
ಚಿತ್ರ: ಗೆಟ್ಟಿ
ಇಂದು ಬಹುತೇಕ ಮಕ್ಕಳು ಹಾರ್ಲಿಕ್ಸ್ ಮತ್ತು ಬೂಸ್ಟ್ ಸೇವಿಸುತ್ತಾರೆ. ಇವು ದೇಹದ ಬೆಳವಣಿಗೆ ಮತ್ತು ರೋಗನಿರೋಧ ಶಕ್ತಿಯನ್ನು ವೃದ್ಧಿಸಬಲ್ಲವು ಎಂದರೂ, ನಾವು ದಿನನಿತ್ಯ ಸೇವಿಸುವ ಆಹಾರಗಳೇ ನೈಸರ್ಗಿಕವಾಗಿ ದೇಹವನ್ನು ಬಲಗೊಳಿಸಬಲ್ಲದು. ಹಾಗಾದರೆ ಯಾವ ಆಹಾರಗಳಿಂದ ಶಕ್ತಿಯನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.
ಹಾರ್ಲಿಕ್ಸ್ ಅಥವಾ ಬೂಸ್ಟ್‌ನಲ್ಲಿರುವ ಪೋಷಕಾಂಶಕ್ಕೆ ಸಮಾನವಾದ ಆಹಾರಗಳ ಪಟ್ಟಿ ಇಲ್ಲಿದೆ.
ಶಕ್ತಿಗಾಗಿ ಕಾರ್ಬೋಹೈಡ್ರೇಟ್‌ಗಳು:
ಹೇರಳವಾದ ಫೈಬರ್ ಅಂಶ ಹೊಂದಿರುವ ಬಾಳೆಹಣ್ಣು, ಮಾವು, ಸೇಬು ಮತ್ತು ಸಪೋಟ ಹಣ್ಣುಗಳು ದೇಹಕ್ಕೆ ನೈಸರ್ಗಿಕ ಸಕ್ಕರೆ ಅಂಶವನ್ನು ಒದಗಿಸುತ್ತವೆ.
ಪಿಷ್ಟಯುಕ್ತ ತರಕಾರಿಗಳಾದ ಆಲೂಗಡ್ಡೆ ಮತ್ತು ಗೆಣಸು ಅತ್ಯುತ್ತಮವಾಗಿ ಶಕ್ತಿ ಒದಗಿಸುವ ಆಹಾರಗಳಾಗಿವೆ. ವಿಶೇಷವಾಗಿ ಮಕ್ಕಳ ಆರೋಗ್ಯಕ್ಕೆ ಪೋಷಕಾಂಶಯುಕ್ತ ಆಹಾರಗಳಾಗಿವೆ.
ಬೆಳೆವಣಿಗೆ ಮತ್ತು ಬಲಕ್ಕಾಗಿ ಪ್ರೋಟೀನ್:
ಹಾಲು, ಮೊಸರು ಮತ್ತು ಪನೀರ್ ದೇಹಕ್ಕೆ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಂಶವನ್ನು ಒದಗಿಸುತ್ತದೆ.
ಮೊಟ್ಟೆ ಅತ್ಯುತ್ತಮ ನೈಸರ್ಗಿಕ ಪ್ರೋಟೀನ್ ಮೂಲವಾಗಿದ್ದು, ಬಿ12 ಮತ್ತು ವಿಟಮಿನ್ ಡಿ ಅಂಶವನ್ನು ಹೊಂದಿದೆ.
ದ್ವಿದಳ ಧಾನ್ಯಗಳಾದ ಬೇಳೆ, ಕಡಲೆ, ರಾಜ್ಮಾ ಮತ್ತು ಹೆಸರುಕಾಳುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತದೆ.
ಬಾದಾಮಿ, ಕಡಲೆಕಾಯಿ, ಸೂರ್ಯಕಾಂತಿ ಬೀಜ ಮತ್ತು ಕುಂಬಳಕಾಯಿ ಬೀಜಗಳು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಒದಗಿಸುತ್ತವೆ.
ಧಾನ್ಯಗಳನ್ನು ದ್ವಿದಳ ಧಾನ್ಯಗಳೊಂದಿಗೆ ಸಂಯೋಜಿಸಿ ತಯಾರಿಸುವ ಆಹಾರ (ಅಕ್ಕಿ ಮತ್ತು ಬೇಳೆಯಂತೆ) ಸಂಪೂರ್ಣ ಪ್ರೋಟೀನ್ ನೀಡುತ್ತದೆ.
ರೋಗನಿರೋಧಕ ಶಕ್ತಿ ಮತ್ತು ಚಯಾಪಚಯಕ್ಕಾಗಿ ವಿಟಮಿನ್‌ಗಳು:
ಹಸಿರು ಎಲೆಕೋಸು, ತರಕಾರಿಗಳು, ಪಾಲಕ್, ಮೆಂತ್ಯ ಮತ್ತು ದಂಟುಗಳಿಂದ ಕೂಡಿದ ಸೊಪ್ಪುಗಳಲ್ಲಿ ವಿಟಮಿನ್ ಎ, ಸಿ ಸಮೃದ್ಧವಾಗಿರುತ್ತವೆ.
