ADVERTISEMENT

ಅಜೀರ್ಣವೇ...ಹೊಟ್ಟೆ ಸರಿಪಡಿಸಿಕೊಳ್ಳಲು ಇಲ್ಲಿವೆ ಸರಳ ಮನೆಮದ್ದುಗಳು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 13:49 IST
Last Updated 6 ಫೆಬ್ರುವರಿ 2026, 13:49 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮನುಷ್ಯ ಆರೋಗ್ಯಯುತವಾಗಿರಲು ದೈಹಿಕ ಸ್ವಾಸ್ಥ್ಯ ಮಹತ್ವದ್ದಾಗಿರುತ್ತದೆ. ಕೆಲವೊಮ್ಮೆ ನಾವು ತಿನ್ನುವ ಆಹಾರಗಳೇ ನಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು. ಅಲರ್ಜಿ, ಪಿತ್ತ ಕೆಣಕುವಂತೆ ಮಾಡಬಹುದು. ಬಹುಮುಖ್ಯವಾಗಿ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಅಜೀರ್ಣವಾಗಬಹುದು. ಹೀಗಾಗಿ ತಿನ್ನುವ ಆಹಾರದ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ. ಅಜೀರ್ಣ ಸಮಸ್ಯೆ ಸಾಮಾನ್ಯವಾಗಿದ್ದರೂ ಅದರಿಂದಾಗುವ ಹಿಂಸೆ ಸಣ್ಣದಲ್ಲ. ಹಾಗಾದರೆ ಅಜೀರ್ಣವಾದರೆ ಹೊಟ್ಟೆ ಸರಿಪಡಿಸಿಕೊಳ್ಳುವುದು ಹೇಗೆ, ಏನೆಲ್ಲಾ ಮನೆಮದ್ದುಗಳನ್ನು ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.

ಅಜೀರ್ಣದ ಲಕ್ಷಣಗಳು

ತಿಂದ ಆಹಾರ ಸರಿಯಾಗಿ ಜೀರ್ಣ ಆಗದೇ ಇದ್ದರೆ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿಯ ಲಕ್ಷಣಗಳು ಕಾಡಬಹುದು. ಹುಳಿತೇಗು, ಅತಿಸಾರ, ವಾಂತಿ, ಹೊಟ್ಟೆ ಉಬ್ಬಿದಂತೆ ಆಗುವುದು ಅಸಿಡಿಟಿಯ ಸಾಮಾನ್ಯ ಲಕ್ಷಣ. ಇವುಗಳಿಂದ ಅಜೀರ್ಣವಾಗಿದೆ ಎಂದು ಅರಿತುಕೊಳ್ಳಬಹುದು.

ADVERTISEMENT

ಅಜೀರ್ಣಕ್ಕೆ ಕಾರಣಗಳು

ಅತಿಯಾಗಿ ಆಹಾರ ಸೇವನೆ: ಊಟ ಮಾಡಿದ ಐದು ಹತ್ತು ನಿಮಿಷಗಳಲ್ಲಿ ಮತ್ತೇನೊ ಸೇವಿಸುವುದು, ಹೊಟ್ಟೆ ತುಂಬಿದ್ದರೂ ಕೂಡ ಒತ್ತಾಯ ಪೂರ್ವಕವಾಗಿ ಆಹಾರ ಸೇವನೆ ಮಾಡುವುದು ಅಜೀರ್ಣಕ್ಕೆ ಕಾರಣವಾಗುತ್ತದೆ.

