
ಪ್ರಾತಿನಿಧಿಕ ಚಿತ್ರ
ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನಂತರ ಭಾರತ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ಎಂದರೆ ಅದು ವಾಯುಮಾಲಿನ್ಯ. ಅದನ್ನು ನಿಯಂತ್ರಿಸದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ ಎಂದು ಭಾರತ ಮೂಲದ ಬ್ರಿಟನ್ (ಯುಕೆ) ಶ್ವಾಸಕೋಶಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆ ಜತೆ ಬ್ರಿಟನ್‌ನ ವೈದ್ಯರು ಮಾತನಾಡಿದ್ದು, ‘ಭಾರತ ಸರ್ಕಾರ ವಾಯು ಮಾಲಿನ್ಯವನ್ನು ನಿಯಂತ್ರಿಸುವತ್ತ ಗಮನ ನೀಡುತ್ತಿದೆ. ಆದರೆ ತಡವಾಗಿದೆ. ಉತ್ತರ ಭಾರತದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ಈಗಾಗಲೇ ಹಾನಿಯಾಗಿದೆ. ಕಳಪೆ ಗುಣಮಟ್ಟದ ಗಾಳಿಯಿಂದಾಗಿ ಅನಾರೋಗ್ಯವು ಸದ್ದಿಲ್ಲದೆ ಆವರಿಸುತ್ತಿರುವುದು ಹೊರೆಯಾಗಿ ಪರಿಣಮಿಸಲಿದೆ. ಜತೆಗೆ ಭಾರತದ ನಾಗರಿಕರು ಮತ್ತು ಅಲ್ಲಿನ ಆರೋಗ್ಯ ವ್ಯವಸ್ಥೆ ಮೇಲೆ ಇದು ಭಾರಿ ಮತ್ತು ದೀರ್ಘಕಾಲದವರೆಗೂ ದುಬಾರಿಯಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳೂ ಇವೆ’ ಎಂದು ಲಿವರ್‌ಪೂಲ್‌ನಲ್ಲಿ ಶ್ವಾಸಕೋಶ ಸಲಹೆಗಾರ ಮತ್ತು ಭಾರತದ ಆರೋಗ್ಯ ಇಲಾಖೆಯ ಕೋವಿಡ್-19 ಸಲಹಾ ಸಮಿತಿಯ ಮಾಜಿ ಸದಸ್ಯ ಮನೀಶ್ ಗೌತಮ್ ಹೇಳಿದ್ದಾರೆ.
‘ನಗರಗಳಲ್ಲಿ ವಿಮಾನ, ವಾಹನಗಳು ಹೊರಸೂಸುವ ಕೆಟ್ಟ ಗಾಳಿಯಿಂದಾಗಿ ಅದರಲ್ಲೂ ಪ್ರಮುಖವಾಗಿ ಭಾರತ, ಬ್ರಿಟನ್ ಸೇರಿ ಹಲವು ದೇಶಗಳಲ್ಲಿ ಬೊಜ್ಜಿನ ಸಮಸ್ಯೆ ಮಾತ್ರವಲ್ಲ ಹೃದಯ ಸಂಬಂಧಿ ಕಾಯಿಲೆಗಳೂ ದಶಕಗಳಿಂದೀಚೆಗೆ ಏರಿಕೆಯಾಗುತ್ತಿದೆ’ ಎಂದಿದ್ದಾರೆ.
ದೆಹಲಿಯಲ್ಲಿ ಶೇ 40ರಷ್ಟು ವಾಯುಮಾಲಿನ್ಯ ಸಮಸ್ಯೆಗೆ ಕಾರಣ ಪಳೆಯುಳಿಕೆ ಇಂಧನಗಳಿಗೆ ಅವಲಂಬಿತವಾಗಿರುವ ವಾಹನಗಳ ಹೊಗೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೆಲ ದಿನಗಳ ಹಿಂದೆ ಹೇಳಿದ್ದರು.
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದಲ್ಲಿ, ಎಕ್ಯೂಐ ಸೂಚ್ಯಂಕ ಏರಿಕೆಗೂ ಮತ್ತು ಶ್ವಾಸಕೋಶದ ಕಾಯಿಲೆಗಳಿಗೂ ಸಂಬಂಧವಿದೆ ಎನ್ನುವುದಕ್ಕೆ ಯಾವುದೇ ನಿರ್ಣಾಯಕ ಅಂಕಿ ಅಂಶಗಳು ಲಭ್ಯವಿಲ್ಲ. ಆದರೆ ವಾಯು ಮಾಲಿನ್ಯ ಉಸಿರಾಟ ಮತ್ತು ಶ್ವಾಸಕೋಶದ ಸಮಸ್ಯೆಯನ್ನು ಗಂಭೀರವಾಗುವಂತೆ ಮಾಡುತ್ತದೆ ಎಂದು ಸರ್ಕಾರ ಹೇಳಿತ್ತು.
ಜತೆಗೆ ಆರೋಗ್ಯ ಸಚಿವಾಲಯ, ‘ಕಳೆದ ಮೂರು ವರ್ಷಗಳಲ್ಲಿ ದೆಹಲಿಯಲ್ಲಿ 2 ಲಕ್ಷ ಜನರು ತೀವ್ರತರವಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ 30 ಸಾವಿರ ಜನರಿಗೆ ಚಿಕಿತ್ಸೆ ಅಗತ್ಯವಿದೆ’ ಎಂದು ಹೇಳಿತ್ತು.
ಡಿಸೆಂಬರ್‌ನಲ್ಲಿ ದೆಹಲಿ ನಗರದಲ್ಲಿ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ಶೇ 20ರಿಂದ 30ಕ್ಕೆ ಏರಿಕೆಯಾಗಿದೆ. ಇವರಲ್ಲಿ ಮೊದಲ ಬಾರಿ ಆಸ್ಪತ್ರೆಗೆ ಬಂದವರು ಮತ್ತು ಯುವಜನರೇ ಹೆಚ್ಚು ಎಂದು ವೈದ್ಯರು ಹೇಳಿದ್ದಾರೆ.
‘ಹೆಚ್ಚು ಕಾಲ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಆರಂಭದಲ್ಲಿ ತಲೆನೋವು, ಸುಸ್ತು, ಕಫ, ಕಿರಿಕಿರಿ, ಜೀರ್ಣಕ್ರಿಯೆಯಲ್ಲಿ ತೊಂದರೆ, ಕಣ್ಣುಗಳಲ್ಲಿ ಉರಿ, ಚರ್ಮದ ಸಮಸ್ಯೆ ಸೇರಿದಂತೆ ಹಲವು ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವೇ ಮುಂದೆ ಗಂಭೀರ ಕಾಯಿಲೆಯಾಗಿ ಮಾರ್ಪಾಡಾಗಬಲ್ಲದು’ ಎಂದು ಲಂಡನ್‌ನ, ಸೇಂಟ್ ಜಾರ್ಜ್ ವಿಶ್ವವಿದ್ಯಾಲಯ ಆಸ್ಪತ್ರೆ ಹೃದ್ರೋಗ ತಜ್ಞ ರಾಜಯ್ ನಾರಾಯಣ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.