಶನ ಮಾಡಿದ ಘಟನೆಗಳೂ ನಡೆದಿವೆ. ಅವುಗಳಿಂದ ರೋಸಿಹೋಗಿರುವ ಹಾಡಿ ಜನ ಬಾರ್‌ಗಳನ್ನು ಮುಚ್ಚುವಂತೆ ಹೋರಾಡುತ್ತಿದ್ದಾರೆ.
ಶಾಲೆಯ 100 ಮೀಟರ್ ಸುತ್ತಮುತ್ತ ಬಾರ್ ತೆರೆಯುವಂತಿಲ್ಲ. ಆದರೆ, ಹಾಡಿಯಿಂದ ಶಾಲೆಗಳಿಗೆ ಮದ್ಯದಂಗಡಿ ಇರುವ ರಸ್ತೆಯಲ್ಲಿಯೇ ಮಕ್ಕಳು ತೆರಳಬೇಕು. ಹೀಗಾಗಿ ತೊಂದರೆ ಅನುಭವಿಸುತ್ತಿದ್ದಾರೆ.
‘ಬಾವಲಿ, ಕಡೆಗದ್ದೆ ಸೇರಿದಂತೆ ಕಬಿನಿ ಹಿನ್ನೀರಿನ ಉದ್ದಕ್ಕೂ ಇರುವ ಗ್ರಾಮಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಕಂದಾಯ ಗ್ರಾಮಗಳಾಗಿದ್ದು, ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಬರುತ್ತವೆ. ಕಾಡಂಚಿನಿಂದ 10 ಕಿ.ಮೀವರೆಗೂ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸಲು ಅರಣ್ಯ ಇಲಾಖೆಯಿಂದ ಅನುಮತಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಹುಲಿ ಸಂರಕ್ಷಿತ ಪ್ರದೇಶವಾದ್ದರಿಂದ ಕೇರಳದ ವ್ಯಾಪ್ತಿಗೂ ಪರಿಸರ ಸೂಕ್ಷ್ಮ ಪ್ರದೇಶದ ನಿಯಮಗಳು ಅನ್ವಯಿಸುತ್ತವೆ’ ಎನ್ನುತ್ತಾರೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಪಿ.ಎ.ಸೀಮಾ.
‘ಬಫರ್ ವಲಯದಲ್ಲಿ ಕಂದಾಯ ಗ್ರಾಮಗಳೂ ಸೇರುತ್ತವೆ. ಕಾಡಂಚು, ಕಾರಿಡಾರ್ ಆಧರಿಸಿ ವಲಯದ ವ್ಯಾಪ್ತಿ ನಿರ್ಧರಿಸಲಾಗುತ್ತದೆ. ಹಾಡಿಗಳು ಅರಣ್ಯ ಇಲಾಖೆ ಜಾಗದಲ್ಲಿ ನಿರ್ಮಾಣವಾಗಿದ್ದು, ಅವರೂ ಮನೆ ಕಟ್ಟುವುದಕ್ಕೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಮದ್ಯ ಮಾರಾಟ ಮಾಡುತ್ತಿರುವ ರೆಸಾರ್ಟ್ ಕಡೆಗದ್ದೆ ಕಂದಾಯ ಗ್ರಾಮದಲ್ಲಿದ್ದು, ಪರವಾನಗಿ ರದ್ದು ಪಡಿಸುವಂತೆ ಅಬಕಾರಿ ಇಲಾಖೆಗೆ ಜುಲೈ 7ರಂದು ಪತ್ರ ಬರೆಯಲಾಗಿದ್ದು, ಪೂರಕ ದಾಖಲೆ, ಮಾರಾಟದ ಛಾಯಾಚಿತ್ರಗಳನ್ನು ಕೊಡಿ ಎಂದಿದ್ದರು. ಇದೀಗ ಅವುಗಳನ್ನೂ ಸೇರಿಸಿ ಮರುಪತ್ರ ಬರೆಯಲಾಗಿದೆ’ ಎಂದರು.
ಕಬಿನಿ ಹಿನ್ನೀರಿನ ಗ್ರಾಮಗಳ ನಕ್ಷೆ ಗ್ರಾಫಿಕ್ಸ್: ಎಂ.ಎಸ್.ಶ್ರೀಕಂಠಮೂರ್ತಿ
ಆರ್ಥಿಕ ಸಂಕಷ್ಟ
ಹಾಡಿಗಳ ಯುವಕರು ಕೆಲಸಕ್ಕೆ ಹೋಗುತ್ತಿಲ್ಲ. ಮದ್ಯದಂಗಡಿಗಳಲ್ಲಿ ಮೊಕ್ಕಾಂ ಹೂಡುವುದರಿಂದ ಬುಡಕಟ್ಟು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೀಡಾಗಿವೆ. ಬಾವಲಿ ಹಾಡಿಯ ಪೊನ್ನಿ ಎಂಬವರ ಮಕ್ಕಳು ಕುಡಿದು ತೀರಿಹೋಗಿದ್ದು, ವಯಸ್ಸಾಗಿ ಬೆನ್ನು ಬಾಗಿದ್ದರೂ ಜೀವನ ಸಾಗಿಸಬೇಕಾದ ಅನಿವಾರ್ಯತೆಯಿಂದ ಕೂಲಿಗೆ ಹೋಗುತ್ತಿದ್ದಾರೆ.
