
ಚಿತ್ರ: ಗೆಟ್ಟಿ
ಕಡಿಮೆ ತೂಕವಿರುವುದು ಅನೇಕರ ಸಮಸ್ಯೆಯಾಗಿರುತ್ತದೆ. ಅವರು ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸುವುದು ಮುಖ್ಯ. ಜಂಕ್ ಫುಡ್ ತಿನ್ನುವುದರಿಂದ ತೂಕ ಗಣನೀಯವಾಗಿ ಹೆಚ್ಚಾದರೂ, ಧೀರ್ಘಕಾಲದಲ್ಲಿ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಸರಿಯಾದ ಪೌಷ್ಟಿಕಾಂಶಗಳೊಂದಿಗೆ ತೂಕ ಹೆಚ್ಚಿಸುವುದು ಅತ್ಯಗತ್ಯ.
ಪೌಷ್ಟಿಕಾಂಶ ಸಮೃದ್ಧ ಆಹಾರ:
ತೂಕ ಹೆಚ್ಚಿಸಲು ಹೆಚ್ಚು ಕ್ಯಾಲೋರಿಗಳನ್ನು ಸೇವಿಸಬೇಕು. ಆದರೆ ಅವು ಪೌಷ್ಟಿಕವಾಗಿರಬೇಕು. ಬಾದಾಮಿ, ಗೋಡಂಬಿ ಹಾಗೂ ಅಖ್ರೋಟ್‌ನಂತಹ ಮುಂತಾದ ಒಣಹಣ್ಣುಗಳು ಉತ್ತಮ ಆಯ್ಕೆಯಾಗಿವೆ. ಇವುಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಕ್ಯಾಲೋರಿಗಳು ಹೇರಳವಾಗಿರುತ್ತವೆ. ಬಾಳೆಹಣ್ಣು, ಚೀಕು, ಆವಕಾಡೊ ಮುಂತಾದ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು. ರಾಗಿ, ಓಟ್ಸ್, ಬ್ರೌನ್ ರೈಸ್ ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಪ್ರೋಟೀನ್ ಸೇವನೆ:
ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಅತ್ಯವಶ್ಯಕ. ಮೊಟ್ಟೆ, ಮೀನು, ಕೋಳಿ, ಮತ್ತು ತರಕಾರಿಗಳ ಪ್ರೋಟೀನ್ ಮೂಲಗಳಾದ ದಾಲ್, ರಾಜ್ಮಾ, ಸೋಯಾಬೀನ್ಸ್ ಇತ್ಯಾದಿಗಳನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಪನೀರ್, ಚೀಸ್ ಇವು ಉತ್ತಮ ಪ್ರೋಟೀನ್ ಮೂಲಗಳು. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಪ್ರೋಟೀನ್ ಸಮೃದ್ಧ ಆಹಾರವನ್ನು ಸೇವಿಸುವುದು ಅವಶ್ಯಕ.
ಆಗಾಗ ಊಟ ಮಾಡುವ ಅಭ್ಯಾಸ:
ದಿನಕ್ಕೆ ಮೂರು ಬಾರಿ ಬದಲು 5 ರಿಂದ 6 ಬಾರಿ ಲಘುವಾಗಿ ಊಟ ಮಾಡುವುದು ಉತ್ತಮ. ಇದರಿಂದ ದೇಹಕ್ಕೆ ನಿರಂತರವಾಗಿ ಶಕ್ತಿ ಸಿಗುತ್ತದೆ ಮತ್ತು ಹೆಚ್ಚು ಕ್ಯಾಲೋರಿಗಳನ್ನು ಸೇವಿಸಲು ಸಾಧ್ಯವಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಆರೋಗ್ಯಕರ ತಿಂಡಿಗಳಾದ ಹಣ್ಣಿನ ಸಲಾಡ್, ಸೂಜಿ ಉಪ್ಪಿಟ್ಟು ಇತ್ಯಾದಿಗಳನ್ನು ಸೇವಿಸಬಹುದು.
ಆರೋಗ್ಯಕರ ಕೊಬ್ಬುಗಳು
ಕೊಬ್ಬುಗಳು ಆರೋಗ್ಯಕ್ಕೆ ಹೆಚ್ಚಿನ ಹಾನಿಯುಂಟು ಮಾಡುವುದಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಆರೋಗ್ಯಕರ ಕೊಬ್ಬುಗಳಾದ ಓಮೆಗಾ-3 ಕೊಬ್ಬಿನಾಮ್ಲ ಅತ್ಯಂತ ಪ್ರಯೋಜನಕಾರಿಯಾಗಿದೆ. ಬಾದಾಮಿ ಎಣ್ಣೆ, ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಮುಂತಾದವುಗಳನ್ನು ಬಳಸಬಹುದು. ಒಣಹಣ್ಣುಗಳು ಮತ್ತು ಬೀಜಗಳಲ್ಲಿರುವ ಕೊಬ್ಬುಗಳು ಹೃದಯಕ್ಕೆ ಹಿತಕರವಾಗಿವೆ.
ವ್ಯಾಯಾಮ ಮತ್ತು ಶಕ್ತಿ ತರಬೇತಿ
ಕೇವಲ ಆಹಾರದಿಂದಲೇ ದೇಹದ ತೂಕ ಹೆಚ್ಚಿಸಲು ಸಾಧ್ಯವಿಲ್ಲ. ಸರಿಯಾದ ವ್ಯಾಯಾಮವೂ ಅಗತ್ಯ. ಪುಷ್ಅ ಪ್ಸ್, ಸ್ಕ್ವಾಟ್ಸ್, ತೂಕ ಎತ್ತುವಿಕೆ ಮುಂತಾದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು.
ನಿದ್ದೆ ಮತ್ತು ಒತ್ತಡ ನಿರ್ವಹಣೆ
ಸಾಕಷ್ಟು ನಿದ್ರೆ ಅತ್ಯವಶ್ಯಕ. ದಿನಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆಗಳ ನಿದ್ದೆ ಬೇಕು. ಒತ್ತಡವನ್ನು ನಿರ್ವಹಿಸಲು ಪರಿಪೂರ್ಣ ನಿದ್ದೆ ಬೇಕೇ ಬೇಕು. ಅತಿಯಾದ ಒತ್ತಡ ತೂಕದ ಕಡಿಮೆಗೆ ಕಾರಣವಾಗಬಹುದು. ಯೋಗ, ಧ್ಯಾನ, ಉಸಿರಾಟದ ವ್ಯಾಯಾಮಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಡಾ. ಎಡ್ವಿನಾ ರಾಜ್, ಮುಖ್ಯಸ್ಥೆ, ಕ್ಲಿನಿಕಲ್ ನ್ಯೂಟ್ರಿಷನ್, ಅಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.