
ಪ್ರಾತಿನಿಧಿಕ ಚಿತ್ರ
ಹೀಗೊಂದು ದಿನ ಇಬ್ಬರು ಮಕ್ಕಳ ಜೊತೆ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದರು. ಆ ಮಕ್ಕಳು ನೋಡಲು ಮುದ್ದಾಗಿದ್ದರು. ಆದರೆ ಆ ಪುಟಾಣಿಗಳ ಮುಖದ ಮೇಲೆ ವೃತ್ತಾಕಾರದ ಬಿಳಿ ಮಚ್ಚೆಗಳು ಎದ್ದು ಕಾಣುತ್ತಿದ್ದವು. ಇಂತಹ ಅನೇಕ ಪ್ರಕರಣಗಳು ಗಮನಕ್ಕೆ ಬರುತ್ತಿದ್ದಂತೆ ಎಂತಹ ಸಮಸ್ಯೆಯಿದು ಎನ್ನುವ ಕುತೂಹಲ ಹುಟ್ಟಿತ್ತು.
ವೈದ್ಯರೊಬ್ಬರ ಬಳಿ ಈ ಸಮಸ್ಯೆ ಬಗ್ಗೆ ವಿಚಾರಿಸಿದಾಗ ಚರ್ಮದ ಕೆಲವು ಭಾಗಗಳು ಸುತ್ತಲಿನ ಚರ್ಮಕ್ಕಿಂತ ಬಿಳಿ ಬಣ್ಣದಲ್ಲಿ ಕಾಣಿಸುವುದನ್ನು ಹೈಪೋಪಿಗ್ಮೆಂಟೇಶನ್ ಎಂದು ಗುರುತಿಸಲಾಗಿದೆ ಎಂದರು.
ಮಕ್ಕಳ ಅಂದಗೆಡಿಸುವ ಬಿಳಿ ಮಚ್ಚೆಗೆ ಕಾರಣವೇನು, ಪರಿಹಾರಕ್ಕೆ ಏನು ಮಾಡಬೇಕು ಎಂದು ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞೆ ಡಾ. ಪೂರ್ಣಿಮಾ ಎನ್. ಮಾಹಿತಿ ನೀಡಿದ್ದಾರೆ.
ಮಕ್ಕಳ ಮುಖದಲ್ಲಿ ಬಿಳಿ ಅಥವಾ ಮಂದ ಬಣ್ಣದ ಮಚ್ಚೆಗಳು ಕಾಣಿಸಿದಾಗ ಪೋಷಕರಲ್ಲಿ ತಕ್ಷಣ ಆತಂಕ ಮೂಡುವುದು ಸಹಜ. ‘ಇದು ಪೋಷಕಾಂಶ ಕೊರತೆಯೇ?, ಆಂತ್ರ ಕ್ರಿಮಿ/ ಜಂತು ಹುಳುಗಳ ಪರಿಣಾಮವೇ?, ‘ಫಂಗಲ್ ಸೋಂಕಾ?, ‘ಲಿವರ್ ದುರ್ಬಲತೆಯ ಸೂಚನೆಯೇ?, ‘ಬಿಳಿ ತನ್ನು / ಶ್ವಿತ್ರದ ಆರಂಭವೇ? ಎಂಬ ಪ್ರಶ್ನೆಗಳು ಕಾಡುತ್ತವೆ. ಸಮಾಜದಲ್ಲಿ ಹರಿದಾಡುತ್ತಿರುವ ತಪ್ಪು ಕಲ್ಪನೆಗಳು ಈ ಭಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಆದರೆ ವಾಸ್ತವದಲ್ಲಿ ಮಕ್ಕಳಲ್ಲಿ ಕಾಣಿಸುವ ಬಹುತೇಕ ಬಿಳಿ ಅಥವಾ ಮಂದ ಬಣ್ಣದ ಮಚ್ಚೆಗಳು ಸಾಮಾನ್ಯವಾಗಿದ್ದು, ಸರಿಯಾದ ಅರಿವು ಮತ್ತು ಆರೈಕೆಯಿಂದ ಸುಲಭವಾಗಿ ನಿಯಂತ್ರಿಸಬಹುದಾಗಿದೆ.
