ಇಷ್ಟವಾದ ತಿಂಡಿ ಎಂದು ಕೆಲವೊಮ್ಮೆ ಯಥೇಚ್ಛವಾಗಿ ತಿಂದುಬಿಡುತ್ತೇವೆ. ಆದರೆ ಈ ರೀತಿ ತಿಂದಾಗ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು, ಹೊಟ್ಟೆಯುಬ್ಬರ ಕಾಣಿಸಿಕೊಳ್ಳುತ್ತದೆ. ಒಂದಲ್ಲ ಒಂದು ಸಲ ಎಲ್ಲರೂ ಈ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾರೆ,
ಈ ಸಮಸ್ಯೆಯನ್ನು ನಿರ್ಲಕ್ಷಿಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ ನಿಯಂತ್ರಿಸಬಹುದು ಎನ್ನುವ ಬಗ್ಗೆ ಆಯುರ್ವೇದ ತಜ್ಞ ಡಾ. ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.
ಹೊಟ್ಟೆಯ ಒಳಭಾಗವು ಗೋಡೆಯಾಕಾರದಲ್ಲಿ ಇರುತ್ತದೆ. ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ, ಹೊಟ್ಟೆಯೊಳಗಿನ ಗೋಡೆಗೆ ನೇರ ಪರಿಣಾಮ ಉಂಟಾಗಿ ಅಸಿಡಿಟಿ ಉದ್ಭವವಾಗುವ ಸಾಧ್ಯತೆ ಇರುತ್ತದೆ.
ಆಹಾರ ಪದ್ಧತಿ: ಬೆಳಿಗ್ಗಿನ ತಿಂಡಿಯನ್ನು ತಪ್ಪಿಸಿ ಮಧ್ಯಾಹ್ನ ಊಟ ಮಾಡುವುದು. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ, ಯಾವುದೋ ಸಮಯದಲ್ಲಿ ಊಟ ಮಾಡುವುದು ಈ ಸಮಸ್ಯೆಯ ಮುಖ್ಯ ಕಾರಣವಾಗಿದೆ.
ಪದೇ ಪದೇ ಆಹಾರ ಸೇವನೆ: ಊಟ ಸೇವಿಸಿದ ಐದು ಹತ್ತು ನಿಮಿಷಗಳಲ್ಲಿ ಮತ್ತೇನೋ ಸೇವಿಸುವುದರಿಂದ ಸರಿಯಾಗಿ ಜೀರ್ಣಕ್ರಿಯೆ ಆಗದೆ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
ಮಾನಸಿಕ ಒತ್ತಡ: ಮಾನಸಿಕ ಒತ್ತಡಕ್ಕೆ ಒಳಗಾಗಿ ಸರಿಯಾಗಿ ಊಟ, ನಿದ್ದೆ ಮಾಡದೆ ಇರುವುದರಿಂದ ಗ್ಯಾಸ್ಟ್ರಿಕ್‌ಗೆ ಕಾರಣವಾಗಿದೆ.
ಅತಿಯಾದ ಖಾರ ಸೇವನೆ: ಊಟದಲ್ಲಿ ಅತಿಯಾದ ಖಾರ, ಹುಳಿ ಅಂಶವನ್ನು ಹೆಚ್ಚು ಸೇವಿಸುವುದರಿಂದಲೂ ಗ್ಯಾಸ್ಟ್ರಿಕ್ ಬರುತ್ತದೆ.
ಅತಿಯಾದ ಮಾತ್ರೆ ಸೇವನೆ: ದೇಹದಲ್ಲಿ ಕಾಡುವ ಸಣ್ಣ ಪುಟ್ಟ ನೋವುಗಳಿಗೂ ಪದೇ ಪದೇ ಮಾತ್ರೆ ತೆಗೆದುಕೊಳ್ಳುವುದು ಕೂಡ ಅಸಿಡಿಟಿಯನ್ನು ಉಂಟುಮಾಡುತ್ತದೆ.
ಎದೆಉರಿ: ಗ್ಯಾಸ್ಟ್ರಿಕ್‌ಗೆ ಒಳಗಾಗದ ವ್ಯಕ್ತಿಯು ಏನಾದರೂ ಕರಿದ ಪದಾರ್ಥಗಳನ್ನು ಸೇವಿಸಿದಾಗ ಕೂಡಲೇ ಎದೆಯುರಿ ಆರಂಭವಾಗುತ್ತದೆ.
ವಾಕರಿಕೆ: ಅಸಿಡಿಟಿ ಹೆಚ್ಚಾದಾಗ ಬಾಯಿಯಲ್ಲಿ ನೀರು ತುಂಬಿ ವಾಕರಿಕೆ ಬಂದಂತೆ ಆಗುತ್ತದೆ. ಇನ್ನೂ ಕೆಲವರು ಹಳದಿ ಬಣ್ಣದ ಪಿತ್ತವನ್ನು ವಾಂತಿ ಮಾಡುವ ಸಾಧ್ಯತೆ ಇರುತ್ತದೆ.
