ವ್ಯಾಜಿನಿಸ್ಮಸ್
– ಎ.ಐ ಚಿತ್ರ
ಬೆಂಗಳೂರು: ‘ವ್ಯಾಜಿನಿಸ್ಮಸ್’ ಎನ್ನುವ ಲೈಂಗಿಕ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರು ಮದುವೆಯಾದ ಅಥವಾ ಸಂಬಂಧದಲ್ಲಿ ತೊಡಗಿಸಿಕೊಂಡ ಸರಾಸರಿ 3.23 ವರ್ಷಗಳ ಬಳಿಕ ವೈದ್ಯಕೀಯ ನೆರವು ಪಡೆಯುತ್ತಾರೆ. ಈ ಪೈಕಿ ಶೇ 9ರಷ್ಟು ಮಂದಿ ವ್ಯಾಕುಲತೆ ಅಥವಾ ಖಿನ್ನತೆಗೆ ಒಳಗಾಗಿದ್ದಾರೆ ಎಂದು ದೇಶದ ಐದು ನಗರಗಳಲ್ಲಿ ನಡೆದ ಸಂಶೋಧನೆಯಲ್ಲಿ ಗೊತ್ತಾಗಿದೆ.
ಈ ಕಾಯಿಲೆಯಿಂದ ಬಳಲುತ್ತಿರುವ ಶೇ 30.9ರಷ್ಟು ಮಹಿಳೆಯರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿಲ್ಲ ಎಂದು ಅದು ಹೇಳಿದೆ.
ಪ್ರಸೂತಿ ಹಾಗೂ ಸ್ತ್ರೀರೋಗ ಶಾಸ್ತ್ರ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಪ್ರಕಾರ, ವ್ಯಾಜಿನಿಸ್ಮಸ್‌ನಿಂದ ಬಳಲುತ್ತಿರುವ ಶೇ 9.2 ರಷ್ಟು ಮಹಿಳೆಯರು ವ್ಯಾಕುಲತೆ ಹಾಗೂ ಶೇ 8.6 ರಷ್ಟು ಮಹಿಳೆಯರು ಖಿನ್ನತೆಯಿಂದ ಬಳಲುತ್ತಿದ್ದಾರೆ.
ಶ್ರೋನಿಯು ಅನಿಯಂತ್ರಿತವಾಗಿ ಕುಗ್ಗುವುದು ಹಾಗೂ ನೋವಿನ ಭಯದಿಂದ ಲೈಂಗಿಕ ಕ್ರಿಯೆ ನಡೆಸಲು ಅಸಾಧ್ಯವಾಗುವುದನ್ನು ವ್ಯಾಜಿನಿಸ್ಮಸ್ ಎನ್ನಲಾಗುತ್ತದೆ.
‘ವೈಯಕ್ತಿಕ ಸಂಬಂಧದ ಸಮಸ್ಯೆಗಳ ಬಗ್ಗೆ ಅವರು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಕೆಲವೊಂದು ವೈಯಕ್ತಿಕ ಸಮಸ್ಯೆಯಿಂದ ವ್ಯಾಜಿನಿಸ್ಮಸ್ ಉಂಟಾಗಿರುತ್ತದೆ; ಅಥವಾ ವ್ಯಾಜಿನಿಸ್ಮಸ್‌ನಿಂದ ವೈಯಕ್ತಿಕ ಸಮಸ್ಯೆಗಳು ಉದ್ಭವಿಸಿರುತ್ತದೆ. ಹೀಗಾಗಿ ಸಮಸ್ಯೆ ಯಾವುದೆಂದು ಕಂಡುಹಿಡಿಯಲು ನಮಗೆ ಕಷ್ಟವಾಗುತ್ತದೆ’ ಎಂದು ಸಂಶೋಧಕರಲ್ಲಿ ಓರ್ವರಾದ ಡಾ. ಐಶ್ವರ್ಯ ರಾವ್ ಪ್ರಜಾವಾಣಿಗೆ ತಿಳಿಸಿದ್ದಾರೆ.
ಈ ಬಗ್ಗೆ ಮಹಿಳೆಯರು ಹಾಗೂ ಅವರ ಪೋಷಕರಿಗೆ ಜಾಗೃತಿಯ ಕೊರತೆ ಇದೆ. ಹೀಗಾಗಿ ಹಲವು ಮಹಿಳೆಯರು ಮೌನ ಯಾತನೆ ಅನುಭವಿಸುತ್ತಿದ್ದಾರೆ.
‘ಈ ಬಗ್ಗೆ ಜಾಗೃತಿ ಕೊರತೆ ಇರುವುದರಿಂದ ಚಿಕಿತ್ಸೆ ಪಡೆಯುವುದಕ್ಕೂ ಮುನ್ನ ಮಹಿಳೆಯರು ಮೌನ ಯಾತನೆ ಅನುಭವಿಸುತ್ತಾರೆ. ಒಳನುಗ್ಗುವ ವಸ್ತುಗಳು ವ್ಯಾಕುಲತೆಗೆ ಕಾರಣವಾಗಬಹು ಎನ್ನುವ ದೊಡ್ಡ ಭಯ ಹಲವು ಮಂದಿಗೆ ಇದೆ. ಹೀಗಾಗಿ ಸ್ತ್ರೀರೋಗ ತಜ್ಞರಿಂದ ತಪಾಸಣೆ ನಡೆಸುವುದಕ್ಕೂ ಅವರು ಭಯ ಪಡುತ್ತಾರೆ’ ಎನ್ನುತ್ತಾರೆ ಮತ್ತೊಬ್ಬ ಸಂಶೋಧಕ ಡಾ. ಸಂದೀಪ್ ದೇಶಪಾಂಡೆ.
