
ಪ್ರಾತಿನಿಧಿಕ ಚಿತ್ರ
ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಸಂತಾನೋತ್ಪತ್ತಿ ವಯಸ್ಸಿನ ಹತ್ತರಲ್ಲಿ ಓರ್ವ ಮಹಿಳೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆ. ಇದು ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾದ ಅಂತಃಸ್ರಾವ ಸಮಸ್ಯೆಗಳಲ್ಲಿ ಒಂದಾಗಿದೆ.
ಪಿಸಿಒಎಸ್‌ನ ಸಾಮಾನ್ಯ ಲಕ್ಷಣಗಳು
ಅನಿಯಮಿತ ಮುಟ್ಟಿನ ಚಕ್ರ: ಮುಟ್ಟು ಅನಿಯಮಿತವಾಗಿರುವುದು, ಸರಿಯಾಗಿ ಋತುಸ್ರಾವವಾಗದಿರುವುದು ಅಥವಾ ಅತಿಯಾದ ಋತುಸ್ರಾವ.
ಬಂಜೆತನ: ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗೆ ಪ್ರಮುಖ ಕಾರಣ ಪಿಸಿಒಎಸ್.
ಬೊಜ್ಜು: ಈ ಸಮಸ್ಯೆ ಹೊಂದಿರುವ 5ರಲ್ಲಿ 4 ಮಹಿಳೆಯರಲ್ಲಿ ಬೊಜ್ಜು ಸಾಮಾನ್ಯವಾಗಿ ಕಂಡುಬರುತ್ತದೆ.
ಹಿರ್ಸುಟಿಸಂ: ಮುಖ, ಎದೆ, ಹೊಟ್ಟೆಯ ಮೇಲೆ ಅತಿಯಾದ ಕೂದಲು ಬೆಳೆಯಬಹುದು. ಇದು ಪಿಸಿಒ ಹೊಂದಿರುವ 10ರಲ್ಲಿ 7 ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ.
ತೀವ್ರ ಮೊಡವೆ, ಎಣ್ಣೆಯುಕ್ತ ಚರ್ಮ
ದಪ್ಪನೆಯ ಚರ್ಮದೊಂದಿಗೆ ಕಪ್ಪು ಕಲೆಗಳು
ಅಲ್ಟ್ರಾಸೌಂಡ್ ಸ್ಕ್ಯಾನ್‌ನಲ್ಲಿ ದೇಹದ ವಿವಿಧ ಭಾಗಗಳಲ್ಲಿ ಸಣ್ಣ ಗುಳ್ಳೆಗಳು (cysts)
ಪಿಸಿಓಎಸ್ ಕಾರಣಗಳು?
ನಿಖರ ಕಾರಣಗಳು ತಿಳಿದಿಲ್ಲವಾದರೂ, ಕೆಳಗಿನ ಹಲವು ಅಂಶಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.
ಅನುವಂಶಿಕ
ಆಹಾರ ಪದ್ಧತಿ
ಜೀವನಶೈಲಿ : ಬೊಜ್ಜು, ಒತ್ತಡ , ನಿದ್ರೆ
ಅಂತಃಸ್ರಾವಕ್ಕೆ ಅಡ್ಡಿಪಡಿಸುವ ರಾಸಾಯನಿಕಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದು
ಇನ್ಸುಲಿನ್ ಪ್ರತಿರೋಧ ಎಂದರೇನು ?
ಪಿಸಿಒಎಸ್‌ನ ಮುಖ್ಯ ಪರಿಣಾಮ ಇನ್ಸುಲಿನ್ ಪ್ರತಿರೋಧದ ಸ್ಥಿತಿ ನಿರ್ಮಾಣ ಮಾಡುವುದು. ಅಂದರೆ ದೇಹದ ಜೀವಕೋಶಗಳು ಇನ್ಸುಲಿನ್ನು ಪರಿಣಾಮಗಳಿಗೆ ಪ್ರತಿಕ್ರಿಯಿಸದ ಸ್ಥಿತಿಯಾಗಿದೆ. ದೇಹವು ಇನ್ಸುಲಿನ್‌ಗೆ ಪ್ರತಿಕ್ರಿಯಿಸದಿದ್ದಾಗ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತದೆ. ಇದು ಮಧುಮೇಹಕ್ಕೆ ಕಾರಣವಾಗುತ್ತದೆ. ಆದ್ದರಿಂದ ನೀವು ನಿಮ್ಮ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು. ಈ ಇನ್ಸುಲಿನ್ ಪ್ರತಿರೋಧದಿಂದಲೇ ಅಕಾಂತೋಸಿಸ್ ಸಮಸ್ಯೆ (ದಪ್ಪನೆಯ ಚರ್ಮದೊಂದಿಗೆ ಕಪ್ಪು ಕಲೆಗಳು) ಕಾಣಿಸಬಹುದು.
