ADVERTISEMENT

ಮಂಗನ ಕಾಯಿಲೆ ಉಲ್ಬಣ: ಅರಣ್ಯಕ್ಕೆ ಹೋಗುವ ಮುನ್ನ ಇರಲಿ ಎಚ್ಚರ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 12:25 IST
Last Updated 19 ಡಿಸೆಂಬರ್ 2025, 12:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಡಿಸೆಂಬರ್ 1ರಿಂದ 17ರವರೆಗೆ 10 ಮಂದಿಗೆ ಕೆಎಫ್‌ಡಿ ವೈರಲ್ ಸೋಂಕು ಕಾಣಿಸಿಕೊಂಡಿದೆ. 36 ಮಂಗಗಳು ಸತ್ತಿವೆ. ಚಳಿಗಾಲ ಹೆಚ್ಚುತ್ತಿದ್ದಂತೆ ಕಾಯಿಲೆ ವ್ಯಾಪಕಗೊಳ್ಳುತ್ತಿದೆ.

ವೈದ್ಯಕೀಯವಾಗಿ ಕ್ಯಾಸನೂರು ಅರಣ್ಯ ರೋಗ (ಕೆಎಫ್‌ಡಿ) ಎಂದು ಕರೆಯಲ್ಪಡುವ ಮಂಗನ ಕಾಯಿಲೆ ಪಶ್ಚಿಮ ಘಟ್ಟಗಳ ಕೆಲವು ಭಾಗಗಳಲ್ಲಿ ಕಂಡುಬರುವ ವೈರಲ್ ಸೋಂಕಾಗಿದೆ. ಈ ಜ್ವರವನ್ನು ಮೊದಲು 1957ರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಕ್ಯಾಸನೂರು ಅರಣ್ಯದಲ್ಲಿ ವರದಿ ಮಾಡಲಾಯಿತು. ಆಗ ಹಲವಾರು ಕೋತಿಗಳು ಈ ವೈರಸ್‌ನ ಸೋಂಕಿಗೆ ಒಳಗಾಗಿ ಸಾವಿಗೀಡಾಗಿದ್ದವು. ಆದ್ದರಿಂದ ಇದಕ್ಕೆ ಮಂಗನ ಕಾಯಿಲೆ ಎಂಬ ಹೆಸರು ಬಂದಿತು. ಸತ್ತ ಕೋತಿಗಳಿಂದ ಈ ಸೋಂಕು ಹರಡುತ್ತದೆ. ಇದು ಹಠಾತ್ತನೆ ಪ್ರಾರಂಭವಾಗುವ ತೀವ್ರ ಜ್ವರ, ವಾಕರಿಕೆ, ವಾಂತಿ, ಅತಿಸಾರ, ಹಾಗೂ ರಕ್ತಸ್ರಾವ ಸಂಬಂಧಿತ ಲಕ್ಷಣಗಳೊಂದಿಗೆ ಕೂಡಿದೆ.

ADVERTISEMENT

ಇದು ಹೇಗೆ ಹರಡುತ್ತದೆ

ಹೆಸರಿನ ಹೊರತಾಗಿಯೂ, ಮಂಗನ ಕಾಯಿಲೆ ಕೋತಿಗಳಿಂದ ಮನುಷ್ಯರಿಗೆ ನೇರವಾಗಿ ಹರಡುವುದಿಲ್ಲ. ಈ ಜ್ವರವು ಅರಣ್ಯ ಉಣ್ಣೆಗಳ ಮೂಲಕ ಹರಡುತ್ತದೆ. ಸತ್ತ ಸೋಂಕಿತ ಕೋತಿಗಳ ಸಂಪರ್ಕದಿಂದ ಮನುಷ್ಯರಿಗೆ ಈ ಸೋಂಕು ಹರಡುತ್ತದೆ. ಆದಾಗ್ಯೂ, ಈ ಜ್ವರವು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಈ ಜ್ವರದ ಸಂಭವ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪ್ರಾರಂಭವಾಗಿ ಜನವರಿ ಮತ್ತು ಏಪ್ರಿಲ್ ನಡುವೆ ಉತ್ತುಂಗವನ್ನು ತಲುಪುತ್ತದೆ.

ಮನುಷ್ಯರಿಗೆ ಹೇಗೆ ಹರಡುತ್ತವೆ?

  • ಅರಣ್ಯ ಅಥವಾ ಹುಲ್ಲುಗಾವಲು ಪ್ರದೇಶಗಳಲ್ಲಿ ಉಣ್ಣೆ ಕಚ್ಚುವಿಕೆಯಿಂದ ಹರಡಬಹುದು.