ಆಹಾರದ ಆಯ್ಕೆ: ಅತಿಯಾದ ಎಣ್ಣೆ ಅಥವಾ ಕೊಬ್ಬಿನ ಆಹಾರ ಹಾಗೂ ಮಸಾಲೆಯುಕ್ತ ಆಹಾರ ಸೇವನೆ ಮಾಡುವುದು. ಅತಿಯಾಗಿ  ಕಾಫಿ, ಅಥವಾ ಚಹಾವನ್ನು ಕುಡಿಯುವುದರಿಂದ ಅಜೀರ್ಣವಾಗುವಂತೆ ಮಾಡಬಹುದು. ಊಟ ಮಾಡಿದ ಕೂಡಲೇ ಮಲಗುವುದರಿಂದಲೂ ಅಜೀರ್ಣ ಆಗುವ ಸಾಧ್ಯತೆ ಇರುತ್ತದೆ.

ಜೀವನ ಶೈಲಿ: ಅತಿಯಾದ ಒತ್ತಡ, ಮದ್ಯಪಾನ, ಧೂಮಪಾನವು ಕೂಡ ಅಜೀರ್ಣತೆಗೆ ಕಾರಣವಾಗಿದೆ.

ಪ್ರಾತಿನಿಧಿಕ ಚಿತ್ರ

ಇಲ್ಲಿವೆ ಸರಳ ಮನೆಮದ್ದುಗಳು

  • ‘ಲಂಘನಂ ಪರಮ ಔಷಧಂ’ ಪಾಲನೆ: ಅಂದರೆ ಸೇವನೆ ಮಾಡಿದ ಆಹಾರ ಜೀರ್ಣ ಆಗದೆ ಇದ್ದರೆ ಹಸಿವು ಆಗುವವರೆಗೂ ಊಟ ಸೇವಿಸಬಾರದು.

  • ಬಿಸಿ ನೀರು ಕುಡಿಯುವುದು: ಹೊಟ್ಟೆ ಉಬ್ಬರ ಎನಿಸಿದರೆ ಅರ್ಧಗಂಟೆಗೆ ಒಮ್ಮೆ ಬಿಸಿ ನೀರು ಕುಡಿಯುತ್ತಿರಬೇಕು.

  • ಓಂ ಕಾಳು ಸೇವನೆ: ಬಿಸಿ ನೀರಿನಲ್ಲಿ ಆಜೈನ್ (ಓಂ ಕಾಳು), ಜೀರಿಗೆ, ಕೊತ್ತಂಬರಿ ಬೀಜ ಸೇರಿಸಿ ಕುಡಿಯಬೇಕು ಅಥವಾ ಜಗಿದು ತಿನ್ನಬಹುದು.

  • ನಿಯಮಿತವಾಗಿ ಮಜ್ಜಿಗೆ ಕುಡಿಯಬೇಕು: ಅರ್ಧ ಲೋಟ ಬಿಸಿ ನೀರಿನ ಜೊತೆ ಅರ್ಧ ಲೋಟ ಮಜ್ಜಿಗೆ ಮಿಶ್ರಣ ಮಾಡಿ ಕುಡಿಯಬೇಕು. ಅಜೀರ್ಣದ ಸಮಯದಲ್ಲಿ ಇದನ್ನು ದಿನಕ್ಕೆ 2 ರಿಂದ 3 ಬಾರಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕರಿಯಾಗಲಿದೆ.

  • ವ್ಯಾಯಾಮ: ವಜ್ರಾಸನದಲ್ಲಿ ಕುಳಿತು ದೀರ್ಘ ಉಸಿರಾಡುವುದರಿಂದಲೂ ಅಜೀರ್ಣ ನಿಯಂತ್ರಿಸಬಹುದು.

  • ಅನಗತ್ಯ ಸೇವನೆ ನಿಯಂತ್ರಣ: ಪದೇಪದೇ ತಿನ್ನುವ ಅಭ್ಯಾಸವನ್ನು ಬಿಟ್ಟು ಸರಿಯಾದ ಸಮಯಕ್ಕೆ ಊಟ ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಅಜೀರ್ಣ ಸಮಸ್ಯೆಯಿಂದ ಪಾರಾಗಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರಾದ ಶರದ್ ಕುಲಕರ್ಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.