ADVERTISEMENT

ಗಮನಿಸಿ: ಮುಖದಲ್ಲಿನ ‘ಟ್ಯಾನ್’ ಕಡಿಮೆ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 12:29 IST
Last Updated 18 ನವೆಂಬರ್ 2025, 12:29 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಮುಖದ ಬಣ್ಣ ಮಾಸುವುದು (ಟ್ಯಾನ್) ಬರುವುದು ಎಂದರೆ ಚರ್ಮವು ಗಡುಸಾಗುವುದು. ಇದಕ್ಕೆ ಮುಖ್ಯ ಕಾರಣ ಸೂರ್ಯನ ಕಿರಣಗಳು. ನಮ್ಮ ಚರ್ಮದಲ್ಲಿರುವ ಮೆಲನೋಸೈಟ್ಸ್ ಎಂಬ ಕೋಶಗಳು ನೇರಳಾತೀತ ಕಿರಣಗಳಿಗೆ ಪ್ರತಿಕ್ರಿಯಿಸಿ ಮೆಲನಿನ್ ಎಂಬ ವರ್ಣದ್ರವ್ಯವನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುತ್ತವೆ. ಇದು ಚರ್ಮವನ್ನು ರಕ್ಷಿಸುವ ಸಹಜ ಪ್ರಕ್ರಿಯೆಯಾಗಿದ್ದರೂ, ಅತಿಯಾದ ಮೆಲನಿನ್ ಉತ್ಪಾದನೆಯಿಂದ ಚರ್ಮವನ್ನು ಕಪ್ಪಾಗಿಸುತ್ತದೆ.

ದೀರ್ಘಕಾಲ ಬಿಸಿಲಿನಲ್ಲಿ ಕೆಲಸ ಮಾಡುವುದು, ವಾಹನ ಚಲಾಯಿಸುವಾಗ ಬಿಸಿಲಿಗೆ ಒಡ್ಡಿಕೊಳ್ಳುವುದು ಹಾಗೂ ಪ್ರಯಾಣದ ಸಮಯದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವುದು. ಇವೆಲ್ಲವೂ ಬಣ್ಣ ಮಾಸುವಿಕೆಗೆ ಕಾರಣವಾಗುತ್ತವೆ. ವಿಶೇಷವಾಗಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸೂರ್ಯನ ಕಿರಣಗಳು ಅತ್ಯಂತ ತೀವ್ರವಾಗಿರುತ್ತವೆ. ಈ ಸಮಯದಲ್ಲಿ ಚರ್ಮದ ರಕ್ಷಣೆ ಬಹಳ ಮುಖ್ಯ. 

ADVERTISEMENT

ಬಣ್ಣ ಮಾಸುವಿಕೆಗೆ ಮನೆಮದ್ದುಗಳು: 

  • ನಿಂಬೆ ಮತ್ತು ಜೇನುತುಪ್ಪ: ನಿಂಬೆ ರಸದಲ್ಲಿರುವ ವಿಟಮಿನ್ ಸಿ ನೈಸರ್ಗಿಕ ಬ್ಲೀಚಿಂಗ್ ಗುಣವನ್ನು ಹೊಂದಿದೆ. ಒಂದು ಚಮಚ ನಿಂಬೆ ರಸಕ್ಕೆ ಅರ್ಧ ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿ 15 ನಿಮಿಷ ಬಿಟ್ಟು ತೊಳೆಯಿರಿ.

  • ಮೊಸರು ಮತ್ತು ಬೇಸನ್: ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಜೀವಕೋಶಗಳನ್ನು ತೆಗೆದು ಚರ್ಮಕ್ಕೆ ಕಾಂತಿ ನೀಡುತ್ತದೆ. ಎರಡು ಚಮಚ ಮೊಸರು ಮತ್ತು ಒಂದು ಚಮಚ ಬೇಸನ್ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ತೊಳೆಯಿರಿ.

  • ಟೊಮ್ಯಾಟೊ ಮತ್ತು ಪನ್ನೀರು (ಗುಲಾಬಿ ರಸ) : ಟೊಮ್ಯಾಟೊದ ರಸವನ್ನು ಪನ್ನೀರಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಬಣ್ಣ ಮಾಸುವಿಕೆಯನ್ನು ಗುಣಪಡಿಸುತ್ತದೆ.

