ADVERTISEMENT

ಹೃದಯಾಘಾತ ಮತ್ತು ಗ್ಯಾಸ್ಟ್ರಿಕ್: ನಡುವೆ ಅಂತರವಿದೆ, ಗೊಂದಲ ಬೇಡ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:24 IST
Last Updated 8 ಜುಲೈ 2025, 6:24 IST
<div class="paragraphs"><p>ಹೃದಯ</p></div>

ಹೃದಯ

   

(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)

ಹೃದಯಾಘಾತದ ಪ್ರಕರಣಗಳು ಈಗ ಭಯದ ವಾತಾವರಣವನ್ನು ಸೃಷ್ಟಿಸಿವೆ. ಆಸ್ಪತ್ರೆಗೆ ಎದೆನೋವು ಎಂದು ಬರುವ ಸಾಕಷ್ಟು ಜನರು ತಮಗಾಗಿರುವುದು ಹೃದಯ ಸಂಬಂಧಿ ಸಮಸ್ಯೆಯೋ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಯೋ ಅರಿಯದೇ ಗೊಂದಲಕ್ಕೀಡಾಗುತ್ತಿದ್ದಾರೆ. ಹಾರ್ಟ್ ಅಟ್ಯಾಕ್‌ನ್ನು ಗ್ಯಾಸ್ಟ್ರಿಕ್‌ ಎಂದು ತಿಳಿದು ನಿರ್ಲಕ್ಷಿಸಿದವರೂ ಹಲವರು. ಹೀಗಾಗಿ ಈ ಸಂದರ್ಭದಲ್ಲಿ ಇವೆರಡು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ.

ADVERTISEMENT
ಗ್ಯಾಸ್ಟ್ರಿಕ್‌ ಮತ್ತು ಹಾರ್ಟ್ ಅಟ್ಯಾಕ್‌ ನಡುವೆ ಗೊಂದಲವಾಗುವುದೇಕೆ?

ಹೃದಯ, ಅನ್ನನಾಳ ಹಾಗೂ ಹೊಟ್ಟೆ ಇವು ಮೂರೂ ನಮ್ಮ ದೇಹದಲ್ಲಿ ಪರಸ್ಪರ ಸಮೀಪದಲ್ಲೇ ಇವೆ ಹಾಗೂ ಒಂದೇ ರೀತಿಯ ನರ ವ್ಯೂಹವನ್ನು ಹೊಂದಿರುತ್ತವೆ. ಈ ರೀತಿಯ ಅಂಗ ಹಾಗೂ ನರ ಮಂಡಲ ರಚನೆಯ ಕಾರಣಕ್ಕೆ ದೇಹದ ಮೇಲ್ಭಾಗದಲ್ಲಿ ನೋವುಂಟಾದಾಗ ಹೃದಯ ಸಂಬಂಧಿತ ಸಮಸ್ಯೆಯೋ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಯೋ ಅರ್ಥ ಮಾಡಿಕೊಳ್ಳುವುದು ಸಾಮಾನ್ಯ ಜನರಿಗೆ ಕಷ್ಟವಾಗುತ್ತದೆ. ಗಂಭೀರ ಗ್ಯಾಸ್ಟ್ರಿಕ್‌ ಸಮಸ್ಯೆ ಎದುರಿಸುತ್ತಿರುವ ರೋಗಿ ಎದೆನೋವು, ಉರಿ ಅನುಭವ ಪಡೆಯುವುದು ಸಾಮಾನ್ಯ. ಇದೇ ಹೃದಯಾಘಾತ ಎಂದು ತುರ್ತು ವೈದ್ಯಕೀಯ ನೆರವಿಗೆ ತೆರಳುತ್ತಾರೆ. ಅದೇ ರೀತಿ ಹೃದಯಾಘಾತ ಸಂಭವಿಸಿದ್ದರೂ ವಾಕರಿಕೆ, ವಾಂತಿ, ಹೊಟ್ಟೆ ನೋವನ್ನು ಗ್ಯಾಸ್ಟ್ರಿಕ್‌ ಎಂದು ತಿಳಿದು ಕಡೆಗಣಿಸುವ ಸಾಧ್ಯತೆಯೂ ಇದೆ.

