ADVERTISEMENT

19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ AIನಿಂದ ಸಂತಾನ ಭಾಗ್ಯ: ಅಧ್ಯಯನ

ಪಿಟಿಐ
Published 3 ನವೆಂಬರ್ 2025, 10:47 IST
Last Updated 3 ನವೆಂಬರ್ 2025, 10:47 IST
<div class="paragraphs"><p>ಕೃತಕ ಗರ್ಭಧಾರಣೆ ವ್ಯವಸ್ಥೆ</p></div>

ಕೃತಕ ಗರ್ಭಧಾರಣೆ ವ್ಯವಸ್ಥೆ

   

ಐಸ್ಟಾಕ್ ಚಿತ್ರ

ನವದೆಹಲಿ: ವೀರ್ಯದ ಮಾದರಿಯ 25 ಲಕ್ಷ ಚಿತ್ರಗಳನ್ನು ಬರೋಬ್ಬರಿ ಎರಡು ಗಂಟೆಗಳ ಕಾಲ ಅಧ್ಯಯನ ನಡೆಸಿದ ಕೃತಕ ಬುದ್ಧಿಮತ್ತೆಯು (AI) ಸೂಕ್ತವಾದ ಎರಡು ವೀರ್ಯಾಣುಗಳನ್ನು ಪತ್ತೆ ಮಾಡಿತು. ಆ ಮೂಲಕ 19 ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದ ದಂಪತಿಗೆ ಸಂತಾನ ಭಾಗ್ಯವನ್ನು ಕರುಣಿಸಿದೆ.

ADVERTISEMENT

ದಿ ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಈ ಕುರಿತ ಲೇಖನವೊಂದು ಪ್ರಕಟವಾಗಿದೆ. ಅಮೆರಿಕದ 39 ವರ್ಷದ ಪುರುಷ ಹಾಗೂ 37 ವರ್ಷದ ಮಹಿಳೆ ಕಳೆದ ಹಲವು ವರ್ಷಗಳಿಂದ ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿದ್ದರು. ಕೃತಕ ಗರ್ಭಧಾರಣೆ (IVF) ಮೂಲಕ ಇವರಿಗೆ ತಜ್ಞರು ಚಿಕಿತ್ಸೆ ನಡೆಸಿದರು. ವೀರ್ಯಕ್ಕಾಗಿ ಎರಡು ಶಸ್ತ್ರಚಿಕಿತ್ಸೆಯನ್ನು ನಡೆಸಿದರು. ನಂತರ ಆರೋಗ್ಯವಂತ ವೀರ್ಯಾಣುವಿನ ಹುಡುಕಾಟವನ್ನೂ ತಜ್ಞರು ನಡೆಸಿದರು.

‘ವೀರ್ಯಾಣುಗಳು ಸಾಮಾನ್ಯದಂತೆಯೇ ಕಂಡುಬಂದಿತಾದರೂ, ಸೂಕ್ಷ್ಮದರ್ಶಕದಲ್ಲಿ ಗಮನಿಸಿದಾಗ ನಿರುಪಯುಕ್ತ ಕೋಶಗಳೇ ಹೆಚ್ಚಾಗಿದ್ದು ಗೋಚರಿಸಿತು. ಆದರೆ ಒಂದೂ ಯೋಗ್ಯ ವೀರ್ಯಾಣುವನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಬಂಜೆತನದಿಂದ ಬಳಲುತ್ತಿರುವ ಪುರುಷರು ಜೈವಿಕ ಮಗುವನ್ನು ಪಡೆಯುವ ಅವಕಾಶ ತೀರಾ ಕಡಿಮೆ’ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಫಲವಂತಿಕೆ ಕೇಂದ್ರದ ನಿರ್ದೇಶಕ ಜೆವ್‌ ವಿಲಿಯಮ್ಸ್ ಹೇಳಿದ್ದಾರೆ.

