ADVERTISEMENT

ಲೆಕ್ಕವಿಲ್ಲದಷ್ಟು ಗರ್ಭಪಾತ ಮಾಡಿಸಿದ್ದೇನೆಂದ ವೈದ್ಯೆ

ಗುರು ಪಿ.ಎಸ್‌
Published 13 ಜುಲೈ 2019, 20:00 IST
Last Updated 13 ಜುಲೈ 2019, 20:00 IST
   

ಬೆಂಗಳೂರು: ‘ನಲವತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ಅದೆಷ್ಟು ಭ್ರೂಣಲಿಂಗ ಪತ್ತೆ ಮಾಡಿದ್ದೇನೋ, ಅದೆಷ್ಟು ಗರ್ಭಪಾತ ಮಾಡಿಸಿದ್ದೇನೋ ಲೆಕ್ಕವೇ ಇಲ್ಲ’ ಎಂದು ಮಾಧ್ಯಮಗಳ ಕ್ಯಾಮೆರಾ ಎದುರು ಯಾವ ಹಿಂಜರಿಕೆಯೂ ಇಲ್ಲದೆ ಹೇಳಿಕೊಂಡಿದ್ದರು ಆ ವೈದ್ಯೆ!

ಸತತ ದೂರುಗಳ ಬಂದ ಕಾರಣ, ಗಾಯತ್ರಿನಗರದ ಕ್ಲಿನಿಕ್‌ ಮೇಲೆ ದಾಳಿ ಮಾಡಿದ್ದಪಿಸಿ – ಪಿಎನ್‌ಡಿಟಿ ಸಮಿತಿ ಸದಸ್ಯರ ಮೇಲೆ ರೌಡಿಗಳಿಂದ ದಾಳಿ ಮಾಡಿಸುವ ಪ್ರಯತ್ನವೂ ನಡೆದಿತ್ತು. ಕೊನೆಗೆ, ಪೊಲೀಸ್‌ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಬೇಕಾಯಿತು ಎಂದು ನೆನಪು ಮಾಡಿಕೊಳ್ಳುತ್ತಾರೆ ಡಾ. ವಸುಂಧರಾ ಭೂಪತಿ. 2010ರಲ್ಲಿ ವಸುಂಧರಾ, ಪಿಸಿ–ಪಿಎನ್‌ಡಿಟಿ ಸಮಿತಿ ಸದಸ್ಯೆಯಾಗಿದ್ದರು.

ಸುಶಿಕ್ಷಿತರ ನಗರ ಎಂದೆನಿಸಿಕೊಂಡ ಬೆಂಗಳೂರಿನಲ್ಲಿ ‘ಸುಶಿಕ್ಷಿತ’ ರೀತಿ ಯಲ್ಲಿಯೇ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿತ್ತು ಮತ್ತು ನಡೆಯುತ್ತಿದೆ. ಸ್ಕ್ಯಾನಿಂಗ್‌ ಸೆಂಟರ್‌ ಮತ್ತು ನರ್ಸಿಂಗ್‌ ಹೋಂಗಳಲ್ಲಿ ಸಂಕೇತ ಭಾಷೆಯ ಮೂಲಕ ‘ವ್ಯವಹಾರ’ ನಡೆಯುತ್ತದೆ. ಮಾತು ಅಥವಾ ಬರವಣಿಗೆಯ ಸಾಕ್ಷ್ಯಗಳು ಸಿಗದಂತೆ ಮಾಡಲು ಈ ವಿಧಾನ ಅನುಸರಿಸಲಾಗುತ್ತಿದೆ.

ADVERTISEMENT

‘ಆ’ ನರ್ಸಿಂಗ್‌ ಹೋಂನಲ್ಲಿ ಶಿವ ಮತ್ತು ಪಾರ್ವತಿಯ ಫೋಟೊ ಹಾಕಲಾಗಿದೆ. ಸ್ಕ್ಯಾನಿಂಗ್‌ ನಂತರ, ಆ ವೈದ್ಯರು ಬಂದು ಶಿವನ ಫೋಟೊದತ್ತ ಕೈಮುಗಿದರೆ ‘ಗಂಡು’, ಪಾರ್ವತಿಯತ್ತ ತಿರುಗಿದರೆ ‘ಹೆಣ್ಣು’ ಎಂದು ಅರ್ಥ ಮಾಡಿಕೊಳ್ಳುತ್ತಾರೆ ಆ ದಂಪತಿ!. ಮತ್ತೊಂದು ಕ್ಲಿನಿಕ್‌ನಲ್ಲಿ ‘ಈ ಪಾತ್ರವನ್ನು’ ಆಯಾಗಳು ನಿರ್ವಹಿಸುತ್ತಿದ್ದರು. ಸ್ಕ್ಯಾನಿಂಗ್‌ ನಂತರ, ಹೊರಗೆ ಬಂದು ‘ಕೆಟ್ಟದ್ದು’ ಅಥವಾ ‘ಒಳ್ಳೆಯದು’ ಎಂದು ಆಯಾ ಹೇಳಿದರೆ, ದಂಪತಿಗೆ ‘ಸಂದೇಶ’ ಸಿಗುತ್ತಿತ್ತು. ಮತ್ತೊಂದು ಕ್ಲಿನಿಕ್‌ನ ವೈದ್ಯರು, ಆ ದಂಪತಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿ, ಗಂಡು ಮಗು ಆಗುವುದಿದ್ದರೆ ಸಕ್ಕರೆಯಿರುವ ಕಾಫಿ, ಹೆಣ್ಣಾಗಿದ್ದರೆ ಸಕ್ಕರೆಯಿಲ್ಲದ ಕಾಫಿ ಕುಡಿಸುತ್ತಿದ್ದರು.

ಹೀಗೆ, ₹500 ಸ್ಕ್ಯಾನಿಂಗ್‌ಗೆ ₹20 ಸಾವಿರ ಕೊಟ್ಟಾದರೂ, ಭ್ರೂಣಲಿಂಗ ಪತ್ತೆ ಮಾಡಿಸಿದ ಅನೇಕ ನಿದರ್ಶನಗಳು ಬೆಂಗಳೂರಿನಲ್ಲಿ ಸಿಗುತ್ತವೆ. ‘ಲಿಂಗ ಪತ್ತೆ ಮಾಡಿಸಲೇಬೇಕು ಎಂದು ಬಯಸುವ ದಂಪತಿ ದೂರು ನೀಡಲು ಹೋಗುವುದಿಲ್ಲ. ಸುಲಭವಾಗಿ ಹಣ ಸಿಗುತ್ತದೆಯಾದ್ದರಿಂದ ಕೆಲವು ವೈದ್ಯರು ಇಂತಹ ಕೃತ್ಯದಲ್ಲಿ ತೊಡಗುತ್ತಾರೆ’ ಎಂದು ಹೇಳುತ್ತಾರೆ ವಸುಂಧರಾ ಭೂಪತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.