ಗ್ಯಾಸ್ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಎರಡೂ ಒಂದೆಯೇ?

ಗ್ಯಾಸ್‌ ಮತ್ತು ಗ್ಯಾಸ್ಟ್ರಿಕ್‌ ನಡುವೆ ವ್ಯತ್ಯಾಸವಿದೆಯೇ ಇಲ್ಲವೇ? ಎಂಬ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲವಿದೆ. ವೈದ್ಯಕೀಯ ದೃಷ್ಟಿಯಲ್ಲಿ ಎರಡಕ್ಕೂ ಸಂಬಂಧ ಇದೆ. ಗ್ಯಾಸ್ಟ್ರಿಕ್‌ ಸಮಸ್ಯೆಗೆ ಗ್ಯಾಸ್ ಕಾರಣ. ಗ್ಯಾಸ್‌ ಎನ್ನುವುದು ಆಹಾರ ಜೀರ್ಣಕ್ರಿಯೆಯ ಸಂದರ್ಭದಲ್ಲಿ ಉತ್ಪತ್ತಿಯಾಗುವ ಅನಿಲ. ತೇಗಿನ ಮೂಲಕ ಗ್ಯಾಸನ್ನು ದೇಹದಿಂದ ಹೊರಹಾಕಬಹುದು. ಆದರೆ ದೇಹದಿಂದ ಹೊರ ಹೋಗದೇ ಉಳಿದ ಗ್ಯಾಸ್‌ ಜೀರ್ಣಾಂಗ ವ್ಯವಸ್ಥೆಯಲ್ಲಿ ಉಳಿದುಕೊಂಡು ಸಮಸ್ಯೆ ಸೃಷ್ಟಿಸಬಹುದು. ಇದನ್ನು ಗ್ಯಾಸ್ಟ್ರಿಕ್‌ ಸಮಸ್ಯೆ ಎಂದು ಹೇಳಬಹುದು.

ಹೃದಯಾಘಾತದ ಲಕ್ಷಣಗಳೇನು?

ಹೃದಯಾಘಾತ ಸಂಭವಿಸಿದಾಗ ಹೃದಯ ಹಿಂಡಿದಂತಹಾ ಅನುಭವ ಉಂಟಾಗುತ್ತದೆ. ಇದು ಯಾವುದೇ ಪೆಟ್ಟು ಅಥವಾ ಗಾಯದಿಂದ ಉಂಟಾದ ನೋವಲ್ಲ ಎಂಬುದು ತಿಳಿಯುತ್ತದೆ. ಎದೆಯ ಮೇಲೆ ಭಾರವಾದ ವಸ್ತು ಇಟ್ಟಂತಹ ಅನುಭವ. ದೇಹದ ಮಧ್ಯಭಾಗದಲ್ಲಿ ಆರಂಭವಾಗುವ ನೋವು ಕೈ, ಕುತ್ತಿಗೆ, ದವಡೆ ಹಾಗೂ ಬೆನ್ನಿಗೆ ಹರಡುತ್ತದೆ. ಸುಮಾರು 5 ನಿಮಿಷಗಳ ಕಾಲ ಸಾಕಷ್ಟು ನೋವು ಅನುಭವವಾಗುತ್ತದೆ. ಇದರ ಜೊತೆಗೆ ಉಸಿರಾಟದಲ್ಲಿ ಕಷ್ಟ, ಬೆವರು, ವಾಕರಿಕೆ, ತಲೆತಿರುಗಿದ ಅನುಭವ, ಅಶಕ್ತತೆ ಕೂಡ ಅನುಭವವಾಗಬಹುದು. ಡಯಾಬಿಟಿಸ್, ಹೈ ಬಿಪಿ, ಕೊಲೆಸ್ಟ್ರಾಲ್‌ ಸಮಸ್ಯೆಯಿಂದ ಬಳಲುತ್ತಿರುವವರು, ಧೂಮಪಾನ, ತಂಬಾಕು ಸೇವನೆ ಮಾಡುವವರು, ಕುಟುಂಬದಲ್ಲಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದವರಿದ್ದರೆ 30 ವರ್ಷ ಮೇಲ್ಪಟ್ಟವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ.