ಅಝೂಸ್‌ಪರ್ಮಿಯಾ ಹೊಂದಿದ ಪುರುಷರು

ಸ್ಕಲನದ ನಂತರ ಕೆಲವರಿಗೆ ವೀರ್ಯವೇ ಹೊರಬಾರದು ಇನ್ನೂ ಕೆಲವರಿಗೆ ಇದ್ದರೂ ಕಡಿಮೆ ಪ್ರಮಾಣದಲ್ಲಿರುವ ಸಮಸ್ಯೆಯನ್ನು ಪತ್ತೆ ಮಾಡಿರುವ ತಜ್ಞರು ಅದಕ್ಕೆ ‘ಅಝೂಸ್‌ಪರ್ಮಿಯಾ’ ಎಂದು ಕರೆದಿದ್ದಾರೆ. ಇದಕ್ಕಾಗಿ ಹಲವರು ಯೋಗ್ಯ ವೀರ್ಯವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಇದರಲ್ಲಿ ವೃಷಣದಿಂದಲೇ ನೇರವಾಗಿ ವೀರ್ಯವನ್ನು ಹೊರತೆಗೆಯಲಾಗುತ್ತದೆ.

‘ಬಹಳಷ್ಟು ಪ್ರಕರಣದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು ತೀರಾ ವಿರಳ. ಈ ಶಸ್ತ್ರಚಿಕಿತ್ಸೆಗೆ ಒಳಗಾದವರು ಉರಿಯೂತ, ನರದೌರ್ಬಲ್ಯ ಅಥವಾ ಹಾರ್ಮೋನ್‌ ಟೆಸ್ಟೋಸ್ಟೆರಾನ್‌ ಮಟ್ಟ ಕುಂಠಿತವಾಗುವ ಸಮಸ್ಯೆಯನ್ನೂ ಎದುರಿಸಲಿದ್ದಾರೆ’ ಎಂದು ಸಂಶೋಧಕರು ಹೇಳಿದ್ದಾರೆ.

ವೀರ್ಯ ಟ್ರ್ಯಾಕಿಂಗ್‌ಗಾಗಿ ‘ಸ್ಟಾರ್‌’ ಪದ್ಧತಿ

ಪುರುಷ ಬಂಜೆತನ ನಿವಾರಣೆಗಾಗಿ ವೀರ್ಯ ಟ್ರ್ಯಾಕಿಂಗ್ ಮತ್ತು ಚೇತರಿಕೆ (STAR) ಎಂಬ ಚಿಕಿತ್ಸೆಯನ್ನು ತಜ್ಞರು ಕಂಡುಕೊಂಡಿದ್ದಾರೆ. ಇದು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವಾಗಿದೆ. ಅಧಿಕ ವೇಗ, ನೈಜ ಸಮಯದ ಮಾಹಿತಿಯ ವಿಶ್ಲೇಷಣೆ ಹಾಗೂ ಅಪರೂಪದ ಯೋಗ್ಯ ವೀರ್ಯಾಣುವನ್ನು ಶೋಧಿಸುವ ಗುಣವನ್ನು ಇದು ಹೊಂದಿದೆ. ಈ ಹಿಂದಿನ ವೀರ್ಯಾಣುವಿನ ಅಝೂಸ್‌ಪರ್ಮಿಯಾವನ್ನೂ ಇದು ವಿಶ್ಲೇಷಿಸುವ ಗುಣವನ್ನೂ ಹೊಂದಿದೆ.

‘ಲಭ್ಯವಾಗುವ ವೀರ್ಯದ ಮಾದರಿಯಲ್ಲಿ ಆಳವಾದ ಶೋಧ ನಡೆಸುವ ಈ ಕೃತಕ ಬುದ್ಧಿಮತ್ತೆಯು, ಪ್ರತಿ ಗಂಟೆಗೆ ಸುಮಾರು 80 ಲಕ್ಷ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಜತೆಗೆ ಸೂಕ್ತವಾದ ಹಾಗೂ ಯೋಗ್ಯವಾದ ವೀರ್ಯಾಣುವನ್ನು ಪ್ರತ್ಯೇಕಿಸಲಿದೆ. ಇದಕ್ಕಾಗಿ ಸೂಕ್ಷ್ಮ ಕೂದಲಿನಂತ ಸಾಧನ ಹೊಂದಿರುವ ರೊಬೊವನ್ನು ಬಳಸಲಾಗುತ್ತದೆ. ನಂತರ ಅದು ಬ್ರೂಣವನ್ನು ಸಿದ್ಧಪಡಿಸಲಿದೆ ಅಥವಾ ಭವಿಷ್ಯಕ್ಕಾಗಿ ವೀರ್ಯವನ್ನೇ ಸಂಗ್ರಹಿಸಿಡಲಿದೆ’ ಎಂದು ಸಂಶೋಧಕರ ತಂಡ ಹೇಳಿದೆ.