ಚರ್ಮದ ಕೆಲವು ಭಾಗಗಳು ಸುತ್ತಲಿನ ಚರ್ಮಕ್ಕಿಂತ ಬಿಳಿ ಬಣ್ಣದಲ್ಲಿ ಕಾಣಿಸುವುದನ್ನು ಹೈಪೋಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಚರ್ಮದ ಬಣ್ಣ ಸ್ವಲ್ಪ ಕಡಿಮೆಯಾಗಿರುತ್ತದೆ; ಸಂಪೂರ್ಣ ವರ್ಣಹಾನಿ ಉಂಟಾಗುವುದಿಲ್ಲ. ಇದು ಶ್ವಿತ್ರ (ವಿಟಿಲಿಗೋ) ರೋಗದಿಂದ ಭಿನ್ನವಾಗಿದೆ. ಈ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಪೋಷಕರ ಭಯವನ್ನು ಕಡಿಮೆ ಮಾಡುತ್ತದೆ.
ಪ್ರಾತಿನಿಧಿಕ ಚಿತ್ರ
ಮಕ್ಕಳಲ್ಲಿ ಕಾಣಿಸುವ ಬಿಳಿ ಮಚ್ಚೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಮುಖ ಕಾರಣಗಳಲ್ಲಿ ಪಿಟಿರಿಯಾಸಿಸ್ ಆಲ್ಬಾ ಒಂದಾಗಿದೆ. ಪಿಟಿರಿಯಾಸಿಸ್ ಆಲ್ಬಾ ಸಾಮಾನ್ಯವಾಗಿ 2 ರಿಂದ 12 ವರ್ಷದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಗಲ್ಲಗಳ ಮೇಲೆ ಸ್ಪಷ್ಟ ಗಡಿಯಿಲ್ಲದ ಬಿಳಿ ಮಚ್ಚೆಗಳು ಕಾಣುತ್ತವೆ. ಚರ್ಮ ಒಣಗಿದಂತೆ ಕಾಣಿಸಿ, ಅದರ ಮೇಲ್ಮೈಯಲ್ಲಿ ಸೂಕ್ಷ್ಮ ತುರಿಕೆ ಉಂಟಾಗಬಹುದು. ಸೂರ್ಯನ ಬೆಳಕಿನಲ್ಲಿ ಹೆಚ್ಚು ಆಟವಾಡುವ ಮಕ್ಕಳಲ್ಲಿ ಸುತ್ತಲಿನ ಚರ್ಮ ಕಪ್ಪಾಗುವುದರಿಂದ ಈ ಮಚ್ಚೆಗಳು ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ. ಇದು ಸೋಂಕು ಅಲ್ಲ, ಇತರರಿಗೆ ಹರಡುವುದಿಲ್ಲ, ಪೋಷಕಾಂಶ ಕೊರತೆಯೂ ಅಲ್ಲ, ಮತ್ತು ಬಹುತೇಕ ಸಂದರ್ಭಗಳಲ್ಲಿ ತಾತ್ಕಾಲಿಕ.
ಇತ್ತೀಚಿನ ಜೀವನಶೈಲಿಯಲ್ಲಿ ಮತ್ತೊಂದು ಪ್ರಮುಖ ಕಾರಣ ಚರ್ಮದ ಅತಿಯಾದ ಒಣತನವಾಗಿದೆ. ಮಕ್ಕಳು ದಿನದಲ್ಲಿ ಹಲವಾರು ಬಾರಿ ಮುಖ ತೊಳೆಯುವುದು, ಕಠಿಣ ಸಾಬೂನುಗಳ ಬಳಕೆ, ದೊಡ್ಡವರಿಗಾಗಿ ತಯಾರಿಸಿದ ಫೇರ್‌ನೆಸ್ ಕ್ರೀಮ್‌ಗಳ ಬಳಕೆ ಇವು ಚರ್ಮದ ಸಹಜ ತೇವಾಂಶವನ್ನು ಕಳೆದುಹೋಗುವಂತೆ ಮಾಡುತ್ತವೆ. ಇದರ ಪರಿಣಾಮವಾಗಿ ಚರ್ಮದ ಕೆಲವು ಭಾಗಗಳು ಬಿಳಿಯಾಗಿ ಕಾಣುತ್ತವೆ.