  • ಅಲೋವೆರಾ ಜೆಲ್: ತಾಜಾ ಅಲೋವೆರಾ ಜೆಲ್ ಅನ್ನು ನೇರವಾಗಿ ಮುಖಕ್ಕೆ ಹಚ್ಚಿ 20 ನಿಮಿಷ ಇಟ್ಟು ತೊಳೆಯಿರಿ. ಇದು ಚರ್ಮವನ್ನು ತಂಪುಗೊಳಿಸುತ್ತದೆ ಮತ್ತು ನೈಸರ್ಗಿಕ ಬಣ್ಣವನ್ನು ಮರಳಿ ತರುತ್ತದೆ.

  • ಹಾಲು ಮತ್ತು ಬಾದಾಮಿ ಪುಡಿ: ಬಾದಾಮಿ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ, ಮುಖಕ್ಕೆ ಸ್ಕ್ರಬ್ ಮಾಡಿ. ಇದು ಎಕ್ಸ್‌ಫೋಲಿಯೇಷನ್‌ ಮಾಡುತ್ತದೆ ಮತ್ತು ಚರ್ಮವನ್ನು ಪ್ರಕಾಶಮಾನಗೊಳಿಸುತ್ತದೆ.

ತಡೆಗಟ್ಟುವ ಕ್ರಮಗಳು:

  • ಸನ್‌ಸ್ಕ್ರೀನ್ ಬಳಕೆ: ಮನೆಯಿಂದ ಹೊರ ಹೋಗುವಾಗ ಮೊದಲು ಎಸ್‌ಪಿಎಫ್ 30 ಅಥವಾ ಅದಕ್ಕಿಂತ ಹೆಚ್ಚಿನ ಸನ್‌ಸ್ಕ್ರೀನ್ ಹಚ್ಚುವುದು ಅತ್ಯಗತ್ಯ. 

  • ಸೂರ್ಯನ ಕಿರಣದಿಂದ ಪಾರಾಗಿ: ಟೋಪಿ, ಸ್ಕಾರ್ಫ್, ಸನ್‌ಗ್ಲಾಸ್ ಮುಂತಾದವುಗಳನ್ನು ಬಳಸಿ ಸೂರ್ಯನ ಕಿರಣಗಳಿಂದ ನೇರವಾಗಿ ರಕ್ಷಣೆ ಪಡೆಯಿರಿ.

  • ಸಮಯ ನಿರ್ವಹಣೆ: ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ.

  • ಸಾಕಷ್ಟು ನೀರು ಕುಡಿಯಿರಿ: ಚರ್ಮದ ಆರೋಗ್ಯಕ್ಕೆ ದಿನಕ್ಕೆ 8 ರಿಂದ10 ಲೋಟ ನೀರು ಕುಡಿಯುವುದು ಅವಶ್ಯಕ.

  • ಆಹಾರ ಪದ್ಧತಿ: ವಿಟಮಿನ್ ಸಿ ಮತ್ತು ಇ ಹೊಂದಿರುವ ಹಣ್ಣು, ತರಕಾರಿಗಳನ್ನು ಸೇವಿಸಿ.

    ಟ್ಯಾನ್ ಕಡಿಮೆ ಮಾಡಲು ತಾಳ್ಮೆ ಅತ್ಯಗತ್ಯ. ನೈಸರ್ಗಿಕ ಪರಿಹಾರಗಳು ದುಷ್ಪರಿಣಾಮವಿಲ್ಲದೆ ಕ್ರಮೇಣ ಫಲಿತಾಂಶ ನೀಡುತ್ತವೆ. ನಿಯಮಿತವಾಗಿ ಈ ಕ್ರಮಗಳನ್ನು ಅನುಸರಿಸಿದರೆ 2 ರಿಂದ 4 ವಾರಗಳಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು.

(ಡಾ. ಶಿರಿನ್ ಫುರ್ಟಾಡೋ, ಹಿರಿಯ ಸಲಹೆಗಾರರು, ವೈದ್ಯಕೀಯ ಮತ್ತು ಸೌಂದರ್ಯ ಚರ್ಮರೋಗ ತಜ್ಞರು, ಆಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.