ADVERTISEMENT

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವನೆ ಉತ್ತಮ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:25 IST
Last Updated 3 ನವೆಂಬರ್ 2025, 7:25 IST
<div class="paragraphs"><p>ಗೆಟ್ಟಿ ಚಿತ್ರ</p></div>

ಗೆಟ್ಟಿ ಚಿತ್ರ

   

ದೇಹದ ಸೂಕ್ಷ್ಮ ಭಾಗಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ನಿರಂತರವಾಗಿ ಬೆಳಕು, ಆಮ್ಲಜನಕ ಹಾಗೂ ಪರಿಸರದ ಒತ್ತಡಗಳಿಗೆ ಒಳಗಾಗುತ್ತದೆ. ಇದು ‘ಆಕ್ಸಿಡೇಟಿವ್’ ಹಾನಿ ಹಾಗೂ ಕಣ್ಣಿನ ಉರಿಯೂತಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕಣ್ಣಿನ ಪೊರೆ, ‘ಮ್ಯಾಕ್ಯುಲರ್’ ಅವನತಿ ಹಾಗೂ ಶುಷ್ಕ ನೇತ್ರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ನಮ್ಮ ದೈನಂದಿನ ಆಹಾರಗಳ ಆಯ್ಕೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಮತೋಲಿತ ಹಾಗೂ ಪೋಷಕಾಂಶಭರಿತ ಆಹಾರ ಸೇವನೆ ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ. ಹಾಗಾದರೆ ಕಣ್ಣಿನ ಆರೋಗ್ಯಕ್ಕಾಗಿ ಯಾವ ಆಹಾರ ಸೇವಿಸಬೇಕು, ಆರೈಕೆ ಹೇಗೆ ಎಂಬುದನ್ನು ನೇತ್ರ ತಜ್ಞರಾದ ಡಾ. ಪ್ರೀತಿ ವಿ. ಅವರು ತಿಳಿಸಿದ್ದಾರೆ. 

ADVERTISEMENT

‘ವಿಟಮಿನ್-ಎ’: 

  • ಇದು ಕಣ್ಣಿನ ಮೇಲ್ಮೈ (ಕಾರ್ನಿಯಾ) ಅನ್ನು ಸ್ವಚ್ಛವಾಗಿರಿಸುವುದರ ಜೊತೆಗೆ ಕಡಿಮೆ ಬೆಳಕಿನಲ್ಲಿ ದೃಷ್ಟಿಸಲು ಸಹಾಯ ಮಾಡುವ ‘ರೆಟಿನಾ’ಕ್ಕೆ ಸಹಕಾರಿಯಾಗಿದೆ. ಅವಶ್ಯಕವಾದ ‘ವಿಟಮಿನ್ -ಎ’ ಕೊರತೆಯಿಂದ ಇರುಳು ಕುರುಡುತನ ಹಾಗೂ ಶುಷ್ಕ ನೇತ್ರ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ‘ವಿಟಮಿನ್-ಎ’ ಸಮೃದ್ಧವಾಗಿರುವ ಆಹಾರ ಸೇವಿಸಿ.  

  • ಕ್ಯಾರೆಟ್, ಗೆಣಸು, ಪಾಲಕ್ ಮತ್ತು ಮೊಟ್ಟೆಗಳನ್ನು ಸೇವಿಸುವುದರಿಂದ ‘ವಿಟಮಿನ್‌–ಎ’ ಸಿಗುತ್ತದೆ. ಇವುಗಳನ್ನು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಬಳಕೆ ಮಾಡುವುದರಿಂದ ದೃಷ್ಟಿ ಸಮಸ್ಯೆಯನ್ನು ತಪ್ಪಿಸಬಹುದು. 