ಕೇರಳ ಪುಲ್ಪಳ್ಳಿಯಿಂದ ರಾಜ್ಯದ ಕಬಿನಿ ನದಿ ತಟದ ಡಿ.ಬಿ.ಕುಪ್ಪೆಯ ಮದ್ಯದಂಗಡಿಗೆ ಕರೆತರುವ ದೋಣಿಗಳು
ಪೊಲೀಸ್ ಠಾಣೆ ಕೊಡಿ
‘ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿಯನ್ನೇ ಕೇರಳದವರು ಖರೀದಿಸಿದ್ದಾರಾ ಎನ್ನುವ ಅನುಮಾನ ಬರುತ್ತದೆ. ಬಾರ್‌ಗಳು ಬೇಡವೆಂದು ಕೇಳಿಕೊಂಡರೂ ಅಧ್ಯಕ್ಷರು, ಸದಸ್ಯರ ತಲೆಗೆ ಹೋಗುವುದಿಲ್ಲ. ಇಡೀ ಹಾಡಿಗಳು ಹಾಗೂ ಗ್ರಾಮಸ್ಥರ ರಕ್ಷಣೆಗೆ ಪೊಲೀಸ್ ಠಾಣೆಯೂ ಇಲ್ಲ. ಫೋನಿನಲ್ಲಿ ದೂರು ನೀಡಿದರೆ, ಅಂತರಸಂತೆ ಠಾಣೆಯಿಂದ ಇಲ್ಲಿಗೆ ಪೊಲೀಸರು ಬರಲು 40 ಕಿ.ಮೀ ಆಗುತ್ತದೆ. ಕಾಡಿನ ಮೂಲೆಯಲ್ಲಿರುವುದರಿಂದ ಬರುವುದೂ ಇಲ್ಲ. ಇಲ್ಲಿಗೇ ಒಂದು ಪೊಲೀಸ್ ಠಾಣೆ ಕೊಡಬೇಕು’ ಎನ್ನುತ್ತಾರೆ ಬಾವಲಿಯ ನಾಗೇಶ.
‘ಯರವ, ಬೇಡ, ಕುರುಬ ಹಾಗೂ ಜೇನುಕುರುಬ ಸಮುದಾಯವರೇ ಹೆಚ್ಚಿರುವ ಈ ಊರಿನವರಿಗೇ ಮದ್ಯದಂಗಡಿಗಳು ಬೇಕಾಗಿಲ್ಲ. ಆದರೆ, ಮದ್ಯದಂಗಡಿ ಮಾಲೀಕರಿಗೆ ಲಾಭ ಬೇಕು. ಪ್ರತಿ ತಿಂಗಳ ಮೊದಲ ದಿನ ಗಡಿಯ ನಾಲ್ಕೂ ಬಾರ್‌ಗಳಿಗೆ ಕೇರಳದಿಂದ ಸಾವಿರಾರು ಜನ ಬರುತ್ತಾರೆ. ಸಂಜೆ, ಮುಂಜಾನೆ ಇಲ್ಲಿ ನಡೆದಾಡುವಂತೆಯೇ ಇಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ ರಾಶಿ
‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದ ವೇಳೆ, ಕಬಿನಿ ನದಿ ಪಕ್ಕದಲ್ಲಿಯೇ ಒಡೆದ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಲೋಟ, ಕುರುಕಲು ತಿಂಡಿ ಪೊಟ್ಟಣಗಳ ರಾಶಿ ರಾಶಿಯೇ ಬಿದ್ದಿದ್ದವು. ಬಾರ್‌ಗಳಲ್ಲಿ ಮದ್ಯ ಖರೀದಿಸಿ ಅರಣ್ಯ ಪ್ರವೇಶಿಸುವ ಜನ ಕಬಿನಿ ನದಿ ದಡಗಳಲ್ಲಿ ಕುಡಿದು ಮರ, ಬಂಡೆಗಳಲ್ಲಿ ನಿದ್ದೆ ಹೋಗುವುದು ಸಾಮಾನ್ಯ. ಅದನ್ನು ತಡೆಯುವುದೂ ಅರಣ್ಯ ಇಲಾಖೆಗೆ ಸವಾಲಾಗಿದೆ.
ನೀರು ಕುಡಿಯಲು, ನದಿಯಂಚಿನ ಮೇವಿಗೆ ಆನೆಗಳು ಸೇರಿದಂತೆ ಕಾಡುಪ್ರಾಣಿಗಳು ಬರುತ್ತಿದ್ದು, ಅವುಗಳಿಂದ ಪ್ರಾಣಹಾನಿಯಾಗುವ ಆತಂಕವಿದೆ. ಬಾಟಲ್‌ಗಳನ್ನು ವನ್ಯಜೀವಿಗಳು ಓಡಾಡುವ ಜಾಗದಲ್ಲಿಯೇ ಒಡೆಯಲಾಗುತ್ತಿದೆ. ಜನ ಹಾಗೂ ಕಾಡುಪ್ರಾಣಿಗಳಿಗೆ ಅಪಾಯ ಸಂಭವಿಸುವುದರಿಂದ ಬಾರ್‌ಗಳನ್ನು ಮುಚ್ಚಬೇಕು ಎಂದು ಕೋರಿ ಅರಣ್ಯ ಇಲಾಖೆಯ ಡಿಸಿಎಫ್ ಅವರು ಜಿಲ್ಲಾಧಿಕಾರಿ ಹಾಗೂ ಅಬಕಾರಿ ಜಿಲ್ಲಾಧಿಕಾರಿಗೆ ಪತ್ರವನ್ನೂ ಬರೆದಿದ್ದಾರೆ.
