
ಚಿತ್ರ: ಗೆಟ್ಟಿ
ಮಿದುಳು ಮಾನವನ ಅತಿ ಮುಖ್ಯ ಭಾಗವಾಗಿದೆ. ನಮ್ಮ ದೈನಂದಿನ ಆಹಾರಗಳ ಪೈಕಿ ಮಿದುಳಿಗೆ ಸಹಕಾರಿಯಾಗುವ ಆಹಾರ ಸೇವಿಸುವುದು ಅತ್ಯವಶ್ಯಕ. ಆದರೆ ಮಿದುಳಿಗೆ ಪೂರಕವಾದ ಪೋಷಕಾಂಶಗಳು ಯಾವುವು ಎಂಬುದರ ಅರಿವು ಇರುವುದಿಲ್ಲ. ಕಲಿಕೆ, ಸ್ಮರಣೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಭಾವನಾತ್ಮಕ ಸಮತೋಲನವನ್ನು ನಿಯಂತ್ರಿಸುವಲ್ಲಿ ಮಿದುಳಿನ ಪಾತ್ರ ಅಪಾರ.
ಕೊಬ್ಬಿನಾಂಶವುಳ್ಳ ಮೀನು: ಒಮೆಗಾ-3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾದ ಸಾಲ್ಮನ್, ಮ್ಯಾಕೆರೆಲ್, ಸಾರ್ಡೀನ್ಸ್ ಮತ್ತು ಟ್ಯೂನಾದಂತಹ ಕೊಬ್ಬಿನಾಂಶ ಭರಿತ ಮೀನುಗಳ ಸೇವನೆ ಮಿದುಳಿಗೆ ಅತ್ಯಂತ ಪ್ರಯೋಜನಕಾರಿ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಮಿದುಳಿನ ಕೋಶಗಳ ರಚನೆಯನ್ನು ಬೆಂಬಲಿಸುವುದರ ಜೊತೆಗೆ ಸ್ಮರಣ ಶಕ್ತಿಯನ್ನು ಸುಧಾರಿಸುತ್ತದೆ. ಅಲ್ಲದೇ ಏಕಾಗ್ರತೆ ವೃದ್ಧಿಸುತ್ತದೆ.
ಕಾಯಿ ಮತ್ತು ಬೀಜಗಳು: ಮಿದುಳು ಸ್ನೇಹಿ ಪೋಷಕಾಂಶಗಳಾದ ಬಾದಾಮಿ, ಪಿಸ್ತಾ, ಸೂರ್ಯಕಾಂತಿ ಬೀಜ ಮತ್ತು ಕುಂಬಳಕಾಯಿ ಬೀಜಗಳು ಸೇರಿದಂತೆ ಇತರೆ ಕಾಯಿ ಮತ್ತು ಬೀಜಗಳು ಆರೋಗ್ಯಕರ ಕೊಬ್ಬು, ವಿಟಮಿನ್ ಮತ್ತು ಉತ್ಕರ್ಷಣ ನಿರೋಧಕಗಳ ಸಂಯೋಜನೆಯನ್ನು ಮಿದುಳಿಗೆ ಒದಗಿಸುತ್ತವೆ. ವಿಟಮಿನ್ ಇ ಮಿದುಳಿನ ಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುವುದಕ್ಕೆ ಹೆಸರು ವಾಸಿಯಾಗಿದೆ.
ಬೆರ್ರಿ: ಬ್ಲೂಬೆರ್ರಿ, ಸ್ಟ್ರಾಬೆರ್ರಿ ಮತ್ತು ಬ್ಲ್ಯಾಕ್‌ಬೆರ್ರಿಗಳಂತಹ ಬೆರ್ರಿಗಳಲ್ಲಿ ಫ್ಲೇವನಾಯ್ಡ್‌ಗಳಲ್ಲಿ ಸಮೃದ್ಧವಾಗಿವೆ. ತಮ್ಮ ಬಲವಾದ ಉತ್ಕರ್ಷಣ, ನಿರೋಧಕ ಗುಣಗಳಿಗೆ ಹೆಸರು ವಾಸಿಯಾದ ಹಣ್ಣುಗಳಾಗಿವೆ. ಈ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಮಿದುಳಿನ ಕೋಶಗಳ ನಡುವಿನ ಸಂವಹನವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಬೆರ್ರಿಗಳ ನಿಯಮಿತ ಸೇವನೆಯು ಅಲ್ಪಾವಧಿಯ ಸ್ಮರಣೆ ಹೆಚ್ಚಿಸಬಹುದು ಎಂದು ಸಂಶೋಧನೆ ಹೇಳುತ್ತದೆ.
ಧಾನ್ಯಗಳು: ಮಿದುಳಿಗೆ ಗಮನ ಮತ್ತು ಸ್ಪಷ್ಟತೆಯನ್ನು ಕಾಪಾಡಿಕೊಳ್ಳಲು ನಿರಂತರ ಶಕ್ತಿಯ ಪೂರೈಕೆ ಅಗತ್ಯವಿರುತ್ತದೆ. ಧಾನ್ಯಗಳು ಮಿದುಳಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಓಟ್ಸ್, ಅನ್ನ, ಗೋಧಿ ಮತ್ತು ರಾಗಿಗಳಂತಹ ಆಹಾರಗಳು ರಕ್ತಕ್ಕೆ ಕ್ರಮೇಣ ಗ್ಲೂಕೋಸ್ ಅನ್ನು ಬಿಡುಗಡೆ ಮಾಡುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ಒದಗಿಸುತ್ತವೆ. ಇದು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯವಾಗಿದೆ.