  • ಕಣ್ಣಿನ ಅರೋಗ್ಯಕ್ಕೆ ಅಗತ್ಯ ಪೋಷಕಾಂಶಗಳ ಮತ್ತೊಂದು ಗುಂಪೆಂದರೆ, ‘ಲುಟಿನ್’ ಮತ್ತು ‘ಜಿಯಾಕ್ಸಾಂಥಿನ್’. ಇದು ಪಾಲಕ್, ಎಲೆಕೋಸು ಮತ್ತು ಹೂಕೋಸುಗಳಲ್ಲಿ ಯಥೇಚ್ಛವಾಗಿರುತ್ತದೆ. ಲುಟಿನ್ ಅಥವಾ ಜಿಯಾಕ್ಸಾಂಥಿನ್ ನೀಲಿ ಬೆಳಕಿನಿಂದ ಕಣ್ಣನ್ನು ರಕ್ಷಿಸುವ ನೈಸರ್ಗಿಕ ಫಿಲ್ಟರ್‌ಗಳಾಗಿ ಕೆಲಸ ಮಾಡುತ್ತವೆ. (ಮೊಬೈಲ್‌, ಕಂಪ್ಯೂಟರ್‌, ಇತರೆ ಉಪಕರಣಗಳು ಹಾಗೂ ಸೂರ್ಯನ ಬೆಳಕಿನಿಂದ ಹೊರಹೊಮ್ಮುವ ಹಾನಿಕಾರಕ ಕಿರಣದ ಬೆಳಕು) 

  • ವಯೋಸಹಜ ದೃಷ್ಟಿ ನಷ್ಟಕ್ಕೆ ಕಾರಣಗಳಾದ ಮ್ಯಾಕ್ಯುಲರ್ ಮತ್ತು ಕಣ್ಣಿನ ಪೊರೆಯ ಅಪಾಯವನ್ನೂ ಸಹ ಈ ಪೋಷಕಾಂಶಗಳು ಕಡಿಮೆ ಮಾಡುತ್ತವೆ. ಪ್ರತಿದಿನ ಹಸಿರು ತರಕಾರಿಗಳನ್ನು ಸೇವಿಸುವುದರಿಂದ ರೆಟಿನಾವನ್ನು ಬಲಪಡಿಸಲು ಮತ್ತು ರಕ್ಷಿಸಲು ಸಹಾಯವಾಗುತ್ತದೆ. 

ಒಮೆಗಾ -3 : 

  • ಒಮೆಗಾ -3 ಕೊಬ್ಬಿನಾಮ್ಲವು ಮತ್ತೊಂದು ಅಗತ್ಯ ಪೋಷಕಾಂಶವಾಗಿದೆ. ವಿಶೇಷವಾಗಿ ಕಣ್ಣುಗಳಲ್ಲಿ ಶುಷ್ಕತೆ ಅಥವಾ ಕಿರಿಕಿರಿ ಅನುಭವಿಸುವವರಿಗೆ ಒಮೆಗಾ -3 ಸಹಾಕಾರಿಯಾಗಲಿದೆ.

  • ಸಾಲ್ಮನ್ ಮೀನು, ಅಗಸೆ ಬೀಜ ಮತ್ತು ವಾಲ್ನಟ್‌ಗಳಲ್ಲಿರುವ ‘ಒಮೆಗಾ-3’ ಕೊಬ್ಬಿನಾಮ್ಲಗಳು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಣ್ಣೀರಿನ ಪ್ರಮಾಣ ಹೆಚ್ಚಿಸುತ್ತದೆ ಹಾಗೂ ಅಕ್ಷಿಪಟಲವನ್ನು ರಕ್ಷಿಸುವ ಮೂಲಕ ವಯೋಸಹಜ ಬದಲಾವಣೆಗಳನ್ನು ನಿಧಾನಗೊಳಿಸುತ್ತವೆ ಎಂದು ಅಧ್ಯಯನ ಹೇಳುತ್ತವೆ.

ವಿಟಮಿನ್ ಸಿ’, ‘ವಿಟಮಿನ್ ಇ’ ಮತ್ತು ‘ಆಂಟಿಆಕ್ಸಿಡೆಂಟ್ಸ್‌’ಗಳು : 

  • ‘ವಿಟಮಿನ್ ಸಿ’, ‘ವಿಟಮಿನ್ ಇ’ ಹಾಗೂ ಸತುವಿನಂತಹ ‘ಆಂಟಿಆಕ್ಸಿಡೆಂಟ್ಸ್‌’ (ಉತ್ಕರ್ಷಣ ನಿರೋಧಕಗಳು) ಕಣ್ಣುಗಳನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿ ಮತ್ತು ಕೆಂಪು ಮೆಣಸುಗಳಲ್ಲಿ ಕಂಡುಬರುವ ‘ವಿಟಮಿನ್ ಸಿ’, ಸೂರ್ಯನ ಬೆಳಕು ಮತ್ತು ಮಾಲಿನ್ಯದಿಂದ ಉಂಟಾಗುವ ಹಾನಿಯಿಂದ ಕಣ್ಣಿನ ಮಸೂರವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