ನೀರಿನಲ್ಲಿ ತೇಲುತ್ತಿರುವ ಮದ್ಯದ ಪಾಕೆಟ್‌ಗಳು
ನದಿ ಕಡೆ ಸುಳಿವಂತಿಲ್ಲ
ಬಾವಲಿಯಲ್ಲಿ ದಶಕಗಳ ಹಿಂದೆಯೇ ಜಲ್ಲಿಕಲ್ಲು ಕಾರ್ಖಾನೆ ಮುಚ್ಚಿದ್ದು, ಅದೇ ಹಾಡಿ ಮಕ್ಕಳ ಆಟದ ಮೈದಾನವಾಗಿತ್ತು. ಈಗ ಮದ್ಯಪ್ರಿಯರ ತಾಣವಾಗಿದೆ. ಈ ಮೈದಾನ ದಾಟಿಯೇ ಬಾವಲಿ, ಕಡೆಗದ್ದೆ ಗ್ರಾಮಸ್ಥರು ಸ್ನಾನ, ಬಟ್ಟೆ ಒಗೆಯಲೆಂದು ಕಬಿನಿ ನದಿಗೆ ತೆರಳಬೇಕು. ಮಳೆಗಾಲದಲ್ಲಿ ಬಾವಿಗಳಲ್ಲಿ ನೀರು ಇರುವುದರಿಂದ ನದಿ ಕಡೆ ಯಾರೂ ಬರುವುದಿಲ್ಲ. ಬೇಸಿಗೆಯಲ್ಲಿ ನದಿಗೆ ಬಂದರೆ, ಕುಡಿದವರಿಂದ ಕಿರುಕುಳ ಅನುಭವಿಸಬೇಕು.
‘ಕುಡಿಯಲು ಬಂದವರು ಬೆತ್ತಲೆಯಾಗಿ ಸ್ನಾನ ಮಾಡುತ್ತಾರೆ. ಕುಣಿಯುತ್ತಾ ರೇಗಿಸುತ್ತಾರೆ. ಈ ಬೇಸಿಗೆಯಲ್ಲೂ ಮೂರ್ನಾಲ್ಕು ಮಂದಿ ಬಟ್ಟೆ ಹಾಕಿಕೊಳ್ಳದೇ ಚುಡಾಯಿಸಲು ಬಂದಿದ್ದರು. ಹುಡುಗರೆಲ್ಲ ಸೇರಿಕೊಂಡು ಅಟ್ಟಿದೆವು. ತಾಯಿ, ಅಕ್ಕ– ತಂಗಿಯರನ್ನು ನಾವೂ ಹೋಗಿ ಕಾಯಬೇಕು. ಏನು ಮಾಡೋದು’ ಎಂದು ಬಾವಲಿ ನಿವಾಸಿ ಮನೋಜ್ ಅಳಲು ತೋಡಿಕೊಂಡರು.
‘ಕೇರಳದಿಂದ ಬರುವ ಯುವಕರು ಆಟದ ಮೈದಾನದಲ್ಲಿ ಮದ್ಯದ ಜೊತೆಗೆ ಗಾಂಜಾ ಸೇವಿಸುತ್ತಾರೆ. ಎಂಡಿಎಂ ಡ್ರಗ್ಸ್ ಹಾವಳಿಯೂ ಇಲ್ಲಿದೆ’ ಎಂದು ಮನೋಜ್, ಅಲ್ಲಿಯೇ ಬಿದ್ದಿದ್ದ ಎಂಡಿಎಂ ಡ್ರಗ್ಸ್ ಸೇವನೆಗೆ ಬಳಸುವ ಕಾಗದಗಳನ್ನು ತೋರಿಸಿದರು.
‘ಬಾವಲಿಯಲ್ಲಿ 50 ಮನೆಗಳಿದ್ದು, 300ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಹಾಡಿಗೆ ತೆರಳುವ ರಸ್ತೆಯಲ್ಲಿಯೇ ಬಾರ್ ತೆರೆದದ್ದರಿಂದ ಅಲ್ಲಿದ್ದವರೆಲ್ಲ ಬೇರೆ ಕಡೆ ಮನೆ ಕಟ್ಟಿಕೊಂಡರು. ಮದ್ಯ ಸೇವನೆ ಮಾಡಿದವರು ಹಾಡಿಗಳ ಒಳಗೆ ಬಂದು ಅಲ್ಲಿಯೇ ಬಿದ್ದಿರುತ್ತಾರೆ. ಹೆಂಗಸರು, ಮಕ್ಕಳು ಭಯದಿಂದಲೇ ರಾತ್ರಿ ಕಳೆಯಬೇಕು’ ಎಂದರು.
ನದಿ ಪಕ್ಕದಲ್ಲೇ ಬಾರ್!
‘ಡಿ.ಬಿ.ಕುಪ್ಪೆಯಲ್ಲಿ ಕಬಿನಿ ನದಿ ದಡದಲ್ಲಿಯೇ ಬಾರ್ ತೆರೆಯಲಾಗಿದ್ದು, ಪಕ್ಕದಲ್ಲಿಯೇ ಅಂಚೆ ಕಚೇರಿ, ಶಾಲೆ, ದೇವಸ್ಥಾನ, ಮಸೀದಿ ಇವೆ. ಕೇರಳದ ಪುಲ್ಪಳ್ಳಿಯಿಂದ ದೋಣಿಗಳಲ್ಲಿ ಇಲ್ಲಿನ ಬಾರ್‌ಗೆ ಜನ ಬರುತ್ತಿದ್ದಾರೆ. ಇಲ್ಲಿ ಮದ್ಯ ಕೊಂಡವರು ಪಕ್ಕದಲ್ಲಿಯೇ ಇರುವ ಅರಣ್ಯದೊಳಗೆ ಹೋಗಿ ಕುಡಿಯುತ್ತಾರೆ. ತಿಮ್ಮನಹೊಸಹಳ್ಳಿ ಬಾರ್‌ನಲ್ಲಿ ಕುಡಿದು ಹೋಗುತ್ತಿದ್ದವರ ಮೇಲೆ ಆನೆ ದಾಳಿ ಮಾಡಿತ್ತು. ಕುಡಿದ ಮತ್ತಿನಲ್ಲೇ ಹೊಳೆ ಹಾಯಲು ಹೋಗಿ ನದಿ ಸೆಳೆತಕ್ಕೆ ಸಿಕ್ಕು ತೀರಿಕೊಂಡಿದ್ದಾರೆ’ ಎನ್ನುತ್ತಾರೆ ಸ್ಥಳೀಯರು.