ಪೋಷಕರು ಸಾಮಾನ್ಯವಾಗಿ ಬಿಳಿ ಮಚ್ಚೆಗಳನ್ನು ಜಿಂಕ್ ಅಥವಾ ವಿಟಮಿನ್ ಕೊರತೆಯೊಂದಿಗೆ ಸಂಬಂಧಿಸುತ್ತಾರೆ. ಜಿಂಕ್ ದೇಹದ ಬೆಳವಣಿಗೆ, ಚರ್ಮದ ಪುನರ್‌ನಿರ್ಮಾಣ, ರೋಗನಿರೋಧಕ ಶಕ್ತಿ ಮತ್ತು ಗಾಯಗಳ ಗುಣಮುಖ ಪ್ರಕ್ರಿಯೆಗೆ ಅತ್ಯಂತ ಅಗತ್ಯವಾದ ಖನಿಜವಾಗಿದೆ. ದೇಹದಲ್ಲಿ ಜಿಂಕ್ ಕೊರತೆಯಾದಾಗ ಚರ್ಮದ ಸಹಜ ಪುನರುತ್ಪಾದನೆ ವ್ಯತ್ಯಯಗೊಂಡು ವಿವಿಧ ರೀತಿಯ ಚರ್ಮ ಸಮಸ್ಯೆಗಳು ಕಾಣಿಸಬಹುದು. ಸೂಕ್ಷ್ಮ ಪೋಷಕಾಂಶಗಳ ಕೊರತೆ, ವಿಶೇಷವಾಗಿ ಜಿಂಕ್ ಮುಂತಾದ ಅಂಶಗಳ ಅಭಾವ, ಚಿಕ್ಕ ಮಕ್ಕಳಿಂದ ಶಾಲಾ ವಯಸ್ಸಿನ ಮಕ್ಕಳವರೆಗೆ ಕಂಡುಬರುತ್ತದೆ. ಸಾಮಾನ್ಯವಾಗಿ ಬಾಯಿಯ ಸುತ್ತ, ಮೂಗಿನ ಸುತ್ತ ಮತ್ತು ಕಣ್ಣುಗಳ ಸುತ್ತ ಚರ್ಮ ಕೆಂಪಾಗುವುದು, ಉರಿಯುವುದು, ಬಿರುಕು ಬೀಳುವುದು ಹಾಗೂ ತುರಿಕೆ ಕಾಣಿಸುವುದು ಪ್ರಮುಖ ಲಕ್ಷಣಗಳಾಗಿವೆ. ಚರ್ಮ ಒಣಗಿದಂತೆ, ತೇವಾಂಶವಿಲ್ಲದೆ ಮತ್ತು ಸಿಪ್ಪೆ ಬೀಳುವಂತಾಗಬಹುದು. ಸಣ್ಣ ಗಾಯಗಳೂ ಸಹ ನಿಧಾನವಾಗಿ ಗುಣವಾಗುವುದು, ಚರ್ಮದಲ್ಲಿ ಸೋಂಕುಗಳು ಸುಲಭವಾಗಿ ಕಾಣಿಸಿಕೊಳ್ಳುವುದು ಇವು ಕೂಡ ಜಿಂಕ್ ಕೊರತೆಯ ಸೂಚನೆಗಳಾಗಬಹುದು.