ಪಿಸಿಓಎಸ್‌ನಿಂದ ಮಹಿಳೆಯರಲ್ಲಿ ಉಂಟಾಗುವ ಆರೋಗ್ಯದ ಅಪಾಯಗಳು
ಪಿಸಿಓಎಸ್ ಸಂತಾನೋತ್ಪತ್ತಿ ಅಂಗಗಳಲ್ಲದೆ ದೇಹದ ಬೇರೆ ಎಲ್ಲಾ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತದೆ. ಗಂಭೀರ ಹಾಗೂ ದೀರ್ಘಾವಧಿ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಇನ್ಸುಲಿನ್ ಪ್ರತಿರೋಧವು ಟೈಪ್ 2 ಮಧುಮೇಹ ಮತ್ತು ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಮೆಟಾಬಾಲಿಕ್ ಸಿಂಡ್ರೋಮ್: ಇದು ಮಧುಮೇಹ, ಹೃದಯ ಕಾಯಿಲೆಗಳು, ಬೊಜ್ಜು, ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.
ಅಂಡೋತ್ಪತ್ತಿ ಮತ್ತು ಹಾರ್ಮೋನಲ್ ಅಸಮತೋಲನ: ಇದು ಎಂಡೊಮೆಟ್ರಿಯಲ್ ಹೈಪರ್‌ಪ್ಲಾಸಿಯಾಕ್ಕೆ ಕಾರಣವಾಗುತ್ತದೆ (ಗರ್ಭಾಶಯದ ಒಳಪದರವು ದಪ್ಪವಾಗುವ ಸ್ಥಿತಿ). ಇದು ಕ್ಯಾನ್ಸರ್‌ಗೆ ಮುಂಚಿನ ಸ್ಥಿತಿಯಾಗಿದ್ದು, ದೀರ್ಘಕಾಲದವರೆಗೆ ಈ ಸಮಸ್ಯೆ ಇರುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಪಿಸಿಓಎಸ್ ನಿದ್ರೆಯ ಅಸ್ವಸ್ಥತೆಗಳು ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ.
ಪಿಸಿಓಎಸ್ / ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸಲು ಸಲಹೆಗಳು
ಜೀವನಶೈಲಿಯ ಬದಲಾವಣೆಗಳಾದ ಆಹಾರ ಕ್ರಮದಲ್ಲಿನ ಮಾರ್ಪಾಡು, ನಿಯಮಿತ ವ್ಯಾಯಾಮ ಮತ್ತು ಒತ್ತಡದ ನಿರ್ವಹಣೆ ಈ ಸಮಸ್ಯೆ ನಿಯಂತ್ರಣಕ್ಕೆ ಅತ್ಯಂತ ಸಹಕಾರಿ. ಇವು ರೋಗಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಆಹಾರ ಕ್ರಮ ಬದಲಾವಣೆ:
1. ಸಂಪೂರ್ಣ ಆಹಾರಗಳು: ಹಣ್ಣುಗಳು, ತರಕಾರಿಗಳು ಧಾನ್ಯಗಳು ಮತ್ತು ನೇರ ಪ್ರೋಟೀನ್‌ಗಳಂತಹ ಸಂಪೂರ್ಣ ಆಹಾರ ಸೇವನೆ ಅಭ್ಯಾಸಗಳು ತೂಕ ನಿರ್ವಹಣೆಗೆ ಮತ್ತು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
2. ಫೈಬರ್ ಸಮೃದ್ಧವಾಗಿರುವ ಆಹಾರಗಳು: ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಹಸಿರು ಎಲೆಗಳ ತರಕಾರಿಗಳಂಥ ಆಹಾರಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
3. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವ ಆಹಾರಗಳು: ಕೆಂಪಕ್ಕಿ, ಮತ್ತು ಪಿಷ್ಟರಹಿತ ತರಕಾರಿಗಳು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ತ್ವರಿತ ಏರಿಕೆಯನ್ನು ತಡೆಯುತ್ತವೆ.