‘ಪ್ರತಿ ತಿಂಗಳ ಮೊದಲ ದಿನ ಪ್ರತಿ ಬಾರ್‌ನಲ್ಲೂ ಅಂದಾಜು ₹ 10 ಲಕ್ಷ ಮದ್ಯ ವ್ಯಾಪಾರವಾಗುತ್ತದೆ. ಸ್ಥಳೀಯರ ಬದುಕು, ಜೀವಕ್ಕೆ ಬೆಲೆ ಕೊಡದೆ ಲಾಭಕ್ಕಾಗಿ ಮಾಡುತ್ತಾರೆ. ಮದ್ಯದ ಚಟಕ್ಕೆ ಬಿದ್ದು, ಯಾವುದೇ ಹಾಡಿಗಳಲ್ಲಿ ಪದವಿ ಓದಿದವರು ಇಲ್ಲವೇ ಇಲ್ಲ’ ಎಂದು ನಾಗೇಶ್ ಬೇಸರದಿಂದ ಹೇಳಿದರು.
‘ಕೇರಳದ ಯುವಕರು ಮದ್ಯ ಕೊಂಡು, ಗಾಂಜಾ ಸೇವಿಸಿ ಅರಣ್ಯಗಳಲ್ಲಿ ಡಿ.ಜೆ ಹಾಕಿಕೊಂಡು ಕುಣಿಯುತ್ತಾರೆ. ಆದರೆ, ನಮ್ಮ ಮನೆಯಲ್ಲಿ ಹಬ್ಬ ನಡೆದರೆ ಮೈಕ್ ಹಾಕಲು ಅರಣ್ಯ ಇಲಾಖೆಯವರು ಬಿಡುವುದಿಲ್ಲ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧವಿರುವುದರಿಂದ ಬಾವಲಿ ಚೆಕ್‌ಪೋಸ್ಟ್ ಅನ್ನು 6 ಗಂಟೆಗೆ ಮುಚ್ಚಬೇಕು. ಆದರೆ, ರಾತ್ರಿ 9.30 ಆದರೂ ಮದ್ಯಪ್ರಿಯರಿಗೆ ತೆರೆದಿರುತ್ತದೆ’ ಎಂದು ಆರೋಪಿಸಿದರು.
ಡಿ.ಬಿ.ಕುಪ್ಪೆಯಲ್ಲಿ ನದಿ ಪಕ್ಕದಲ್ಲಿಯೇ ತೆರೆಯಲಾಗಿರುವ ಬಾರ್
ಕೇರಳದ ಬಸ್!
ಮಾನಂದವಾಡಿಯಿಂದ ಕೇರಳದವರೇ ಬಸ್ ಬಿಟ್ಟಿದ್ದು, ಅದು ಬೆಳಿಗ್ಗೆ 7.30, 11.30 ಹಾಗೂ ಸಂಜೆ 5.30ಕ್ಕೆ ಚೆಕ್‌ಪೋಸ್ಟ್‌ವರೆಗೂ ಬರುತ್ತದೆ. ಇಲ್ಲಿಂದ ಅಲ್ಲಿಗೆ ಯಾರೂ ಹೋಗುವುದಿಲ್ಲ. ಕೆಲಸಕ್ಕೆ ಹೋಗಬೇಕೆಂದರೆ ಸ್ಥಳೀಯರು ದೋಣಿಯಲ್ಲಿಯೇ ಹೋಗುತ್ತಾರೆ. ಜೀಪ್‌ಗಳೂ, ಬಾಡಿಗೆ ವಾಹನಗಳು ಚೆಕ್‌ಪೋಸ್ಟ್‌ನಿಂದ ಮಚ್ಚೂರುವರೆಗಿನ ಬಾರ್‌ಗಳಿಗೆ ಗಿರಾಕಿಗಳನ್ನು ಕರೆದುಕೊಂಡು ಹೋಗುತ್ತಿವೆ.
‘ಬಾವಲಿ ಚೆಕ್‌ಪೋಸ್ಟ್ ಸಮೀಪದ ಮದ್ಯದಂಗಡಿ ಹತ್ತಿರವೇ ಇರುವ ಬಿದಿರು ಮೆಳೆಗಳ ಮೇವಿಗೆ ಆನೆಗಳು ಬರುತ್ತವೆ. ಆ.21ರ ಸಂಜೆಯೂ ಆನೆ ಬಂದಿತ್ತು. ಅದೇ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದವರು ಹೆದರಿ ನಿಂತರೆ, ಕುಡಿಯುವವವರು ಆನೆಗಳನ್ನೇ ಅಟ್ಟಲು ಹೋಗಿದ್ದರು’ ಎಂದು ಜಯಮ್ಮ ಆತಂಕ ವ್ಯಕ್ತಪಡಿಸಿದರು.