ಈ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರು ವೈದ್ಯರನ್ನು ಸಂಪರ್ಕಿಸಲು ಮದುವೆಯಾದ ಅಥವಾ ಸಂಬಂಧ ಬೆಳೆಸಿಕೊಂಡ ಸರಾಸರಿ 3.23 ವರ್ಷ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಸಂಶೋಧನೆ ಎತ್ತಿ ತೋರಿಸಿದೆ.
‘ಈ ಕಾಯಿಲೆಯಿಂದ ಬಳಲಿ ಚಿಕಿತ್ಸೆಗೆಂದು ಬರುವವರಲ್ಲಿ ಹೆಚ್ಚಿನವರು ಟೈರ್–1 ನಗರಗಳಲ್ಲಿ ಇರುವ ಮದುವೆಯಾದ ಅಥವಾ ಸಹಜೀವನ ನಡೆಸುತ್ತಿರುವವರು. ಲೈಂಗಿಕ ಕ್ರಿಯೆಗೆ ಪ್ರಯತ್ನಿಸಿ ಸಫಲರಾಗದೆ ಕೊನೆಗೆ ಚಿಕಿತ್ಸೆಗೆ ಬರುತ್ತಾರೆ. ಮೊದಲ ಬಾರಿಗೆ ಚಿಕಿತ್ಸೆ ಪಡೆಯಲು ಬರುವವರು ವಿವಾಹವಾಗಿ ಅಥವಾ ಸಂಬಂಧದಲ್ಲಿ ಇದ್ದು 3.23 ವರ್ಷಗಳ ಬಳಿಕ ಬರುತ್ತಾರೆ. ಇದು ಲೈಂಗಿಕ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಭಾರತದಲ್ಲಿ, ಅದರಲ್ಲೂ ಭಾರತದ ಮಹಿಳೆಯರಲ್ಲಿ ಇರುವ ಸಂಕೋಚದ ಪ್ರತೀಕ’ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಇದರಿಂದಾಗಿ ಸಂಗಾತಿಯನ್ನು ತೃಪ್ತಿಪಡಿಸಲಾಗುತ್ತಿಲ್ಲ ಎನ್ನುವ ಅಪರಾಧ ಪ್ರಜ್ಞೆ ಅವರನ್ನು ಕಾಡುತ್ತದೆ. ಇದು ಮಾನಸಿಕ ಆರೋಗ್ಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದೀಗ ಕಾಲ ಬದಲಾದಂತೆ ಗಂಡಂದಿರು ಈ ಬಗ್ಗೆ ವೈದ್ಯಕೀಯ ಸಹಾಯ ಪಡೆಯಲು ಪತ್ನಿಯಂದಿರಿಗೆ ಬೆಂಬಲ ನೀಡುತ್ತಾರೆ ಎಂದು ಸಂಶೋಧನೆ ವರದಿ ಹೇಳಿದೆ.
‘ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಿ ತಜ್ಞರಿಂದ ಚಿಕಿತ್ಸೆ ಪಡೆದುಕೊಳ್ಳುವಂತೆ ಹಲವು ಸಂಗಾತಿಗಳು ತಮ್ಮ ಪತ್ನಿಗೆ ಬೆಂಬಲಿಸುವುದನ್ನು ಕಾಣುತ್ತಿದ್ದೇವೆ. ತಜ್ಞರ ಭೇಟಿ ವೇಳೆಗೆ ಪತ್ನಿಯೊಂದಿಗೆ ಅವರೂ ಹೋಗುತ್ತಾರೆ. ರೋಗ ನಿರ್ಣಯ ಆದ ಬಳಿಕ, ಅವರು ಪತ್ನಿಗೆ ಹೆಚ್ಚು ಒತ್ತಾಸೆ ನೀಡುತ್ತಾರೆ’ ಎಂದು ಸಂಶೋಧಕರಲ್ಲಿ ಓರ್ವರಾದ ಅಶಿಮಾ ಸಾಹೋರ್ ಹೇಳಿದ್ದಾರೆ.
ಐದು ನಗರಗಳಲ್ಲಿ ವ್ಯಾಜಿನಿಸ್ಮಸ್ ಸಮಸ್ಯೆ ಇರುವ 313 ರೋಗಿಗಳನ್ನು ವಿಶ್ಲೇಷಿಸಿ ಈ ವರದಿ ತಯಾರಿಸಲಾಗಿದೆ. ಇದು ಈ ರೋಗಿಗಳ ಬಗ್ಗೆ ಕಲೆ ಹಾಕಿರುವ ಅತಿ ದೊಡ್ಡ ಮಾಹಿತಿ ಎಂದು ಸಂಶೋಧರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.