ಗ್ಯಾಸ್ಟ್ರಿಕ್‌ ಸಮಸ್ಯೆ ಲಕ್ಷಣಗಳೇನು?

ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುವ ಜೊತೆಗೆ ಚುಚ್ಚಿದಂತಹ, ಉರಿ ಅನುಭವ ಉಂಟಾಗುತ್ತದೆ. ಪ್ರತಿ ಬಾರಿ ಕೆಲವು ಸೆಕೆಂಡುಗಳ ಕಾಲ ಈ ನೋವು ಅನುಭವಕ್ಕೆ ಬಂದು ಮತ್ತೆ ಮುಂದುವರೆಯುತ್ತದೆ. ಇದು ನಿರಂತರ ನೋವಲ್ಲ. ಖಾರ ಮತ್ತು ಅತಿ ಹುಳಿ ಪದಾರ್ಥಗಳನ್ನು ಸೇವಿಸಿದಾಗ, ಮದ್ಯಪಾನ ಹಾಗೂ ಕೆಲ ನೋವು ನಿವಾರಕ ಮಾತ್ರೆಗಳನ್ನು ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆಯ ಸಾಧ್ಯತೆ ಹೆಚ್ಚಾಗಿರುತ್ತದೆ. ವಾಕರಿಕೆ, ಹೊಟ್ಟೆ ಉಬ್ಬರ, ವಾಂತಿ, ಬಾಯಲ್ಲಿ ಹುಳಿ ರುಚಿ ಅನುಭವ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳಾಗಿವೆ. ಇಲ್ಲಿ ದೇಹದ ವಿವಿಧ ಅಂಗಗಳಿಗೆ ನೋವು ಹರಡುವ ಸಾಧ್ಯತೆ ಇರುವುದಿಲ್ಲ. ಹಾಗೇ ಗ್ಯಾಸ್‌ ಪಾಸ್‌ ಮಾಡಿದ ಬಳಿಕ ಈ ನೋವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ.

ಯಾವಾಗ ವೈದ್ಯರನ್ನು ಕಾಣಬೇಕು? ಗೊಂದಲವಿದ್ದಲ್ಲಿ ಏನು ಮಾಡಬೇಕು?

ಹೊಟ್ಟೆ ಮತ್ತು ಹೃದಯಭಾಗದ ಮಧ್ಯದಲ್ಲಿ ನಿರಂತರ ನೋವು ಹಾಗೂ ಈ ನೋವು ದೇಹದ ವಿವಿಧ ಭಾಗಗಳಿಗೆ (ಕೈ, ಬೆನ್ನು, ದವಡೆ) ಹರಡುವ ಅನುಭವವಾಗುತ್ತಿದ್ದಲ್ಲಿ, ಜೊತೆಗೆ ಬೆವರುವುದು, ಉಸಿರಾಟದಲ್ಲಿ ಕಷ್ಟ ಉಂಟಾದರೆ ತಡ ಮಾಡದೇ ವೈದ್ಯರನ್ನು ಭೇಟಿಯಾಗಿ. ಇಸಿಜಿ, ಇಸಿಹೆಚ್‌ಒ, ಟಿಎಂಟಿ ಅಥವಾ ರಕ್ತ ಪರೀಕ್ಷೆಗಳಾದ ಸಿಕೆ ಎಮ್‌ಬಿ, ಟ್ರೊಪೊನೊನಿನ್‌ ಟಿ ಮತ್ತು ಎಂಜಿಯೊಗ್ರಾಮ್ ಮೂಲಕ ಹೃದಯಾಘಾತವನ್ನು ಪತ್ತೆ ಹಚ್ಚಿ ಸಾವಿನ ಸಂಭವವನ್ನು ತಡೆಯಬಹುದು. ಹೃದಯ ಸಮಸ್ಯೆಯ ಸಾಧ್ಯತೆ ಹೆಚ್ಚಿದೆ ಅನಿಸಿದ್ದಲ್ಲಿ ಟ್ರೆಡ್‌ಮಿಲ್‌ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಕಾರ್ಡಿಯಾಕ್‌ ಪರೀಕ್ಷೆ ನೆಗೆಟಿವ್‌ ಬಂದಲ್ಲಿ ಆಂಟಾಸಿಡ್ ಕೂಡ ನೀಡಬಹುದಾಗಿದೆ. ಗ್ಯಾಸ್ಟ್ರಿಕ್‌ ಸಂಶಯವಿದ್ದಲ್ಲಿ ಎಂಡೊಸ್ಕೊಪಿ, ಪಿಹೆಚ್‌-ಮೆಟ್ರಿ ಅಥವಾ ಮ್ಯಾನೊಮೆಟ್ರಿ ವಿಧಾನ (ಒತ್ತಡ ಮಾಪನ ವಿಧಾನ) ಅಗತ್ಯವಾಗಬಹುದು.