  • ಬಾದಾಮಿ, ಸೂರ್ಯಕಾಂತಿ ಬೀಜಗಳು ಮತ್ತು ವಾಲ್ನಟ್‌ಗಳಲ್ಲಿ ಇರುವ ‘ವಿಟಮಿನ್ ಇ’ ಕಣ್ಣಿನ ಕೋಶ ಮತ್ತು ಅಂಗಾಂಶಗಳ ಆರೋಗ್ಯವನ್ನು ಕಾಪಾಡುತ್ತವೆ. ದ್ವಿದಳ ಧಾನ್ಯಗಳು, ಮಾಂಸ, ಚಿಪ್ಪುಮೀನುಗಳಲ್ಲಿರುವ ಸತುವಿನ ಅಂಶ ದೇಹದಲ್ಲಿ ‘ವಿಟಮಿನ್ ಎ’ ಅನ್ನು ಯಕೃತ್ತುನಿಂದ ರೆಟಿನಾಕ್ಕೆ ತಲುಪಿಸಲು ಸಹಾಯ ಮಾಡುತ್ತದೆ.

ಹೈಡ್ರೇಷನ್‌ : 

  • ಕಣ್ಣಿನಲ್ಲಿ ನೀರಿನ ಅಂಶ ಕಾಯ್ದುಕೊಳ್ಳುವುದು (ಹೈಡ್ರೇಷನ್‌) ಸರಳವಾದ ಹಾಗೂ ಕಡೆಗಣಿಸಲ್ಪಟ್ಟ ಅಂಶವಾಗಿದೆ. ಸಾಕಷ್ಟು ನೀರು ಕುಡಿಯುವುದು, ಸೌತೆಕಾಯಿ ಮತ್ತು ಕಲ್ಲಂಗಡಿಯಂತಹ ನೀರು ಸಮೃದ್ಧ ಆಹಾರಗಳನ್ನು ಸೇವಿಸುವುದರಿಂದ ಕಣ್ಣಿನ ಶುಷ್ಕತೆ ಅಥವಾ ಕಿರಿಕಿರಿಯನ್ನು ತಡೆಯಬಹುದು.

  • ಹೆಚ್ಚು ಸಂಸ್ಕರಿಸಿದ ಆಹಾರಗಳು ಅಥವಾ ಸಕ್ಕರೆ ಪದಾರ್ಥಗಳನ್ನು ಸೇವಿಸುವುದರಿಂದ ಕಾಲಾನಂತರದಲ್ಲಿ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಕಣ್ಣಿನ ಆರೋಗ್ಯವು ದೇಹದ ಪೋಷಣೆಯೊಂದಿಗೆ ಆಳವಾಗಿ ನಂಟು ಹೊಂದಿದೆ ಎಂದು ‘ಪಬ್‌ಮೆಡ್‌’ನಲ್ಲಿ ಪ್ರಕಟವಾದ ಅಧ್ಯಯನಗಳನ್ನು ಒಳಗೊಂಡ ವೈಜ್ಞಾನಿಕ ಸಂಶೋಧನೆ ಹೇಳುತ್ತದೆ. 

  • ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಕ್ಯಾರೊಟಿನಾಯ್ಡ್‌ಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿರುವ ಆಹಾರ ಸೇವನೆಯು ದೃಷ್ಟಿ ನಷ್ಟದಿಂದ ರಕ್ಷಿಸುವುದಲ್ಲದೆ ದೈನಂದಿನ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ ಎಂದು ನೇತ್ರತಜ್ಞೆ ಡಾ. ಪ್ರೀತಿ ವಿ. ಅವರು ತಿಳಿಸಿದ್ದಾರೆ. 

(ಡಾ.ಪ್ರೀತಿ ವಿ, ವೈದ್ಯಕೀಯ ಅಧೀಕ್ಷಕರು, ಜನರಲ್ ಆಪ್ತಾಲ್ಮೊಲಜಿ, ಕೆಟರಾಕ್ಟ್ (ಫಾಕೋ), ಕಾರ್ನಿಯಾ ರಿಫ್ರೆಕ್ಟೀವ್, ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಯಲಹಂಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.