ADVERTISEMENT

ಶಿಶುವಿಗೆ ಲಿಪೊ ಮೆನಿಂಗೋ ಸೆಲ್ ಸಮಸ್ಯೆ: ಗರ್ಭಾವಸ್ಥೆಯಲ್ಲಿ ವಹಿಸಲೇಬೇಕಾದ ಎಚ್ಚರ

ಪ್ರಜಾವಾಣಿ ವಿಶೇಷ
Published 9 ಸೆಪ್ಟೆಂಬರ್ 2025, 6:09 IST
Last Updated 9 ಸೆಪ್ಟೆಂಬರ್ 2025, 6:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಕ್ಕಳ ಪೋಷಣೆ ಸಂತೋಷದ ಸಂಗತಿ. ಆದರೆ, ಅದೇ ಸಮಯದಲ್ಲಿ ತುಂಬಾ ನಿರ್ಣಾಯಕವೂ ಹೌದು. ಪೋಷಕರು ಸ್ವಲ್ಪ ಎಚ್ಚರ ತಪ್ಪಿದರೂ, ಮಗುವಿನ ಜೀವನವಿಡೀ ತೊಂದರೆ ಉಂಟಾಗುವ ಪರಿಸ್ಥಿತಿ ಬರಬಹುದು.

ಇತ್ತೀಚೆಗೆ ಬೆನ್ನಿನ ಕೆಳಭಾಗದಲ್ಲಿ ಟೆನಿಸ್ ಚೆಂಡಿನಷ್ಟು ದೊಡ್ಡ ಊತದಿಂದಾಗಿ ದಕ್ಷಿಣ ಬೆಂಗಳೂರಿನ 3 ತಿಂಗಳ ಮಗುವೊಂದನ್ನು ಆಸ್ಪತ್ರೆಗೆ ತರಲಾಯಿತು. ಗರ್ಭಾವಸ್ಥೆಯಲ್ಲಿದ್ದಾಗ ಮಾಡಿದ ಸ್ಕ್ಯಾನ್‌ಗಳಲ್ಲಿ ಎಲ್ಲವೂ ಸರಿಯಿದೆಯೆಂದು ತೋರಿಸಿತ್ತು. ಆದರೆ, ಹುಟ್ಟಿದ ನಂತರ ಈ ದೋಷ ಕಂಡುಬಂದಿತ್ತು. ಪೋಷಕರು ತುಂಬಾ ಆತಂಕಗೊಂಡಿದ್ದರು.

ADVERTISEMENT

ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿಗೆ ಲಿಪೊ ಮೈಲೋ ಮೆನಿಂಗೊ ಸೆಲ್ (ಲಿಪೊಎಂಎಂಸಿ) ಎಂಬ ವಿರಳ ದೋಷವಿದೆ ಎಂದು ತಿಳಿಯಿತು. ಇದು ಬೆನ್ನುಹುರಿಯ ನರಗಳು ಮತ್ತು ಕೊಬ್ಬಿನ ಅಂಶ ಬೆನ್ನುಹುರಿಯ ಕಾಲುವೆಯಿಂದ ಹೊರಗೆ ಬಂದು ಚರ್ಮದ ಅಡಿಯಲ್ಲಿ ಸೇರುವ ಸ್ಥಿತಿ. ಸಾಮಾನ್ಯವಾಗಿ ಗರ್ಭಾವಸ್ಥೆಯ ಆರಂಭದಲ್ಲಿ ಫೋಲಿಕ್ ಆಮ್ಲದ ಕೊರತೆ ಇದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಲಿಪೊಎಂಎಂಸಿ ಎಂದರೇನು?

