ಮೈಸೂರ್ ಪಾಕ್
ಮೈಸೂರು ಎಂದ ಕೂಡಲೇ ನಮ್ಮ ತಲೆಗೆ ಥಟ್ ಅಂತ ನೆನಪಾಗುವ ಖಾದ್ಯ ಅಂದರೆ ‘ಮೈಸೂರ್ ಪಾಕ್’. ಮೈಸೂರ್ ಪಾಕ್ ವಿಶ್ವದ ಅತ್ಯುತ್ತಮ 50 ಸಿಹಿತಿಂಡಿಗಳಲ್ಲಿ 14ನೇ ಸ್ಥಾನ ಪಡೆದಿದೆ.
ದಕ್ಷಿಣ ಭಾರತದ ಪ್ರಸಿದ್ಧ ಸಿಹಿ ತಿಂಡಿಯಾಗಿರುವ ಮೈಸೂರ್ ಪಾಕ್ ಅನ್ನು ಒಂದು 1 ಕಪ್ ಕಡಲೆ ಹಿಟ್ಟಿನಲ್ಲಿ ರುಚಿಕರವಾಗಿ ಮನೆಯಲ್ಲಿ ಹೇಗೆ ಮಾಡಬಹುದು ಎಂದು ತಿಳಿಯೋಣ.
ಮೈಸೂರ್ ಪಾಕ್ ಮಾಡಲು ಬೇಕಾಗುವ ಸಾಮಗ್ರಿಗಳು
ಕಡಲೆ ಹಿಟ್ಟು: 1 ಕಪ್
ತುಪ್ಪ: ಅಗತ್ಯಕ್ಕೆ ಬೇಕಾದಷ್ಟು
ಬೆಲ್ಲ: 1 ಅಚ್ಚು
ಹಾಲು: ಅಗತ್ಯಕ್ಕೆ ಬೇಕಾದಷ್ಟು
ನೀರು: ಅಗತ್ಯಕ್ಕೆ ಬೇಕಾದಷ್ಟು
ಮೈಸೂರ್ ಪಾಕ್ ಮಾಡುವ ವಿಧಾನ
ಮೊದಲು ಒಂದು ಬಾಣಲೆಯಲ್ಲಿ ಕಡಲೆ ಹಿಟ್ಟನ್ನು ಜರಡಿ ಮಾಡಿಕೊಳ್ಳಿ. ಬಳಿಕ ಕಡಿಮೆ ಉರಿಯಲ್ಲಿ ತುಪ್ಪವಿಲ್ಲದೆ ಸುವಾಸನೆ ಬರುವವರೆಗೆ ಹುರಿದುಕೊಳ್ಳಿ. ನಂತರ ಹುರಿದ ಕಡಲೆ ಹಿಟ್ಟನ್ನು ತಣ್ಣಗಾಗಲು ಬಿಡಿ. ಬಳಿಕ ಕಡಲೆ ಹಿಟ್ಟಿನ ಜೊತೆಗೆ ತುಪ್ಪವನ್ನು ಸೇರಿಸಿ ನಿಧಾನವಾಗಿ ಕಲಸಿ.
ಗಮನಿಸಿ: ಹಿಟ್ಟನ್ನು ಉಂಡೆಗಳಾಗದಂತೆ ನೋಡಿಕೊಳ್ಳಿ.
ಮತ್ತೊಂದು ಬಾಣಲೆಯಲ್ಲಿ ಪಾಕ ತಯಾರಿಸಿಕೊಳ್ಳಿ. ಬೆಲ್ಲದ ಜೊತೆಗೆ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕರಗಿಸಿ.
ಗಮನಿಸಿ: ಪಾಕವು ಅತಿಯಾಗಿ ಗಟ್ಟಿಯಾಗದಂತೆ ನೋಡಿಕೊಳ್ಳಿ.
ಈಗ ಹುರಿದ ಕಡಲೆ ಹಿಟ್ಟಿನ ಜೊತೆಗೆ ತುಪ್ಪವನ್ನು ಸೇರಿಸಿ ಇಟ್ಟುಕೊಂಡ ಬಾಣಲೆಗೆ ಬೆಲ್ಲದ ಪಾಕವನ್ನು ನಿಧಾನವಾಗಿ ಸೇರಿಸಿ, ಉಂಡೆಗಳಾಗದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಹೀಗೆ ಮಿಶ್ರಣ ಮಾಡಿದ ನಂತರ ಒಂದು ತಟ್ಟೆಗೆ ಮತ್ತೆ ತುಪ್ಪ ಹಚ್ಚಿ ಅದರ ಮೇಲೆ ಹಾಕಿ. ಸ್ವಲ್ಪ ಹೊತ್ತು ಅದನ್ನು ತಣ್ಣಗಾಗಲು ಬಿಡಿ. ಮೈಸೂರ್ ಪಾಕ್ ತಣ್ಣಗಾದ ಬಳಿಕ ಚೌಕಾಕಾರದಲ್ಲಿ (ನಿಮಗೆ ಬೇಕಾದ ಆಕಾರದಲ್ಲಿ) ಕತ್ತರಿಸಿ. ಕೊನೆಯಲ್ಲಿ ರೆಡಿಯಾದ ಮೈಸೂರ್ ಪಾಕ್ ಮೇಲೆ ಚಿಕ್ಕದಾಗಿ ಬಾದಾಮಿ ಹಾಗೂ ಗೋಡಂಬಿ ಇಡಿ. ಈಗ ರುಚಿಕರವಾದ ಮೈಸೂರ್ ಪಾಕ್ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.