‘ಸ್ಕಲನಗೊಂಡ 3.5 ಮಿಲಿ ಲೀಟರ್‌ ವೀರ್ಯ ಮಾದರಿಯನ್ನು ಹಗುರವಾಗಿ ಶುಚಿಗೊಳಿಸಲಾಗುವುದು. ಅದನ್ನು 800 ಮೈಕ್ರೊ ಲೀಟರ್ ವೀರ್ಯ ವಿಶ್ಲೇಷಕ ಸಾಧನದಲ್ಲಿ ಇಡಲಾಗುವುದು. ನಂತರ ಕೃತಕ ಬುದ್ಧಿಮತ್ತೆ ಆಧಾರಿತ ‘ಸ್ಟಾರ್‌’ ವ್ಯವಸ್ಥೆಯನ್ನು ಆರಂಭಿಸಲಾಗುತ್ತದೆ’ ಎಂದು ಲೇಖನದಲ್ಲಿ ಬರೆಯಲಾಗಿದೆ.

‘ಅವುಗಳಲ್ಲಿ ಯೋಗ್ಯವಾಗಿದ್ದನ್ನು ಪಡೆದು ಪ್ರೌಢ ಅಂಡಾಣುವಿನಲ್ಲಿ ಸೇರಿಸಲಾಗುತ್ತದೆ. ನಂತರ ಅದು ಬ್ರೂಣವಾಗಿ ಬೆಳೆಯಲಿದೆ. ಮೂರನೇ ದಿನ ಅದನ್ನು ಗರ್ಭಕೋಶಕ್ಕೆ ವರ್ಗಾಯಿಸಲಾಗುತ್ತದೆ. 13ನೇ ದಿನದ ನಂತರ ಮಹಿಳೆಯು ತನ್ನ ಮೊದಲ ಗರ್ಭಧಾರಣಾ ಪರೀಕ್ಷೆಗೆ ಒಳಗಾಗುತ್ತಾರೆ. ಅಲ್ಲಿ ಗರ್ಭ ಧರಿಸಿದ್ದಾರೆಯೇ ಎಂಬುದು ಅಧಿಕೃತವಾಗಿ ಖಚಿತವಾಗಲಿದೆ’ ಎಂದೆನ್ನಲಾಗಿದೆ.

‘ಎಂಟು ವಾರಗಳ ಗರ್ಭಾವಸ್ಥೆಯ ನಂತರ ಮಹಿಳೆಯನ್ನು ಪ್ರಸೂತಿ ಆರೈಕೆಗೆ ದಾಖಲಿಸಲಾಗುತ್ತದೆ. ಇಲ್ಲಿ ಭ್ರೂಣದ ಬೆಳವಣಿಗೆ ಮತ್ತು ಪ್ರತಿ ನಿಮಿಷಕ್ಕೆ 172 ಬಾರಿ ಹೃದಯ ಮಿಡಿತ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ’ ಎಂದು ತಜ್ಞರು ವಿವರಿಸಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಕ್ಲಿನಿಕಲ್ ಟ್ರಯಲ್ಸ್ ನಡೆಸುವ ಪ್ರಕ್ರಿಯೆ ಜಾರಿಯಲ್ಲಿದೆ. ಆ ಮೂಲಕ ಬಂಜೆತನದಿಂದ ಬಳಲುವ ಬಹಳಷ್ಟು ದಂಪತಿಗೆ ಏಕಕಾಲಕ್ಕೆ ನೆರವಾಗುವಂತೆ ಕೃತಕ ಬುದ್ಧಿಮತ್ತೆ ಆಧಾರಿತ ‘ಸ್ಟಾರ್‌’ ಸಂಶೋಧನೆ ಮುಂದುವರಿದಿದೆ’ ಎಂದು ಈ ತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.