ಲಿಪೊಎಂಎಂಸಿ ಸ್ಪೈನಾ ಬೈಫಿಡಾದ ಒಂದು ಅಪರೂಪದ ಮಾದರಿ. ಇದರಲ್ಲಿ ಬೆನ್ನುಹುರಿ ಮತ್ತು ನರಗಳು ಸರಿಯಾಗಿ ಬೆಳೆಯುವುದಿಲ್ಲ. ಆದರೆ, ಇದು ಚರ್ಮದಿಂದ ಆವೃತವಾಗಿರುವುದರಿಂದ ಕೆಳ ಬೆನ್ನಿನ ಬಳಿ ಕೊಬ್ಬಿನ ಗಂಟಿನಂತೆ ಕಾಣುತ್ತದೆ. ಜನನದ ವೇಳೆಯಲ್ಲಿ ಇದು ಅಪಾಯಕಾರಿಯಲ್ಲವೆಂದು ತೋರುತ್ತದೆ. ಆದರೆ, ನಂತರ ಕಾಲುಗಳಲ್ಲಿ ದುರ್ಬಲತೆ, ಮಲ ಅಥವಾ ಮೂತ್ರ ಸಮಸ್ಯೆಗಳಂತಹ ಗಂಭೀರ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ದೀರ್ಘಕಾಲದ ಹಾನಿ ತಪ್ಪಿಸಬಹುದು ಎಂದು ಮದರ್ ಹುಡ್ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞ ಡಾ. ನಿತಿನ್ ಕುಮಾರ್ ವಿವರಿಸಿದ್ದಾರೆ.

‘ಈ ಸ್ಥಿತಿ ಸಾಮಾನ್ಯವಾಗಿ ಮಗು ಹುಟ್ಟಿದ ತಕ್ಷಣ ಲಕ್ಷಣವನ್ನು ತೋರಿಸುವುದಿಲ್ಲ. ಆದರೆ, ನರಗಳ ಕೊಳವೆ ಸರಿಯಾಗಿ ಮುಚ್ಚದೆ ಇದ್ದಾಗ, ಕೊಬ್ಬು ಮತ್ತು ನರಗಳ ಅಂಗಾಂಶದಿಂದ ಸಣ್ಣ ಚೀಲದಂತೆ ಊತವು ಬೆನ್ನಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತದೆ’ ಎಂದು ಮದರ್ ಹುಡ್ ಆಸ್ಪತ್ರೆಯ ಹಿರಿಯ ನಿಯೋನಾಟಾಲಜಿಸ್ಟ್ ಡಾ. ಸಂತೋಷ್ ಕುಮಾರ್ ಹೇಳಿದ್ದಾರೆ.

‘ಶಿಶು ವೈದ್ಯನಾಗಿ ನಾನು ಹಲವು ಜನ್ಮಜಾತ ದೋಷಗಳ ಪರಿಣಾಮಗಳನ್ನು ನೋಡಿದ್ದೇನೆ. ಆದರೆ, ಲಿಪೊಎಂಎಂಸಿ ಪ್ರಕರಣಗಳು ಹೆಚ್ಚು ಸವಾಲಿನವು. ಇದು ಕೇವಲ ಜನ್ಮದೋಷವಲ್ಲ, ಮಗುವಿನ ನರ ವ್ಯವಸ್ಥೆ, ಚಲನಶೀಲತೆ ಮತ್ತು ಭವಿಷ್ಯದ ಜೀವನಮಟ್ಟವನ್ನೇ ಪ್ರಭಾವಿಸುತ್ತದೆ. ನಮ್ಮ ಅನುಭವದಲ್ಲಿ ಆರಂಭಿಕ ರೋಗ ಪತ್ತೆ, ಬಹುಶಿಸ್ತೀಯ ಆರೈಕೆ ಮತ್ತು ಸಂಶೋಧನೆ ಬಹಳ ಮುಖ್ಯ. ಚಿಕಿತ್ಸಾ ಪ್ರಕ್ರಿಯೆ ಕಷ್ಟಕರವಾದರೂ, ಸರಿಯಾದ ಶಸ್ತ್ರಚಿಕಿತ್ಸಾ ವಿಧಾನ, ವೈದ್ಯಕೀಯ ತಂಡ ಮತ್ತು ಬೆಂಬಲ ಇದ್ದರೆ, ಇಂತಹ ಮಕ್ಕಳಿಗೆ ಕೇವಲ ಬದುಕನ್ನು ಮಾತ್ರವಲ್ಲ, ಗುಣಮಟ್ಟದ ಜೀವನವನ್ನು ಕೊಡಬಹುದು. ಫೋಲಿಕ್ ಆಮ್ಲ ಸಪ್ಲಿಮೆಂಟ್ ಸೇವನೆಯಂತಹ ಪ್ರಸವಪೂರ್ವ ಆರೈಕೆಯಿಂದಲೂ ಇದನ್ನು ತಡೆಗಟ್ಟಬಹುದು’ ಎಂದು ಸಂತೋಷ್ ತಿಳಿಸಿದ್ದಾರೆ.