ಕೆಲವು ಸಂದರ್ಭಗಳಲ್ಲಿ ಚರ್ಮದ ಬಣ್ಣದಲ್ಲಿ ಅಸಮತೋಲನ ಕಾಣಿಸಬಹುದು. ಕೆಲವೆಡೆ ಕಪ್ಪಾಗುವಿಕೆ, ಕೆಲವೆಡೆ ಮಂದ ಬಣ್ಣ ಕಾಣಿಸಬಹುದು. ಆದರೆ ಕೇವಲ ಮುಖದ ಮೇಲೆ ಮಾತ್ರ ಬೆಳಗಿನ ಬಣ್ಣದ ಮಚ್ಚೆಗಳು ಕಾಣಿಸುವುದು ಜಿಂಕ್ ಕೊರತೆಯ ಸಾಮಾನ್ಯ ಲಕ್ಷಣವಲ್ಲ. ಜೊತೆಗೆ ಕೂದಲು ಉದುರುವುದು, ಉಗುರುಗಳು ದುರ್ಬಲವಾಗುವುದು, ಮಕ್ಕಳ ಬೆಳವಣಿಗೆ ನಿಧಾನಗೊಳ್ಳುವುದು, ಮರುಮರು ಸೋಂಕುಗಳು ಕಾಣಿಸುವುದು ಇವು ಸಹ ಜಿಂಕ್ ಕೊರತೆಯೊಂದಿಗೆ ಸಂಬಂಧಿಸಿರಬಹುದು. ಅದೇ ರೀತಿ ವಿಟಮಿನ್ ಕೊರತೆಯಲ್ಲಿ ಚರ್ಮದ ಒಣತನ ಮತ್ತು ದೇಹದ ದೌರ್ಬಲ್ಯ ಕಾಣಬಹುದು; ಆದರೆ ಸ್ಥಳೀಯವಾಗಿ ಮಾತ್ರ ಬೆಳಗಿನ ಮಚ್ಚೆಗಳು ಕಾಣಿಸುವುದು ಅದರ ಪ್ರಮುಖ ಲಕ್ಷಣವಲ್ಲ.
ಆದ್ದರಿಂದ ಮಕ್ಕಳ ಮುಖದಲ್ಲಿ ಮಾತ್ರ ಬಿಳಿ ಮಚ್ಚೆಗಳು ಕಂಡರೆ ಅದನ್ನು ತಕ್ಷಣ ಜಿಂಕ್ ಅಥವಾ ವಿಟಮಿನ್ ಕೊರತೆಯಾಗಿ ಪರಿಗಣಿಸುವ ಅಗತ್ಯವಿಲ್ಲ. ಇತರ ಲಕ್ಷಣಗಳನ್ನು ಗಮನಿಸಿ, ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಸೂಕ್ತ.
‘ಜಂತು/ ಆಂತರಿಕ ಹುಳು ಇದ್ದರೆ ಮುಖದಲ್ಲಿ ಬಿಳಿ ಮಚ್ಚೆಗಳು ಬರುತ್ತವೆ‘ ಎಂಬ ನಂಬಿಕೆ ನಮ್ಮ ಸಮಾಜದಲ್ಲಿ ಬಹಳ ವ್ಯಾಪಕವಾಗಿದೆ. ಜಂತು ಹುಳುಗಳ ಸಮಸ್ಯೆ 3 ರಿಂದ 16 ವರ್ಷದ ಮಕ್ಕಳಲ್ಲಿ ಸಾಮಾನ್ಯವಾಗಿದೆ.ಆಂತರಿಕ ಹುಳುಗಳಿಂದ ನೇರವಾಗಿ ಚರ್ಮದ ಬಣ್ಣ ಬದಲಾವಣೆ ಉಂಟಾಗುವುದಿಲ್ಲ. ಆದರೆ ದೀರ್ಘಕಾಲದ ಜಂತು ಹುಳು ಸಮಸ್ಯೆಯಿಂದ ಅಪೋಷಣ ಉಂಟಾದರೆ ಚರ್ಮದ ಆರೋಗ್ಯ ಕುಗ್ಗಬಹುದು. ಆಯುರ್ವೇದದ ದೃಷ್ಟಿಯಿಂದ ಕ್ರಿಮಿ ದೋಷ ದೇಹದ ಧಾತುಗಳ ಪೋಷಣೆಯನ್ನು ಅಡ್ಡಿಪಡಿಸಿ ಚರ್ಮದ ವಿವರ್ಣತೆಯನ್ನು ಉಂಟುಮಾಡಬಹುದು ಎಂದು ವಿವರಿಸಲಾಗಿದೆ. ಅಂದರೆ, ಇದು ನೇರ ಕಾರಣವಲ್ಲ; ದೇಹದ ಸಮತೋಲನ ಭಂಗದಿಂದ ಉಂಟಾಗುವ ಪರೋಕ್ಷ ಪರಿಣಾಮ.