ಹಣ್ಣುಗಳಾದ ಕಿತ್ತಳೆ, ಪೇರಳೆ, ಪಪ್ಪಾಯಿ ಮತ್ತು ಬೆರ್ರಿಗಳು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಮೂಲಗಳಾಗಿವೆ.
ಧಾನ್ಯ ಮತ್ತು ಸಿರಿಧಾನ್ಯಗಳು ಶಕ್ತಿ ಬಿಡುಗಡೆಗೆ ಅಗತ್ಯವಾದ ವಿಟಮಿನ್ ಬಿ ಒದಗಿಸುತ್ತವೆ.
ಪ್ರತಿದಿನ 15 ರಿಂದ 20 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನೈಸರ್ಗಿಕವಾಗಿ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ.
ಮೂಳೆಗಳು ಮತ್ತು ಒಟ್ಟಾರೆ ಆರೋಗ್ಯಕ್ಕಾಗಿ ಖನಿಜಗಳು:
ಹಾಲು, ಮೊಸರು, ಎಳ್ಳು ಮತ್ತು ರಾಗಿ ಮೂಳೆಗಳಿಗೆ ಕ್ಯಾಲ್ಸಿಯಂ ಒದಗಿಸುವ ಅತ್ಯುತ್ತಮ ಮೂಲಗಳಾಗಿವೆ.
ಖರ್ಜೂರ, ಬೆಲ್ಲ, ಪಾಲಕ್ ಮತ್ತು ಬೇಳೆಕಾಳುಗಳು ಕಬ್ಬಿಣದ ಮಟ್ಟವನ್ನು ಸುಧಾರಿಸುತ್ತವೆ ಮತ್ತು ಆಯಾಸವನ್ನು ತಡೆಯಲು ಸಹಾಯ ಮಾಡುತ್ತವೆ.
ನಿಂಬೆ ಅಥವಾ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳು ದೇಹಕ್ಕೆ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ.
ಮಿದುಳಿನ ಶಕ್ತಿಗಾಗಿ ಆರೋಗ್ಯಕರ ಕೊಬ್ಬುಗಳು
ತುಪ್ಪ ಮತ್ತು ಬೆಣ್ಣೆ ಮಕ್ಕಳಲ್ಲಿ ಸ್ಮರಣ ಶಕ್ತಿಯನ್ನು ಬೆಂಬಲಿಸುತ್ತವೆ.
ಬೀಜ, ತೆಂಗಿನಕಾಯಿ ಮತ್ತು ಕಡಲೆಕಾಯಿ ಆರೋಗ್ಯಕರ ಕೊಬ್ಬು ಮತ್ತು ಕೊಬ್ಬಿನಾಮ್ಲಗಳನ್ನು ಒದಗಿಸುತ್ತವೆ. ಇವುಗಳಲ್ಲಿ ಎ, ಡಿ, ಇ ಮತ್ತು ವಿಟಮಿನ್ ಕೆ ಅಂಶ ಸಮೃದ್ಧವಾಗಿರುತ್ತವೆ.
ಹಾರ್ಲಿಕ್ಸ್ ಮತ್ತು ಬೂಸ್ಟ್‌ಗೆ ಪರ್ಯಾಯ :
ಖರ್ಜೂರ ಮತ್ತು ಬಾದಾಮಿ ಜೊತೆ ಹಾಲು
ಹಾಲಿನೊಂದಿಗೆ ರಾಗಿ ಅಥವಾ ಓಟ್ಸ್ ಗಂಜಿ
ಬಾದಾಮಿಯಂತಹ ಬೀಜಗಳೊಂದಿಗೆ ಬಾಳೆಹಣ್ಣಿನ ಮಿಲ್ಕ್ ಶೇಕ್
ಮೊಳಕೆಯೊಡೆದ ಹೆಸರು ಕಾಳು ಅಥವಾ ಕಡಲೆ ಕಾಳುಗಳ ಸೇವನೆ
ಹಾರ್ಲಿಕ್ಸ್ ಮತ್ತು ಬೂಸ್ಟ್ ದೇಹದ ಬೆಳವಣಿಗೆಗೆ ಅನುಕೂಲಕರವಾಗಿವೆ. ಆದರೆ ಧಾನ್ಯ, ದ್ವಿದಳ ಧಾನ್ಯ, ಹಾಲು, ಹಣ್ಣು, ತರಕಾರಿ ಮತ್ತು ಬೀಜಗಳ ಸೇವನೆ ಇವುಗಳಿಗಿಂತ ಉತ್ತಮವಾದ ಪೋಷಣೆಯನ್ನು ಸುಲಭವಾಗಿ ಒದಗಿಸುತ್ತವೆ. ಆದ್ದರಿಂದ ಸಾಧ್ಯವಾದಷ್ಟು ನೈಸರ್ಗಿಕ ಆಹಾರ ಸೇವನೆ ಉತ್ತಮ.
ಲೇಖಕರು: ಡಾ. ಆಯೇಷಾ ಜಾವೇದ್ ಮೂಲಾನಿ, ಸಲಹೆಗಾರ,ಡಯಟಿಷಿಯನ್, ರೇನ್ಬೋ ಮಕ್ಕಳ ಆಸ್ಪತ್ರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.