ಎಷ್ಟು ಸಾಮಾನ್ಯ?

ಈ ದೋಷವು ಸುಮಾರು 1,000 ಮಕ್ಕಳಲ್ಲಿ ಕೇವಲ 0.3ರಿಂದ 1 ಮಗುವಿನಲ್ಲಿ ಮಾತ್ರ ಕಂಡುಬರುತ್ತದೆ. ಆದರೆ, ಗರ್ಭಾವಸ್ಥೆಯ ಆರಂಭದಲ್ಲೇ ಫೋಲಿಕ್ ಆಮ್ಲ ಸೇವನೆ ಮಾಡಿದರೆ ಇದನ್ನು ತಡೆಯಬಹುದು. ಹುಟ್ಟಿದ ತಕ್ಷಣ ಮಗು ಆರೋಗ್ಯವಾಗಿದ್ದರೂ, ನಿಧಾನವಾಗಿ ಸಣ್ಣ ಲಕ್ಷಣಗಳು ಗೋಚರಿಸ ತೊಡಗುತ್ತವೆ.

ಶಸ್ತ್ರಚಿಕಿತ್ಸೆಯ ನಿರ್ಣಯ

ಮೊದಲ ಮೂರು ತಿಂಗಳಲ್ಲಿ ಶಿಶುಗಳು ತುಂಬಾ ವೇಗವಾಗಿ ಬೆಳೆಯುತ್ತವೆ. ಆದ್ದರಿಂದ ಕೆಲವು ವಾರ ಕಾಯುವುದರಿಂದ ಶಸ್ತ್ರಚಿಕಿತ್ಸೆ ಇನ್ನಷ್ಟು ಸುರಕ್ಷಿತವಾಗುತ್ತದೆ. ಮೂರನೇ ತಿಂಗಳಲ್ಲಿ ಮಗುವಿನ ತೂಕ ಚೆನ್ನಾಗಿತ್ತು. ಆದರೆ, ಕರುಳಿನ ಕೆಲವು ಲಕ್ಷಣಗಳು ಗೋಚರಿಸಿದ್ದರಿಂದ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕಾಯಿತು ಎಂದು ಡಾ. ಸಂತೋಷ್ ಕುಮಾರ್ ಹೇಳಿದ್ದಾರೆ.

‘ನಮ್ಮ ಗುರಿ... ಲಿಪೊಮಾಟಸ್ ಅಂಗಾಂಶ ತೆಗೆದುಹಾಕುವುದು ಮತ್ತು ಬೆನ್ನುಹುರಿಯನ್ನು ಬಿಡಿಸುವ ಮೂಲಕ ದೀರ್ಘಾವಧಿಯ ನರ ಹಾನಿ ತಪ್ಪಿಸುವುದಾಗಿದೆ. ಶಸ್ತ್ರಚಿಕಿತ್ಸಕರ, ನಿಯೋನಾಟಾಲಜಿಸ್ಟ್ ಮತ್ತು ಅರಿವಳಿಕೆ ತಜ್ಞರ ತಂಡ ಸೇರಿ ಶಸ್ತ್ರಚಿಕಿತ್ಸೆ ನಡೆಸಿತು. ಇದರಲ್ಲಿ ಕೊಬ್ಬಿನ ಅಂಶ ತೆಗೆದುಹಾಕಿ, ಬೆನ್ನುಹುರಿಯನ್ನು ಬಿಡಿಸಿ, ಡ್ಯೂರಲ್ ಪ್ಯಾಚ್ ಬಳಸಿ ರಕ್ಷಣಾತ್ಮಕ ಪದರವನ್ನು ಪುನರ್ನಿರ್ಮಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಮಗುವಿಗೆ ಯಾವುದೇ ನರ ಹಾನಿಯಾಗಲಿಲ್ಲ’ ಎಂದು ಡಾ. ನಿತಿನ್ ವಿವರಿಸಿದ್ದಾರೆ.