ಕೆಲವೊಮ್ಮೆ ಫಂಗಲ್ ಇನ್ಫೆಕ್ಷನ್‌ನಿಂದಲೂ ಬಿಳಿ ಮಚ್ಚೆಗಳು ಕಾಣಬಹುದು. ಆದರೆ ಇವು ಸಾಮಾನ್ಯವಾಗಿ ಕುತ್ತಿಗೆ, ಎದೆ ಮತ್ತು ಬೆನ್ನು ಭಾಗಗಳಲ್ಲಿ ಕಾಣುತ್ತವೆ ಮತ್ತು ಸಣ್ಣ ಸ್ಕೇಲಿಂಗ್ ಹಾಗೂ ಉರಿ ಜೊತೆಯಾಗಿ ಇರುತ್ತವೆ. ಮುಖದಲ್ಲಿ ಮಾತ್ರ ಕಾಣಿಸುವುದು ಅಪರೂಪ. ಫಂಗಲ್ ಸೋಂಕುಗಳು ಹೆಚ್ಚಾಗಿ ದೊಡ್ಡ ಮಕ್ಕಳಲ್ಲಿ ಮತ್ತು ಕಿಶೋರರಲ್ಲಿ ಕಾಣಿಸಬಹುದು. ಬಿಸಿ-ತೇವಾಂಶಯುಕ್ತ ವಾತಾವರಣ, ಹೆಚ್ಚು ಬೆವರುವುದು, ಚರ್ಮದ ಸ್ವಚ್ಛತೆಯ ಕೊರತೆ ಇವುಗಳಿಂದ ಚರ್ಮದ ಮೇಲೆ ತೆಳು ಬಣ್ಣದ ಚುಕ್ಕೆಗಳು ಕಾಣಿಸಬಹುದು.
ಕೆಲವು ಸಂದರ್ಭಗಳಲ್ಲಿ ಕೀಟ ಕಚ್ಚಿದ ನಂತರ ಅಥವಾ ಚರ್ಮದ ಉರಿಊತದ ನಂತರ ಗುಣಮುಖವಾಗುವ ಹಂತದಲ್ಲಿ ತಾತ್ಕಾಲಿಕ ಬಿಳಿ ಮಚ್ಚೆಗಳು ಕಾಣಬಹುದು. ಇವು ಕಾಲಕ್ರಮೇಣ ಸ್ವಾಭಾವಿಕವಾಗಿ ಸರಿಯಾಗುತ್ತವೆ.
ಪೋಷಕರು ಹೆಚ್ಚು ಭಯಪಡುವ ಮತ್ತೊಂದು ಸ್ಥಿತಿ ಶ್ವಿತ್ರ (ವಿಟಿಲಿಗೋ). ಇದರಲ್ಲಿ ಹಾಲಿನಂತೆ ಬಿಳಿ ಬಣ್ಣದ, ಸ್ಪಷ್ಟ ಗಡಿಯುಳ್ಳ ಮಚ್ಚೆಗಳು ಕಾಣುತ್ತವೆ ಮತ್ತು ನಿಧಾನವಾಗಿ ಹರಡುವ ಸಾಧ್ಯತೆ ಇರುತ್ತದೆ. ಸ್ಕೇಲಿಂಗ್ ಇಲ್ಲದೆ, ಸಂಪೂರ್ಣ ಬಿಳಿ ಬಣ್ಣದ ಮಚ್ಚೆಗಳು ಕಂಡುಬಂದರೆ ವೈದ್ಯಕೀಯ ಸಲಹೆ ಅಗತ್ಯ. ಆದರೆ ಎಲ್ಲಾ ಬಿಳಿ ಮಚ್ಚೆಗಳನ್ನೂ ಶ್ವಿತ್ರ ಎಂದು ಭಾವಿಸುವುದು ತಪ್ಪು.