ಒಟ್ಟಿನಲ್ಲಿ, ಹಾರ್ಟ್ ಅಟ್ಯಾಕ್‌ ಬಂದ ನಂತರ ಏನು ಮಾಡುವುದು ಎನ್ನುವುದಕ್ಕಿಂತ ಆಗದಂತೆ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯ. ಹೃದಯಾಘಾತದಂತಹ ಸಂದರ್ಭ ಎದುರಾದಾಗ ರೋಗಿಯ ಜೊತೆಗಿರುವವರು ಗಾಬರಿಯಾಗದೇ ತಕ್ಷಣ ವೈದ್ಯರ ನೆರವು ಪಡೆಯುವುದು ಅಗತ್ಯ. ಹಾಗೇ ಗ್ಯಾಸ್ಟ್ರಿಕ್‌ ಸಮಸ್ಯೆ ಎನಿಸಿದ್ದೂ ನೋವು ನಿರಂತರವಾಗಿದ್ದಲ್ಲಿ ನಿರ್ಲಕ್ಷಿಸದೇ ವೈದ್ಯರ ನೆರವು ಪಡೆಯಿರಿ.

ಹೃದಯಾಘಾತ ತಡೆಗೆ ಮುನ್ನೆಚ್ಚರಿಕೆ ಕ್ರಮಗಳೇನು ?

ಆರೋಗ್ಯಪೂರ್ಣ ಜೀವನಶೈಲಿ ಹಾಗೂ ಈಗಾಗಲೇ ಹೃದಯ ಸಂಬಂಧಿತ ಅಥವಾ ಡಯಾಬಿಟಿಸ್, ಹೈಪರ್‍‌ಟೆನ್ಷನ್, ಬೊಜ್ಜಿನಂತಹ ಸಮಸ್ಯೆಗಳಿದ್ದರೆ ಸೂಕ್ತ ಚಿಕಿತ್ಸೆ ಮತ್ತುನಿಯಮಿತ ತಪಾಸಣೆ ಪಡೆಯುವುದು, ನಿಯಮಿತ ವ್ಯಾಯಾಮ, ಒತ್ತಡ ರಹಿತ ಜೀವನ ರೂಪಿಸಿಕೊಳ್ಳುವುದು, ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿರುವುದೇ ಹೃದಯಾಘಾತ ತಡೆಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳು.

ಡಾ. ಎಂ.ಎನ್‌.ಭಟ್‌, ಹಿರಿಯ ಇಂಟರ್ವೆನ್ಶನಲ್‌ ಕಾರ್ಡಿಯಾಲಾಜಿಸ್ಟ್‌ ಹಾಗೂ ಡಾ. ಅನುರಾಗ ಶೆಟ್ಟಿ, ಮೆಡಿಕಲ್ ಗ್ಯಾಸ್ಟ್ರೋಎಂಟಿರಾಲಜಿಸ್ಟ್‌, ಕೆಎಂಸಿ ಆಸ್ಪತ್ರೆ, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.