‘ಬಾವಲಿ ಸುತ್ತಮುತ್ತ ನಕ್ಸಲ್ ಚಟುವಟಿಕೆ ಪ್ರದೇಶವೆಂದು ಗುರುತಿಸಲಾಗಿದ್ದು, ಹಾಡಿ ಪಕ್ಕವೇ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವೂ ಇದೆ. 2014ರಲ್ಲಿಯೇ ಬಾರ್ ಮತ್ತು ರೆಸ್ಟೋರೆಂಟ್ ತೆಗೆಯದಂತೆ ನಿರ್ಬಂಧಿತ ಪ್ರದೇಶವೆಂದು ಆಗಿನ ಜಿಲ್ಲಾಧಿಕಾರಿ ಸಿ.ಶಿಖಾ ಆದೇಶ ಹೊರಡಿಸಿದ್ದರು. ಆದರೀಗ ಚೆಕ್‌ಪೋಸ್ಟ್ ಪಕ್ಕದಲ್ಲಿಯೇ ರೆಸಾರ್ಟ್ ನಿರ್ಮಿಸಲಾಗಿದೆ. ಅದಕ್ಕೆ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆಯಲಾಗಿದೆ. ಅಬಕಾರಿ ಇಲಾಖೆಯಿಂದ ಸಿಎಲ್–7 ಪರವಾನಗಿ ಪಡೆದು, ನಿಯಮ ಉಲ್ಲಂಘಿಸಿ ಮದ್ಯ ಅಕ್ರಮ ಮಾರಾಟ ನಡೆಸಿದ್ದಾರೆ’ ಎಂದು ಅವರು ದೂರಿದರು.
ಇಂಥ ಹಲವು ದೂರುಗಳಿದ್ದರೂ, ಕ್ರಮವಾಗದೇ ಇರುವುದರಿಂದ ಸ್ಥಳೀಯರ ಬದುಕು ಆತಂಕ, ಹಿಂಜರಿಕೆ, ಭಯದ ನಡುವೆಯೇ ನಡೆಯುವಂತಾಗಿದೆ.
***
ಮಚ್ಚೂರಿಗೆ ಕರೆತರುತ್ತಿರುವ ದೋಣಿ
ಯಾರು ಏನೆನ್ನುತ್ತಾರೆ?
‘ನಮ್ಗೆ ಕುಡಿಯವ್ರದ್ದೇ ಹಿಂಸೆ’
‘ಮೂರು ವರ್ಷದ ಹಿಂದೆ ರೆಸಾರ್ಟ್ ಪಕ್ಕದ ಜಮೀನಿನ ತೋಟದ ಬಳಿ ಮದ್ಯ ಕುಡಿದು ಅಡ್ಡಾಡುತ್ತಿದ್ದ ಕೇರಳದ ತಿರುಶಲ್ಲೇರಿಯವನನ್ನು ಆನೆ ತುಳಿದು ಹಾಕಿತ್ತು. ಬೇಸಿಗೆಯಲ್ಲಿ 6 ಗಂಟೆಗೆ ಈ ದಾರಿಯಲ್ಲಿ ಓಡಾಡುತ್ತವೆ. ಭತ್ತ ರಾಗಿ ತಿನ್ನಲೂ ಬರುತ್ತವೆ. ಕಾಡು ಪ್ರಾಣಿಗಳನ್ನು ತಡೆಯಲು ಏನಾದರೂ ಮಾಡಬಹುದು. ಕುಡಿಯವ್ರದ್ದೆ ಹಿಂಸೆ ನಮ್ಗೆ
–ಜಯಮ್ಮ ಬಾವಲಿ ನಿವಾಸಿ
–––
‘ಮಾನವೀಯತೆ ಇಲ್ಲವಾಗಿದೆ’
ಒಂದೆಡೆ ಗಿರಿಜನರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಮತ್ತೊಂದೆಡೆ ಅವರ ಕುಟುಂಬ ನಾಶ ಮಾಡುವ ಕೆಲಸಗಳೂ ನಡೆದಿವೆ. ಹಾಡಿಗಳ ಯುವಕರು ಕೆಲಸಕ್ಕೆ ಹೋಗದೆ ಮದ್ಯದಂಗಡಿಗಳಲ್ಲಿರುತ್ತಾರೆ. ಅದರಿಂದ ಬುಡಕಟ್ಟು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೀಡಾಗಿವೆ. ಮಹಿಳೆಯರು ಮಕ್ಕಳೊಂದಿಗೆ ನಿರಂತರ ಧರಣಿ ಪ್ರತಿಭಟನೆ ನಡೆಸಿದರೂ ಆಡಳಿತ ನಡೆಸುವವರಿಗೆ ಮಾನವೀಯತೆ ಇಲ್ಲವಾಗಿದೆ. ಮದ್ಯ ಕೊಂಡು ಅರಣ್ಯ ಪ್ರದೇಶದಲ್ಲಿ ಸೇವನೆ ಮಾಡುವವರಿಗೆ ವನ್ಯಜೀವಿಗಳಿಂದ ಅಪಾಯವೂ ಇದೆ
– ಜೋಸೆಫ್ ಹೂವರ್ ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ
––––
‘ಪರಿಶೀಲನೆ ನಡೆಸಿರುವೆ’
ಅರಣ್ಯ ಪ್ರದೇಶದಲ್ಲಿ ಮದ್ಯ ಸೇವನೆ ಮಾಡುವುದು ಹಾಗೂ ಅತಿಕ್ರಮ ಪ್ರವೇಶ ನಿಷಿದ್ಧ. ಬಾವಲಿ ಡಿ.ಬಿ.ಕುಪ್ಪೆ ಸೇರಿದಂತೆ ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದೇನೆ. ಕೆಲ ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದು ನಾನು ಬರುವುದಕ್ಕೂ ಮೊದಲೇ ಎಲ್ಲ ಬಾರ್‌ಗಳನ್ನು ರದ್ದುಗೊಳಿಸುವಂತೆ ಅಬಕಾರಿ ಇಲಾಖೆ ಹಾಗೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕುಡಿದವರು ಕಾಡಿಗೆ ಹೋಗದಂತೆ ಅರಣ್ಯ ಗಸ್ತು ಸಿಬ್ಬಂದಿ ನಿಯೋಜಿಸಲಾಗಿದೆ.