ದೇಹದ ಅಂಗಗಳಲ್ಲಿ ನೋವು : ಗ್ಯಾಸ್ಟ್ರಿಕ್ ಹೆಚ್ಚಾಗುತ್ತಿದ್ದಂತೆ ಎದೆ, ಹೊಟ್ಟೆ, ಬೆನ್ನು, ಕೈ, ಕಾಲುಗಳು ನೋವು ಆಗುತ್ತಿರುತ್ತವೆ. ಕೆಲವೊಂದು ಬಾರಿ ಉಸಿರಾಟದಲ್ಲಿ ತೊಂದರೆ ಕಾಣಿಸುವ ಸಾಧ್ಯತೆ ಹೆಚ್ಚಿರುತ್ತದೆ.
ತಲೆ ನೋವು: ಕೆಲವರಿಗೆ ಪ್ರತಿದಿನ ತಲೆನೋವು ಕಾಡುತ್ತಿರುತ್ತದೆ.
ಮಲವಿಸರ್ಜನೆಯಲ್ಲಿ ತೊಂದರೆ: ಗ್ಯಾಸ್ಟ್ರಿಕ್‌ಗೆ ಒಳಗಾಗದ ವ್ಯಕ್ತಿಗೆ ಮಲವಿಸರ್ಜನೆ ವೇಳೆ ಉರಿ ಕಾಣಿಸಿಕೊಳ್ಳುವುದು ಕೂಡ ಇದರ ಪ್ರಮುಖ ಲಕ್ಷಣವಾಗಿದೆ.
ಆಹಾರ ಕ್ರಮ : ಪ್ರತಿದಿನ ತಪ್ಪದೇ ನಿಗದಿತ ಸಮಯದೊಳಗೆ ಊಟ ಸೇವಿಸಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಹೆಚ್ಚು ಸೇವಿಸಬಾರದು.
ಉಪ್ಪು, ಶುಂಠಿ ಸೇವನೆ: ಊಟಕ್ಕೂ ಐದು ನಿಮಿಷ ಮೊದಲು ಚಿಟಿಕೆಯಷ್ಟು ಉಪ್ಪು, ಶುಂಠಿಯನ್ನು ಜಜ್ಜಿ, ಚೆನ್ನಾಗಿ ಜಗಿದು ಸೇವಿಸಬೇಕು. ಹೀಗೆ ವಾರದಲ್ಲಿ ಮೂರು ಬಾರಿ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳಬಹುದು.
ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡಬಾರದು : ತಲೆ ನೋವು, ಕೈ, ಕಾಲು ನೋವು ಹೀಗೆ ಸಣ್ಣ ಪುಟ್ಟ ವಿಷಯಗಳಿಗೂ ಮಾತ್ರೆಗಳನ್ನು ಸೇವಿಸುವುದನ್ನು ನಿಯಂತ್ರಿಸುವುದರಿಂದ ಗ್ಯಾಸ್ಟ್ರಿಕ್ ತಡೆಯಲು ಸಹಕಾರಿಯಾಗಿದೆ.
ನಿಯಮಿತ ನೀರು ಸೇವನೆ: ಪ್ರತಿದಿನ 3–4 ಲೀಟರ್ ನೀರು ಕುಡಿಯುವುದರಿಂದ ಅಸಿಡಿಟಿಯನ್ನು ತಪ್ಪಿಸಬಹುದು.
ಮಜ್ಜಿಗೆ ಸೇವನೆ: 1 ಲೋಟ ಮಜ್ಜಿಗೆಗೆ ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಲೋಟ ನೀರು ಬೆರೆಸಿ ಕುಡಿಯುವುದರಿಂದ ಅಸಿಡಿಟಿ ನಿಯಂತ್ರಿಸಿಕೊಳ್ಳಲು ಸಾಧ್ಯ.
ಓಮಕಾಳು: ಉಗುರು ಬೆಚ್ಚಗಿನ ನೀರಿಗೆ ಚಿಟಿಕೆಯಷ್ಟು ಓಮಕಾಳನ್ನು ಸೇರಿಸಿ ಮಿಶ್ರಣ ಮಾಡಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಪ್ಪಿಸಿಕೊಳ್ಳಬಹುದು.
ಜೀರಿಗೆ ನೀರು: ಒಂದು ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಸೇರಿಸಿ ಕುದಿಸಿ ಕುಡಿಯುವುದರಿಂದ ಅಸಿಡಿಟಿಯನ್ನು ನಿಯಂತ್ರಿಸಿಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.