ಮೊಟ್ಟೆ: ವಿಶೇಷವಾಗಿ ಮೊಟ್ಟೆಯ ಹಳದಿ ಲೋಳೆ, ಕೋಲಿನ್‌ನ ಮೂಲವಾಗಿದೆ. ಇದು ಸ್ಮರಣೆ ನಿಯಂತ್ರಣ ಮತ್ತು ನರಕೋಶಗಳ ಕಾರ್ಯಕ್ಕೆ ನಿರ್ಣಾಯಕವಾದ ಪೋಷಕಾಂಶವಾಗಿದೆ. ವಿಟಮಿನ್ ಬಿ6 ಮತ್ತು ಬಿ12 ಭರಿತವಾಗಿರುವ ಮೊಟ್ಟೆ ಸೇವನೆ ಮಿದುಳಿನ ಮಬ್ಬನ್ನು ಕಡಿಮೆ ಮಾಡುತ್ತದೆ.
ಹಸಿರು ಎಲೆಯ ತರಕಾರಿಗಳು: ಪಾಲಕ್, ಮೆಂತ್ಯೆ ಮತ್ತು ದಂಟಿನ ಸೊಪ್ಪು ಸೇರಿದಂತೆ ಹಸಿರು ಎಲೆಯ ತರಕಾರಿಗಳು ವಿಟಮಿನ್ ಕೆ, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಈ ಪೋಷಕಾಂಶಗಳು ಮಿದುಳಿನ ಅಂಗಾಂಶ ರಕ್ಷಿಸಲು, ಉರಿಯೂತ ಕಡಿಮೆ ಮಾಡಲು ಮತ್ತು ಸ್ಮರಣೆ ಬೆಂಬಲಿಸಲು ಸಹಾಯ ಮಾಡುತ್ತವೆ.
ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್, ವಿಶೇಷವಾಗಿ ಕನಿಷ್ಠ ಶೇ 70ರಷ್ಟು ಕೋಕೋ ಹೊಂದಿರುತ್ತದೆ. ಇದು ಮಿದುಳಿಗೆ ರಕ್ತದ ಹರಿವನ್ನು ಸುಧಾರಿಸುವ, ಮಿದುಳಿನ ಜಾಗರೂಕತೆ ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.
ಕೆಫೀನ್ ಮತ್ತು ಚಹಾ: ಕಾಫಿ ಮತ್ತು ಚಹಾದ ನಿಯಂತ್ರಿತ ಸೇವನೆ ಉತ್ತಮ ಏಕಾಗ್ರತೆ ಮತ್ತು ಮಾನಸಿಕ ಜಾಗರೂಕತೆಯನ್ನು ಬೆಂಬಲಿಸಬಹುದು. ಈ ಪಾನೀಯಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮಿದುಳಿಗೆ ದೀರ್ಘಾವಧಿಯ ರಕ್ಷಣಾತ್ಮಕ ಪರಿಣಾಮಗಳನ್ನು ಸಹ ನೀಡುತ್ತವೆ. ಹಸಿರು ಚಹಾ ಥಿಯಾನೈನ್ ಮೂಲಕ ಹೆಚ್ಚುವರಿ ಪ್ರಯೋಜನವನ್ನು ನೀಡುತ್ತದೆ. ಇದು ವಿಶ್ರಾಂತಿಯನ್ನು ಉತ್ತೇಜಿಸುವಾಗ ಗಮನವನ್ನು ಸುಧಾರಿಸಲು ಹೆಸರುವಾಸಿಯಾದ ಅಮೈನೋ ಆಮ್ಲವಾಗಿದೆ.
ಅರಿಸಿಣ: ಅರಿಸಿಣ ಕರ್ಕ್ಯುಮಿನ್ ಅನ್ನುವ ಅಂಶವನ್ನು ಹೊಂದಿದೆ. ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಸಕ್ರಿಯ ಸಂಯುಕ್ತವಾಗಿದೆ. ಸ್ಮರಣೆ ಮತ್ತು ನರ ಸಂಬಂಧಿ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಈ ಆಹಾರಗಳನ್ನು ಸಮತೋಲಿನವಾಗಿ ಆಹಾರದಲ್ಲಿ ಸೇರಿಸಿಕೊಂಡು ಸೇವಿಸುವುದರಿಂದ ಮಿದುಳಿನ ಕಾರ್ಯಕ್ಷಮತೆ ಹೆಚ್ಚಾಗುವುದರ ಜೊತೆಗೆ ದೀರ್ಘಕಾಲದಲ್ಲಿ ಮಿದುಳಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಲೇಖಕರು: ಡಾ. ಬಿ ಕೆ ಮಧುಸೂಧನ್, ಪ್ರಮುಖ ಸಲಹೆಗಾರ, ನರವಿಜ್ಞಾನ, ಆಸ್ಟರ್ ಆರ್‌ವಿ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.