‘ಶಸ್ತ್ರಚಿಕಿತ್ಸೆಯ ನಂತರ ಸ್ವಲ್ಪ ಮಲಚಲನ ತೊಂದರೆ ಇತ್ತು. ಆದರೆ, ಅದನ್ನು ಸಾಂಪ್ರದಾಯಿಕ ಚಿಕಿತ್ಸೆಯಿಂದ ನಿಯಂತ್ರಿಸಲಾಯಿತು. ಮುಖ್ಯವಾಗಿ ಕಾಲು ದುರ್ಬಲತೆ ಅಥವಾ ನರ ಹಾನಿಯ ಲಕ್ಷಣ ಕಾಣಿಸಲಿಲ್ಲ. ಸರಿಯಾದ ಸಮಯದಲ್ಲಿ ಮಾಡಿದ ಮಧ್ಯಸ್ಥಿಕೆ, ತಜ್ಞರ ಸಹಕಾರ ಮತ್ತು ಹಂತ-ಹಂತವಾಗಿ ರೂಪಿಸಿದ ಶಸ್ತ್ರಚಿಕಿತ್ಸಾ ಯೋಜನೆಯಿಂದ ಮಗು ಚೇತರಿಸಿಕೊಂಡಿತು’ ಎಂದೂ ಅವರು ಹೇಳಿದ್ದಾರೆ.

‘ಗರ್ಭಧಾರಣೆಯ ಮೊದಲು ಫೋಲಿಕ್ ಆಮ್ಲ ಸೇವನೆ ಮಾಡಿದರೆ ಮೆನಿಂಗೊಮೈಲೋಸೆಲ್ ಅಥವಾ ಎಂಎಂಸಿ ತಡೆಯಬಹುದು. ಲಿಪೊಎಂಎಂಸಿ ವಿವಿಧ ಎಂಎಂಸಿಯಲ್ಲಿ, ಕೊಬ್ಬಿನ ಅಂಶ ಬೆನ್ನುಹುರಿಯ ಕೊಳವೆಯಿಂದ ಹೊರಗೆ ಬಂದು ಚರ್ಮದ ಕೆಳಗೆ ಸೇರುತ್ತದೆ. ಇದು ಚರ್ಮದಿಂದ ಆವೃತ ಗಡ್ಡೆಯಂತೆ ಕಾಣುತ್ತದೆ. ಇದನ್ನು ಶಸ್ತ್ರಚಿಕಿತ್ಸೆಯಿಂದಲೇ ತೆಗೆದುಹಾಕಬೇಕು. ಇಲ್ಲದಿದ್ದರೆ ನರ ಹಾನಿ ಶಾಶ್ವತವಾಗುತ್ತದೆ. ಕಾಲು ದುರ್ಬಲತೆ, ಮೂತ್ರ ಮತ್ತು ಮಲವಿಸರ್ಜನೆಯ ನಿಯಂತ್ರಣ ತಪ್ಪುತ್ತದೆ ಎಂದೂ ಅವರು ವಿವರಿಸಿದ್ದಾರೆ.

ಪೋಷಕರ ಪ್ರಶ್ನೆ...