4. ಕೊಬ್ಬುಗಳಿಂದ ದೂರವಿರಿ: ಸಂಸ್ಕರಿಸಿದ ಆಹಾರಗಳು, ಟ್ರಾನ್ಸ್ ಕೊಬ್ಬುಗಳು ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಸೇವಿಸಬೇಡಿ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಕಡಿಮೆ ಮಾಡಿ. ನಟ್ಸ್‌ಗಳನ್ನು ಹೆಚ್ಚಾಗಿ ಬಳಸಿ.
5. ಸೂಕ್ಷ್ಮ ಪೋಷಕಾಂಶಗಳು: ವಿಟಮಿನ್ ಪೂರಕವು ಫಲವತ್ತತೆ ಮತ್ತು ಹಾರ್ಮೋನುಗಳ ಸಮತೋಲನದಂತಹ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ.
ಜೀವನಶೈಲಿ ಬದಲಾವಣೆಗಳು
1. ನಿಯಮಿತ ವ್ಯಾಯಾಮಗಳು: ತೂಕ ಹೆಚ್ಚಾಗುವುದನ್ನು ತಡೆಯಲು ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರ ವ್ಯಾಯಾಮ ಅಥವಾ ವಾರಕ್ಕೆ 75 ನಿಮಿಷಗಳ ತೀವ್ರವಾದ ತೀವ್ರತೆಯನ್ನು ಹೊಂದಿರುವ ವ್ಯಾಯಾಮ ಮಾಡಿ
2. ಯೋಗ, ಧ್ಯಾನ ಮತ್ತು ದೀರ್ಘ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ
3. ಕನಿಷ್ಠ 8 ಗಂಟೆಗಳ ಅಡೆತಡೆಗಳಿಲ್ಲದಂತೆ ನಿದ್ರೆ
4. ಮಾನಸಿಕ ಆರೋಗ್ಯವು ಎಲ್ಲವಕ್ಕೂ ಮುಖ್ಯ. ಮಾನಸಿಕ ನೆಮ್ಮದಿ, ಒತ್ತಡ ರಹಿತವಾಗಿರುವುದು ಆಹಾರ, ವ್ಯಾಯಾಮ ಮತ್ತು ನಡವಳಿಕೆಯಂತಹ ಜೀವನಶೈಲಿಯ ಬದಲಾವಣೆಗಳನ್ನು ರೂಢಿಸಿಕೊಳ್ಳಲು ಸಹಕಾರಿ.
ವೈದ್ಯರನ್ನು ಸಂಪರ್ಕಿಸಿ
ಈ ಸಮಸ್ಯೆಗೆ ಪ್ರಾರಂಭಿಕ ಚಿಕಿತ್ಸೆಯು ಜೀವನಶೈಲಿ ಮಾರ್ಪಾಡು. ಸ್ತ್ರೀರೋಗತಜ್ಞರೊಂದಿಗೆ ಸಮಾಲೋಚನೆ ಮತ್ತು ಮುಂದುವರಿದ ಚಿಕಿತ್ಸೆ ಅಗತ್ಯವಿದೆ. ಮಾತ್ರೆಗಳು, ವಿಟಮಿನ್ ಡಿ ಪೂರಕಗಳು, ಮೆಟ್‌ಫಾರ್ಮಿನ್ ಮತ್ತು ಇನೋಸಿಟಾಲ್‌ಗಳಂತಹ ಇನ್ಸುಲಿನ್ ಸೆನ್ಸಿಟೈಸರ್‌ಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಬಹುದು.
(ಡಾ. ಸುಷ್ಮಾ ಕೆ. ಸ್ತ್ರೀರೋಗ ತಜ್ಞರು, ಅಪೋಲೋ ಆಸ್ಪತ್ರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.