ಕೆಲವು ಮಕ್ಕಳಲ್ಲಿ ಅಲರ್ಜಿ ಪ್ರವೃತ್ತಿ, ಒಣ ಚರ್ಮ, ಅಸ್ಥಮಾ ಅಥವಾ ಅಲರ್ಜಿಕ್ ರೈನೈಟಿಸ್ ಇರುವ ಸಂದರ್ಭಗಳಲ್ಲಿ ಚರ್ಮ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಇಂತಹ ಮಕ್ಕಳಲ್ಲಿ ಪಿಟಿರಿಯಾಸಿಸ್ ಆಲ್ಬಾ ಕಾಣುವ ಸಾಧ್ಯತೆ ಹೆಚ್ಚು. ಆಯುರ್ವೇದದ ದೃಷ್ಟಿಯಿಂದ ಇದು ವಾತ-ಕಫ ಪ್ರಾಬಲ್ಯ ಮತ್ತು ಚರ್ಮದ ಸಂವೇದನಶೀಲತೆಯೊಂದಿಗೆ ಸಂಬಂಧಿಸಬಹುದು.
ಪ್ರಾತಿನಿಧಿಕ ಚಿತ್ರ
ಆಯುರ್ವೇದದಲ್ಲಿ ಚರ್ಮವನ್ನು ತ್ವಕ್ ಎಂದು ಕರೆಯಲಾಗುತ್ತದೆ. ಇದು ದೇಹದ ಮೊದಲ ಪೋಷಕ ಅಂಶವಾದ ರಸ ಧಾತುವಿನ ಉಪಧಾತು. ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾದಾಗ ಅದು ರಸವಾಗಿ ರೂಪುಗೊಂಡು ದೇಹದ ಎಲ್ಲಾ ಅಂಗಗಳಿಗೆ ಪೋಷಣೆಯನ್ನು ನೀಡುತ್ತದೆ. ನಂತರ ಈ ರಸದಿಂದ ಕ್ರಮವಾಗಿ ರಕ್ತ ಹಾಗೂ ಇತರೆ ಧಾತುಗಳು ನಿರ್ಮಾಣವಾಗುತ್ತವೆ.
ಈ ಪೋಷಣೆಯ ಸರಪಳಿಯಲ್ಲಿ ಏನಾದರೂ ಅಡಚಣೆ ಉಂಟಾದರೆ ಅದರ ಪರಿಣಾಮ ಮೊದಲು ಚರ್ಮದ ಮೇಲೆ ಕಾಣಿಸಬಹುದು. ಆದ್ದರಿಂದ ಚರ್ಮದ ಒಣತನ, ಸಂವೇದನಾಶೀಲತೆ ಅಥವಾ ಬಣ್ಣದ ಬದಲಾವಣೆಗಳು ದೇಹದ ಒಳಗಿನ ಪೋಷಣೆಯ ಅಸಮತೋಲನವನ್ನು ಸೂಚಿಸಬಹುದು.
ಋತುಭೇದವೂ ಮಕ್ಕಳ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಚರ್ಮ ಹೆಚ್ಚು ಒಣಗುತ್ತದೆ ಮತ್ತು ಬಿಳಿ ಮಚ್ಚೆಗಳು ಹೆಚ್ಚು ಕಾಣಬಹುದು. ಬೇಸಿಗೆಯಲ್ಲಿ ಸೂರ್ಯತಾಪದಿಂದ ಸುತ್ತಲಿನ ಚರ್ಮ ಕಪ್ಪಾಗುವುದರಿಂದ ಈ ಮಚ್ಚೆಗಳು ಸ್ಪಷ್ಟವಾಗಿ ಕಾಣುತ್ತವೆ. ಇದು ರೋಗದ ಹೆಚ್ಚಳವಲ್ಲ; ಕೇವಲ ದೃಶ್ಯ ವ್ಯತ್ಯಾಸ.