–ಪಿ.ಎ.ಸೀಮಾ ನಿರ್ದೇಶಕಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ
‘ವನ್ಯಜೀವಿಗಳಿಗೆ ತೊಂದರೆ: ಕ್ರಮ’
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂಚಿನ ಬಾವಲಿ ಹಾಗೂ ಇತರ ಹಾಡಿಗಳಲ್ಲಿ ಮದ್ಯದಂಗಡಿಗಳಲ್ಲಿ ಮದ್ಯಕೊಂಡವರು ಅರಣ್ಯದಲ್ಲಿ ಸೇವನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಮಾನವ ಹಾಗೂ ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುತ್ತಿದ್ದು ಕ್ರಮವಹಿಸಲಾಗುವುದು.
–ರಮೇಶ್ ಕುಮಾರ್ ನಿರ್ದೇಶಕ, ಹುಲಿ ಯೋಜನೆ
ಅಬಕಾರಿ ಜಿಲ್ಲಾಧಿಕಾರಿ, ಮೈಸೂರು ಜಿಲ್ಲಾಧಿಕಾರಿ ಹೇಳುವುದೇನು?
‘ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ’
ಬಾವಲಿಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಬಾರ್‌ನ ಪರವಾನಗಿ 2014ರಲ್ಲೇ ರದ್ದಾಗಿತ್ತು. ಅರಣ್ಯ ಇಲಾಖೆ ನಿರಕ್ಷೇಪಣಾ ಪತ್ರ ನೀಡಿದ್ದರಿಂದ 2023ರಲ್ಲಿ ಮತ್ತೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. 6 ತಿಂಗಳ ನಂತರ ಪುನಃ ಪರವಾನಗಿ ನೀಡದಂತೆ ಅರಣ್ಯ ಇಲಾಖೆ ನಮಗೆ ಪತ್ರ ಬರೆದಿದ್ದು ಅದನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೆವು. ವ್ಯತಿರಿಕ್ತ ಅಭಿಪ್ರಾಯವನ್ನು ಅರಣ್ಯ ಇಲಾಖೆ ವ್ಯಕ್ತಪಡಿಸಿದ್ದರಿಂದ ಸ್ಪಷ್ಟವಾದ ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ನಾವೂ ಅರಣ್ಯ ಇಲಾಖೆಯ ಉತ್ತರಕ್ಕೆ ಕಾಯುತ್ತಿದ್ದೇವೆ. ಡಿ.ಬಿ.ಕುಪ್ಪೆ ತಿಮ್ಮನಹೊಸಳ್ಳಿ ಹಾಗೂ ಮಚ್ಚೂರಿನ ಬಾರ್‌ಗಳನ್ನು ಸ್ಥಳಾಂತರಿಸಲು ಈಗಾಗಲೇ ಆದೇಶವಾಗಿದೆ. ಆದರದು ನ್ಯಾಯಾಲಯದ ವಿಚಾರಣೆಯಲ್ಲಿದೆ.
–ಮಹದೇವಿ ಬಾಯಿ, ಗ್ರಾಮಾಂತರ ಅಬಕಾರಿ ಜಿಲ್ಲಾಧಿಕಾರಿ
***
‘ತನಿಖೆ ನಡೆಸಿ ಕ್ರಮ ವಹಿಸುವೆ’
‘ಮದ್ಯದಂಗಡಿ ಮುಚ್ಚುವಂತೆ ಹಾಡಿ ನಿವಾಸಿಗಳು ನಡೆಸಿರುವ ಹೋರಾಟದ ಬಗ್ಗೆ ತಿಳಿದುಬಂದಿಲ್ಲ. ಇತ್ತೀಚೆಗೆ ಬಾವಲಿ ಕಡೆ ಹೋಗಿದ್ದಾಗಲೂ ಈ ವಿಷಯ ಗಮನಕ್ಕೆ ಬಂದಿಲ್ಲ. ಅಲ್ಲಿ ಮಾರಾಟ ಅಕ್ರಮವಾಗಿ ನಡೆಯುತ್ತಿದ್ದರೆ ಮಾಹಿತಿ ತರಿಸಿಕೊಳ್ಳುವೆ. ನಂತರ ತನಿಖೆ ನಡೆಸಿ ವರದಿ ಆಧರಿಸಿ ಕ್ರಮವಹಿಸುವೆ’
–ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾಧಿಕಾರಿ
ಸಕಲೇಶಪುರ ತಾಲ್ಲೂಕಿನ ಕಾಗಿನಹರೆ ಪ್ರವಾಸಿ ತಾಣದಲ್ಲಿ ಬಿಸಾಡಿದ್ದ ಮದ್ಯದ ಬಾಟಲಿ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛಗೊಳಿಸುತ್ತಿರುವ ಗ್ರಾಮಸ್ಥರು
ಶೆಟ್ಟಿಹಳ್ಳಿ ಅರಣ್ಯದಂಚಲ್ಲಿ ‘ಮೀನೂಟ’ದ ಗದ್ದಲ