  • ರಕ್ಷಣೆಯಿಲ್ಲದೆ ಸೋಂಕಿತ ಪ್ರಾಣಿಗಳನ್ನು ನಿರ್ವಹಿಸುವುದರಿಂದಲೂ ಹರಡಬಹುದು.

  • ಸೋಂಕಿತ ಕೋತಿಗಳು ಸತ್ತ ಪ್ರದೇಶಗಳಲ್ಲಿ ಒಡಾಡುವುದು ಕೂಡಾ ಕಾರಣವಾಗುತ್ತದೆ.

ಲಕ್ಷಣಗಳು

ಈ ಜ್ವರ ಸಾಮಾನ್ಯವಾಗಿ ಚಳಿ ಮತ್ತು ತೀವ್ರ ತಲೆನೋವಿನಿಂದ ಕೂಡಿರುತ್ತದೆ. ಮೂಗು, ಗಂಟಲು ಮತ್ತು ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಈ ಲಕ್ಷಣಗಳು ಸಾಮಾನ್ಯವಾಗಿ ಕಾಯಿಲೆಗೆ ತುತ್ತಾದ 3 ರಿಂದ 8 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮಂಗನ ಕಾಯಿಲೆಗೆ ಸಂಬಂಧಿಸಿದ ಇತರ ಕೆಲವು ಲಕ್ಷಣಗಳು ಕಡಿಮೆ ರಕ್ತದೊತ್ತಡ ಹಾಗೂ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕ್ಷೀಣಿಸುತ್ತದೆ.

  • ವಾಕರಿಕೆ

  • ವಾಂತಿ

  • ಸ್ನಾಯು ಗಟ್ಟಿಯಾಗುವುದು

  • ಮಾನಸಿಕ ಅಸ್ವಸ್ಥತೆ

  • ನಡುಕ

  • ದುರ್ಬಲ ದೃಷ್ಟಿ

  • ತೀವ್ರ ತಲೆನೋವು

ಚಿಕಿತ್ಸೆ ಮತ್ತು ವೈದ್ಯಕೀಯ ಆರೈಕೆ

ಮಂಗನ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದಾಗ್ಯೂ ಸ್ಥಿತಿಯನ್ನು ನಿರ್ವಹಿಸಲು ತಕ್ಷಣದ ವೈದ್ಯಕೀಯ ಶಿಫಾರಸ್ಸು ಅತ್ಯಗತ್ಯ. ರಕ್ತಸ್ರಾವವನ್ನು ತಡೆಗಟ್ಟಲು ಅಗತ್ಯ ರಕ್ಷಣಾತ್ಮಕ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ. ಪ್ರೋಟೀನ್‌ಗಳಿಂದ ಸಮೃದ್ಧವಾದ ಆಹಾರ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

ಬದುಕುಳಿಯುವ ಪ್ರಮಾಣವೆಷ್ಟು?

ಮರಣ ಪ್ರಮಾಣ ಶೇ 2 ರಿಂದ 10 ರಷ್ಟಿರುತ್ತದೆ. ಇದು ಆರಂಭಿಕ ಪತ್ತೆ ಮತ್ತು ಆರೋಗ್ಯ ಸೇವೆಯ ಮೇಲೆ  ಅವಲಂಬಿಸಿದೆ. ಹೆಚ್ಚಿನ ರೋಗಿಗಳು ಸೂಕ್ತ ವೈದ್ಯಕೀಯ ಬೆಂಬಲದೊಂದಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ.

ಮುನ್ನೆಚ್ಚರಿಕೆ ಕ್ರಮಗಳು

  • ಮಂಗನ ಕಾಯಿಲೆ ಹರಡುವ ಋತುಗಳಲ್ಲಿ ಅರಣ್ಯ ಪ್ರವೇಶವನ್ನು ತಪ್ಪಿಸಿ.

  • ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿರಿ.

  • ಸತ್ತ ಕೋತಿಗಳು ಅಥವಾ ಪ್ರಾಣಿಗಳನ್ನು ಮುಟ್ಟಬೇಡಿ

ಕರ್ನಾಟಕದ ಅರಣ್ಯ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳೊಂದಿಗೆ ಮಂಗನ ಕಾಯಿಲೆಯ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಸಾಧ್ಯವಾದಷ್ಟು ಈ ಋತುವಿನಲ್ಲಿ ಹೆಚ್ಚರಿಕೆಯಿಂದ ಇರುವುದು ಉತ್ತಮ.

ಲೇಖಕರು: ಡಾ. ಐಶ್ವರ್ಯ ಆರ್, ಸಲಹೆಗಾರರು, ಸಾಂಕ್ರಾಮಿಕ ರೋಗ ವಿಭಾಗ, ಆಸ್ಟರ್ ಆರ್‌ವಿ ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.