ಹೀಗಾಗಿ ಮಕ್ಕಳ ಮುಖದಲ್ಲಿ ಕಾಣಿಸುವ ಬಿಳಿ ಮಚ್ಚೆಗಳು ಬಹುತೇಕ ಸಂದರ್ಭಗಳಲ್ಲಿ ಅಪಾಯಕಾರಿ ಅಲ್ಲ. ಚಿಕಿತ್ಸೆಯ ದೃಷ್ಟಿಯಿಂದ ಮೂಲ ಕಾರಣವನ್ನು ಸರಿಪಡಿಸುವುದು ಅತ್ಯಂತ ಮುಖ್ಯ. ಜೀರ್ಣಕ್ರಿಯೆಯನ್ನು ಸುಧಾರಿಸುವ ಕ್ರಮಗಳು, ಅಗತ್ಯವಿದ್ದಲ್ಲಿ ಜಂತು ಹುಳು ನಿವಾರಣ ಕ್ರಮಗಳು, ಪೋಷಕಾಂಶಯುಕ್ತ ಆಹಾರ, ಚರ್ಮವನ್ನು ತೇವವಾಗಿಡುವ ಸ್ನಿಗ್ಧ ಕ್ರಮಗಳು, ಮತ್ತು ಸೂರ್ಯತಾಪದಿಂದ ರಕ್ಷಣೆ ಇವುಗಳಿಂದ ನಿಧಾನವಾಗಿ ಚರ್ಮದ ಸ್ವಾಭಾವಿಕ ಬಣ್ಣ ಮತ್ತು ಕಾಂತಿ ಮರುಸ್ಥಾಪನೆ ಆಗುತ್ತದೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳ ಮುಖದಲ್ಲಿ ಕಾಣುವ ಬಿಳಿ ಚುಕ್ಕೆಗಳು ಅಪಾಯಕಾರಿ ಅಥವಾ ಸಾಂಕ್ರಾಮಿಕವಾಗಿರುವುದಿಲ್ಲ. ಸರಿಯಾದ ಆಹಾರ, ಸ್ವಚ್ಛತೆ, ಮತ್ತು ಚರ್ಮದ ಆರೈಕೆ ಮೂಲಕ ಈ ಸ್ಥಿತಿಯನ್ನು ನಿಯಂತ್ರಿಸಬಹುದು ಮತ್ತು ಮಕ್ಕಳ ಚರ್ಮದ ಆರೋಗ್ಯವನ್ನು ಉತ್ತಮಗೊಳಿಸಬಹುದು. ಒಂದು ಅಥವಾ ಎರಡು ತಿಂಗಳಿಗೂ ಮಚ್ಚೆಗಳು ಕಡಿಮೆಯಾಗದಿದ್ದರೆ, ಅಥವಾ ಅವು ಸ್ಪಷ್ಟ ಗಡಿಯೊಂದಿಗೆ ಹೆಚ್ಚುತ್ತಿದೆಯಾದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಪೋಷಕರು ಭಯಪಡುವುದಕ್ಕಿಂತ ಅರಿವು ಬೆಳೆಸಿಕೊಂಡರೆ ಮಕ್ಕಳ ಆರೋಗ್ಯವನ್ನು ಉತ್ತಮವಾಗಿ ಕಾಪಾಡಬಹುದು.
ಮಾಹಿತಿ: ಡಾ. ಪೂರ್ಣಿಮಾ ಎನ್, ಸಹ ಪ್ರಾಧ್ಯಾಪಕಿ, ಕೌಮಾರಭೃತ್ಯ ವಿಭಾಗ (ಆಯುರ್ವೇದ ಮಕ್ಕಳ ರೋಗ ತಜ್ಞರು) ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಹೆಗ್ಗೇರಿ ಬಡಾವಣೆ ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.