ಶಿವಮೊಗ್ಗ: ಇಲ್ಲಿನ ಶಿವಮೊಗ್ಗ–ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿಯೇ ಹೆಜ್ಜೆ ಹೆಜ್ಜೆಗೂ ‘ಮೀನೂಟ’ದ ಹೋಟೆಲ್‌ಗಳಿವೆ. ಹೆಚ್ಚಿನ ಕಡೆ ಊಟದ ಜೊತೆಗೆ ಮದ್ಯ ಸೇವನೆಗೆ ಅಕ್ರಮ ಅವಕಾಶವಿದೆ. ಶಿವಮೊಗ್ಗ ಹೊರವಲಯದ ಹರಕೆರೆ ಗಾಜನೂರು ಸಕ್ರೆಬೈಲು ಮಂಡಗದ್ದೆ ನಡುವೆ ಹೆದ್ದಾರಿಯ ಆಸುಪಾಸು ಅಭಯಾರಣ್ಯದ ಬಫರ್ ವಲಯದಲ್ಲಿಯೇ ಈ ಹೋಟೆಲ್‌ಗಳು ಕೇಂದ್ರೀಕೃತ. ರಸ್ತೆಗಳ ಪಕ್ಕದಲ್ಲಿಯೇ ವಾಹನ ನಿಲ್ಲಿಸಿ ಮದ್ಯ ಸೇವನೆ ಮಾಡುತ್ತಾ ಅಬ್ಬರದ ಸಂಗೀತ ಕೇಳಿಕೊಂಡು ಪಾರ್ಟಿ ಕೂಡ ಮಾಡುತ್ತಾರೆ. ಇದು ಶೆಟ್ಟಿಹಳ್ಳಿ ಅಭಯಾರಣ್ಯದ ಪ್ರಾಣಿಗಳ ನಿರಾತಂಕ ಓಡಾಟಕ್ಕೆ ಹಿನ್ನೀರ ಪ್ರದೇಶಕ್ಕೆ ನೀರು ಕುಡಿಯಲು ಬರುವ ವನ್ಯಜೀವಿಗಳಿಗೆ ತೊಂದರೆಯಾಗಿದೆ.
ಮದ್ಯ ಸೇವಿಸಿ ಜಲಪಾತಗಳಲ್ಲಿ ಹುಚ್ಚಾಟ
ಚಿಕ್ಕಮಗಳೂರು: ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಬರುವ ಪ್ರವಾಸಿಗರು ಮದ್ಯ ಸೇವನೆ ಮಾಡಿ ಇತರ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಜಲಪಾತಗಳಲ್ಲಿ ಹುಚ್ಚಾಟ ನಡೆಸಿದ್ದಾರೆ. ಜಿಲ್ಲೆಯ ಮುಳ್ಳಯ್ಯನಗಿರಿ ಬಾಬಾಬುಡನ್ ಗಿರಿ ಭಾಗಕ್ಕೆ ಮದ್ಯ ಕೊಂಡೊಯ್ಯುವ ಪ್ರವಾಸಿಗರು ಎಲ್ಲೆಂದರಲ್ಲಿ ಸೇವನೆ ಮಾಡಿ ಮದ್ಯದ ಬಾಟಲಿ ಮತ್ತು ಪ್ಲಾಸ್ಟಿಕ್ ಬಾಟಲಿ ಬಿಸಾಡುತ್ತಿದ್ದರು. ಈಗ ಮೂರು ತಿಂಗಳಿಂದ ಈ ಭಾಗಕ್ಕೆ 2 ಲೀಟರ್ ತನಕ ಪ್ಲಾಸ್ಟಿಕ್ ಬಾಟಲಿ ಕೊಂಡೊಯ್ಯುವುದನ್ನು ಅರಣ್ಯ ಇಲಾಖೆ ನಿಷೇಧಿಸಿದೆ ಚೆಕ್‌ಪೋಸ್ಟ್‌ನಲ್ಲಿ ಎಲ್ಲಾ ವಾಹನ ಪರಿಶೀಲಿಸಲಾಗುತ್ತಿದೆ. ಮದ್ಯದ ಬಾಟಲಿಗಳಿದ್ದರೆ ಅವುಗಳನ್ನು ಲಾಕರ್‌ನಲ್ಲಿ ಇರಿಸಿ ವಾಪಸ್ ಬರುವಾಗ ಪಡೆಯಬಹುದಾದ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ಗಿರಿ ಭಾಗಕ್ಕೆ ಮಾತ್ರ ಸೀಮಿತ. ಮೂಡಿಗೆರೆ ತಾಲ್ಲೂಕಿನ ರಾಣಿಝರಿ ದೇವರಮನೆ ಕಳಸ ತಾಲ್ಲೂಕಿನ ಕ್ಯಾತನಮಕ್ಕಿ ಪ್ರವಾಸಿ ತಾಣಗಳಲ್ಲಿ ಮದ್ಯ ಸಾಗಣೆಗೆ ಕಡಿವಾಣವಿಲ್ಲ ಬಂಡಾಜೆ ಜಲಪಾತ ನೇತ್ರಾವತಿ ಪೀಕ್ ಎತ್ತಿನಭುಜ ಕೆಮ್ಮಣ್ಣುಗುಂಡಿ ಝಡ್ ಪಾಯಿಂಟ್‌ಗಳಿಗೆ ಚಾರಣ ಹೋಗುವವರಿಗೂ ಮದ್ಯ ಕೊಂಡೊಯ್ಯಬಾರದೆಂಬ ನಿರ್ಬಂಧವಿಲ್ಲ. ರೆಸಾರ್ಟ್‌ಗಳಲ್ಲಿ ಅತಿಥಿಗಳಿಗೆ ಮದ್ಯ ಮಾರಾಟಕ್ಕೆ ಅವಕಾಶ ಇದೆ. ರೆಸಾರ್ಟ್‌ಗಳಲ್ಲಿ ಮದ್ಯದ ದರ ದುಬಾರಿಯಾದ್ದರಿಂದ ಸ್ಥಳೀಯರು ಅಲ್ಲಿಂದ ಮದ್ಯ ಖರೀದಿಸುವ ಗೋಜಿಗೆ ಹೋಗುತ್ತಿಲ್ಲ. ಹೋಮ್ ಸ್ಟೇಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಆದರೆ ಪ್ರವಾಸಿಗರೇ ತಂದು ಸೇವನೆ ಮಾಡಲು ಅವಕಾಶ ನೀಡಲಾಗುತ್ತಿದೆ.