‘ಅಂತಹ ದೋಷಗಳು ಸ್ಕ್ಯಾನ್‌ನಲ್ಲಿ ಕಾಣಿಸಿಕೊಳ್ಳಲಿಲ್ಲವೇ’ ಎಂದು ಪೋಷಕರು ಪದೇ ಪದೇ ಪ್ರಶ್ನೆ ಕೇಳುತ್ತಾರೆ. ಇದು ಸಹಜ ಕಾಳಜಿ. ಆದರೆ, ಅನೇಕ ಸಂದರ್ಭಗಳಲ್ಲಿ ಲಿಪೊಎಂಎಂಸಿಯಂತಹ ಸೂಕ್ಷ್ಮ ದೋಷಗಳು ಅಲ್ಟ್ರಾಸೌಂಡ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಚರ್ಮದ ಕೆಳಗೆ ಊತವಿದ್ದಾಗ ಪತ್ತೆಹಚ್ಚುವುದು ಕಷ್ಟ. ಆದರೆ, 18ರಿಂದ 22 ವಾರಗಳ ನಡುವೆ ಮಾಡುವ ಹೆಚ್ಚಿನ ರೆಸಲ್ಯೂಶನ್‌ ಇರುವ ಅನಾಮಲಿ ಸ್ಕ್ಯಾನ್ ಪತ್ತೆ ಹಚ್ಚುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದರೂ ಪತ್ತೆ ಸ್ಕ್ಯಾನ್ ಗುಣಮಟ್ಟ, ಸಮಯ ಮತ್ತು ತಜ್ಞರ ಅನುಭವದ ಮೇಲೆ ಅವಲಂಬಿಸುತ್ತದೆ. ಕೆಲವು ನರ ಕೊಳವೆ ದೋಷಗಳು ಆನುವಂಶಿಕವಾಗಿದ್ದರೂ, ಬಹುತೇಕ ದೋಷಗಳನ್ನು ಸರಳ ಚಿಕಿತ್ಸೆಯಿಂದ ತಪ್ಪಿಸಬಹುದು. ಫೋಲಿಕ್ ಆಮ್ಲ ಮಾತ್ರೆಗಳನ್ನು ಗರ್ಭಧಾರಣೆಗೆ 3–4 ತಿಂಗಳ ಮೊದಲು ಸೇವನೆ ಮಾಡಬಹುದು ಎಂಬುದು ವೈದ್ಯರ ಉತ್ತರ.

ಗರ್ಭಾವಸ್ಥೆಯನ್ನು ಯೋಜಿಸುವ ಮಹಿಳೆಯರಿಗೆ ಫೋಲಿಕ್ ಆಮ್ಲ ಏಕೆ ಮುಖ್ಯ?

1. ಪೂರೈಕೆಯ ಉದ್ದೇಶ.

• ಸ್ಪಿನಾ ಬೈಫಿಡಾ ಮಾದರಿಯ ನರ ಕೊಳವೆ ದೋಷಗಳನ್ನು (ಎನ್‌ಟಿಡಿ) ತಡೆಯುತ್ತದೆ.

• ಮಗುವಿನ ಮೆದುಳು ಮತ್ತು ಬೆನ್ನುಹುರಿ ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.

2. ಸಮಯ ನಿರ್ಣಾಯಕ

• ಗರ್ಭಧಾರಣೆಗೆ ಕನಿಷ್ಠ 3 ತಿಂಗಳ ಮೊದಲು ಪ್ರಾರಂಭಿಸಿ, ಗರ್ಭಾವಸ್ಥೆಯ ಆರಂಭದವರೆಗೂ ಮುಂದುವರಿಸಬೇಕು.

• ನರ ಕೊಳವೆಗಳು ಗರ್ಭಧಾರಣೆಯ ಮೊದಲ 28 ದಿನಗಳಲ್ಲಿ ಬೆಳೆಯುತ್ತವೆ. ಕೆಲವೊಮ್ಮೆ ಮಹಿಳೆಗೆ ತಾನು ಗರ್ಭಿಣಿ ಎಂಬುದು ಗೊತ್ತಾಗುವ ಮುಂಚೆಯೇ.