ವಿಫಲವಾದ ಹೋರಾಟ
ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಗ್ರಾಮದಲ್ಲಿ ಮದ್ಯದಂಗಡಿಯೊಂದಿತ್ತು. ಆದರೆ ಹಾಡಿಯ ಸುತ್ತಮತ್ತ ಇರಲಿಲ್ಲ. 5 ವರ್ಷದ ಹಿಂದೆ ಹಾಡಿಗಳಿಗೆ ಕೂಗಳತೆ ದೂರದಲ್ಲೆ ಮದ್ಯದಂಗಡಿಯೊಂದನ್ನು ತೆರೆದಾಗ ಪ್ರತಿಭಟನೆ ನಡೆದಿದ್ದವು. ಹಾಡಿ ಜನ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ ಅದು ವಿಫಲವಾಯಿತು. ಕೇರಳದ ತೋಳ್ಪಟ್ಟಿಯಿಂದ ಕುಟ್ಟಕ್ಕೆ ಕೇರಳದ ಪಾಣತ್ತೂರಿನಿಂದ ಕರಿಕೆಗೆ ಹೆಚ್ಚಿನ ಜನ ಬಂದು ಮದ್ಯ ಖರೀದಿಸುತ್ತಿದ್ದಾರೆ. ಇಲ್ಲಿನ ಮದ್ಯದಂಗಡಿಗಳಿಗೆ ಸ್ಥಳೀಯರಿಗಿಂತ ಕೇರಳದವರೇ ಹೆಚ್ಚಿನ ಗ್ರಾಹಕರು. ಕೊಡಗಿನ ಹಾಡಿ ಜನರಲ್ಲಿ ಪುರುಷರು ಹೆಚ್ಚು ಎಂದರೆ 40 ವರ್ಷ ಬದುಕುತ್ತಿದ್ದು ಮದ್ಯವ್ಯಸನದಿಂದ ಬರುವ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಮಹಿಳೆಯರೂ ಮದ್ಯವ್ಯಸನದಿಂದ ಮಧ್ಯ ವಯಸ್ಸಿನಲ್ಲೇ ಮೃತಪಡುತ್ತಿದ್ದಾರೆ. ಅನಾಥರಾದ ಮಕ್ಕಳು ಮದ್ಯಕ್ಕೆ ದಾಸರಾಗುತ್ತಿದ್ದಾರೆ. ಬಹಳಷ್ಟು ಹಾಡಿ ಜನರು ಸರ್ಕಾರ ತಮಗೆ ನೀಡುವ ಪೌಷ್ಠಿಕ ಆಹಾರ ಹಣಕ್ಕೆ ಮಾರಾಟ ಮಾಡಿ ಬಂದ ಹಣದಲ್ಲಿ ಮದ್ಯ ಸೇವಿಸುತ್ತಿದ್ದಾರೆ. ಜೇನುಕುರುಬರ ಸಂಖ್ಯೆ ಅಧಿಕವಾಗಿರುವ ಚೊಟ್ಟೆಪಾರಿಯಲ್ಲಿ ಗುಡಿಸಲಿನಲ್ಲಿ ಸರ್ಕಾರದ ಎಂಎಸ್‌ಐಎಲ್ ಸಂಸ್ಥೆಯೇ ಮಳಿಗೆ ತೆರೆದಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿರುವ ಅರ್ಧ ನಾರೀಪುರ ಗುಂಡಿಮಾಳ ಹಿರಿಯಂಬಲ ಕತ್ತೆಕಾಲು ಪೋಡು ಜೀರಿಗೆ ಗದ್ದೆ ಉದ್ದಟಿ ಮಾವತ್ತೂರು ಅಂಡೆಕುರುಬನದೊಡ್ಡಿ ಹಾಡಿಗಳ ಗೂಡಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟವಾಗುತ್ತಿದೆ.
––––
ಪರಿಕಲ್ಪನೆ: ಜಿ.ಡಿ. ಯತೀಶ್‌ಕುಮಾರ್
ಪೂರಕ ಮಾಹಿತಿ: ಕೆ.ಎಸ್.ಗಿರೀಶ, ಚಿದಂಬರ ಪ್ರಸಾದ, ಬಾಲಚಂದ್ರ ಎಚ್., ವೆಂಕಟೇಶ ಜಿ.ಎಚ್., ಎಸ್.ಕೆ.ವಿಜಯಕುಮಾರ್.
ಗ್ರಾಫಿಕ್ಸ್ ಚಿತ್ರ: ಎಂ.ಎಸ್.ಶ್ರೀಕಂಠಮೂರ್ತಿ
****
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.