3. ಆಹಾರ ಮಾತ್ರ ಸಾಕಾಗುವುದಿಲ್ಲ ಏಕೆ?

• ಹಸಿರು ತರಕಾರಿಗಳಂತಹ ಆಹಾರದಿಂದ ಬರುವ ನೈಸರ್ಗಿಕ ಫೋಲೇಟ್ ಸಾಕಾಗುವುದಿಲ್ಲ.

• ಅಗತ್ಯ ಪ್ರಮಾಣವನ್ನು ತಲುಪಿಸಲು ಮಾತ್ರೆಗಳು ಅಗತ್ಯ.

4. ಮಧುಮೇಹ ಇರುವ ಮಹಿಳೆಯರಿಗೆ ವಿಶೇಷ ಸೂಚನೆ

• ಇವರಿಗೆ ತೊಂದರೆಗಳ ಸಾಧ್ಯತೆ ಹೆಚ್ಚು.

• ಫೋಲಿಕ್ ಆಮ್ಲದ ಬೇಡಿಕೆ ಹೆಚ್ಚಾಗುತ್ತದೆ. ಆದ್ದರಿಂದ ಪೂರೈಕೆ ಇನ್ನಷ್ಟು ಮುಖ್ಯ.

5. ಇತರ ಸಲಹೆಗಳು (ರಕ್ತಹೀನತೆ ತಪಾಸಣೆ)

• ಮದುವೆ ಅಥವಾ ಗರ್ಭಧಾರಣೆಗೆ ಮುಂಚೆ, ಪ್ರತಿ 6 ತಿಂಗಳಿಗೆ ಒಮ್ಮೆ ರಕ್ತಹೀನತೆ ಪರೀಕ್ಷೆ ಮಾಡಿಸಬೇಕು.

• ಕಬ್ಬಿಣ ಮತ್ತು ಫೋಲಿಕ್ ಆಮ್ಲ ಕೊರತೆ ಸಾಮಾನ್ಯ. ಆದರೆ ಗರ್ಭಾವಸ್ಥೆಯ ಫಲಿತಾಂಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಕೊನೆಯ ಸಂದೇಶ

ಮದುವೆಗೆ ಮುಂಚಿನ ಹಾಗೂ ಗರ್ಭಧಾರಣೆಗೆ ಮುಂಚಿನ ಆರೋಗ್ಯ ಸಮಾಲೋಚನೆ ನರ್ಸರಿ ಪ್ಲಾನ್ ಮಾಡುವಷ್ಟೇ ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ಸ್ತ್ರೀರೋಗ ತಜ್ಞರೊಂದಿಗಿನ ಒಂದು ಸಂಭಾಷಣೆ ದಂಪತಿಗಳಿಗೆ ಸರಿಯಾದ ಮಾಹಿತಿಯನ್ನು ನೀಡುತ್ತದೆ. ಈ ಪ್ರಕರಣ ಯಶಸ್ವಿಯಾಗಿ ಮುಗಿದಿದ್ದರೂ, ಇದು ನಮಗೆ ಸ್ಪಷ್ಟವಾಗಿ ತೋರಿಸುತ್ತದೆ. ಆರಂಭಿಕ ಬೆಳವಣಿಗೆ ಎಷ್ಟು ಸೂಕ್ಷ್ಮ, ಮತ್ತು ಒಂದು ಸಣ್ಣ ಸಪ್ಲಿಮೆಂಟ್ ಕೂಡ, ಜೀವನವಿಡೀ ಎದುರಿಸಬೇಕಾದ ಸಂಕಟ ಮತ್ತು ಆರೋಗ್ಯಕರ ಭವಿಷ್ಯದ ನಡುವೆ ವ್ಯತ್ಯಾಸವನ್ನು ತರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.