ADVERTISEMENT

ವಿಟಮಿನ್ ಡಿ ಕೊರತೆಯಿಂದ ಸಂತಾನೋತ್ಪತ್ತಿ ಮೇಲೆ ಪರಿಣಾಮ: ಇಲ್ಲಿದೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 9:18 IST
Last Updated 11 ನವೆಂಬರ್ 2025, 9:18 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಕೆಲ ವರ್ಷಗಳ ಹಿಂದೆ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ‘ವಿಟಮಿನ್ ಡಿ’ ಮುಖ್ಯ ಎಂದು ಗುರುತಿಸಲಾಗಿತ್ತು. ಆದರೆ ಈಗ ಸಂತಾನೋತ್ಪತ್ತಿ ಮತ್ತು ಹಾರ್ಮೋನುಗಳ ಆರೋಗ್ಯದಲ್ಲೂ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ತಿಳಿದು ಬಂದಿದೆ.

ಭಾರತದಲ್ಲಿ ಹೇರಳವಾದ ಸೂರ್ಯನ ಬೆಳಕಿನ ಲಭ್ಯತೆಯ ಹೊರತಾಗಿಯೂ, ‘ವಿಟಮಿನ್ ಡಿ’ ಕೊರತೆ ಅಪಾಯಕಾರಿ ಮಟ್ಟದಲ್ಲಿದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಶೇ 50 ರಿಂದ 70ರಷ್ಟು ಭಾರತೀಯರು ದೇಹಕ್ಕೆ ಅಗತ್ಯವಾದ ‘ವಿಟಮಿನ್‌ ಡಿ’ ಹೊಂದಿಲ್ಲ. ಬಿಸಿಲಿಗೆ ಸಾಕಷ್ಟು ಒಡ್ಡಿಕೊಳ್ಳದೇ ಇರುವುದು, ಸ್ಕ್ರೀನ್‌ ಟೈಮ್‌ ಹೆಚ್ಚಿರುವುದು, ನಗರ ಜೀವನ ಮತ್ತು ಕಳಪೆ ಆಹಾರ ಸೇವನೆಯು ಈ ಸಾಂಕ್ರಾಮಿಕ ಕಾಯಿಲೆಗೆ ಕಾರಣವಾಗಿದೆ.

ADVERTISEMENT

ಸೂರ್ಯನ ಬೆಳಕಿನ ವಿಟಮಿನ್ ಮತ್ತು ಫಲವತ್ತತೆ ನಡುವಿನ ಸಂಪರ್ಕ:

‘ವಿಟಮಿನ್ ಡಿ’ ಪೋಷಕಾಂಶಕ್ಕಿಂತಲೂ ಹಾರ್ಮೋನ್‌ನಂತೆ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿರುವ 2,000‌ಕ್ಕೂ ಹೆಚ್ಚು ವಂಶವಾಹಿಗಳ ಮೇಲೆ ಪ್ರಭಾವ ಬೀರುತ್ತದೆ. ಅವುಗಳಲ್ಲಿ ಹಲವು ಸಂತಾನೋತ್ಪತ್ತಿ ಕಾರ್ಯಕ್ಕೆ ಸಂಬಂಧಿಸಿವೆ. ಈ ವಿಟಮಿನ್‌ನ ಉತ್ತಮ ಮಟ್ಟ ಅಂಡೋತ್ಪತ್ತಿ, ವೀರ್ಯ ಉತ್ಪಾದನೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಇದರ ಕೊರತೆ, ಅನಿಯಮಿತ ಮುಟ್ಟಿನ ಚಕ್ರಗಳು, ಹಾರ್ಮೋನ್‌ ಅಸಮತೋಲನ ಮತ್ತು ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆಯಾಗುವುದಕ್ಕೂ ಕಾರಣವಾಗುತ್ತದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಮದರ್‌ಹುಡ್ ಫರ್ಟಿಲಿಟಿ ಮತ್ತು ಐವಿಎಫ್ ಆಸ್ಪತ್ರೆಯ ಫರ್ಟಿಲಿಟಿ ಸ್ಪೆಷಲಿಸ್ಟ್ ಮತ್ತು ರಿಪ್ರೊಡಕ್ಟಿವ್ ಮೆಡಿಸಿನ್ ವಿಭಾಗದ ಸಲಹಾತಜ್ಞೆ ಡಾ. ಅಮಿತಾ ಎನ್ ಅವರ ಪ್ರಕಾರ, ‘ಮಹಿಳೆ ಹಾಗೂ ಪುರುಷರ ಸಂತಾನೋತ್ಪತ್ತಿಯ ಆರೋಗ್ಯದಲ್ಲಿ ‘ವಿಟಮಿನ್ ಡಿ’ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರಲ್ಲಿ ಈ ವಿಟಮಿನ್‌ ಸಾಕಷ್ಟು ಮಟ್ಟದಲ್ಲಿದ್ದರೆ ಅಂಡಾಶಯ ಸೂಕ್ತವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಎಂಡೊಮೆಟ್ರಿಯಲ್ ಗ್ರಹಿಕೆಯನ್ನು ಸುಧಾರಿಸುತ್ತದೆ. ಪುರುಷರಲ್ಲಿ ‘ವಿಟಮಿನ್ ಡಿ’ ಕೊರತೆ ಟೆಸ್ಟೋಸ್ಟೆರಾನ್ ಉತ್ಪಾದನೆ ಮತ್ತು ವೀರ್ಯದ ಚಲನಶೀಲತೆಯನ್ನು ದುರ್ಬಲಗೊಳಿಸುತ್ತದೆ’.

ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಸಮತೋಲಿತ ಆಹಾರ ಮತ್ತು ವೈದ್ಯಕೀಯ ಮಾರ್ಗದರ್ಶನದಲ್ಲಿ ಸಪ್ಲಿಮೆಂಟ್‌ಗಳ ಸೇವನೆಯಿಂದ ವಿಟಮಿನ್ ಡಿ ಮಟ್ಟವನ್ನು ಸಮತೋಲನವಾಗಿಡಬಹುದು. ಇದರಿಂದಾಗಿ ಫಲವತ್ತತೆಯ ಫಲಿತಾಂಶ ಹಾಗೂ ಒಟ್ಟಾರೆ ಹಾರ್ಮೋನುಗಳ ಸಮತೋಲನ ಸುಧಾರಣೆಯಾಗುತ್ತದೆ.

ಸಂಶೋಧನೆಯಿಂದ ಬಂಜೆತನ ಮತ್ತು ಐವಿಎಫ್ ಫಲಿತಾಂಶಗಳಿಗೂ ವಿಟಮಿನ್ ಡಿ ಕೊರತೆಗೂ ಇರುವ ಸಂಬಂಧವನ್ನು ಅಂತಾರಾಷ್ಟ್ರೀಯ ಮತ್ತು ಭಾರತೀಯ ಅಧ್ಯಯನಗಳು ಪತ್ತೆ ಮಾಡಿವೆ. ಕಡಿಮೆ ವಿಟಮಿನ್ ಡಿ ಮಟ್ಟವು ಬಂಜೆತನಕ್ಕೆ ಕಾರಣವಾಗಬಹುದು. ಇದರ ಕೊರತೆಯಿಂದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಅಂಡೋತ್ಪತ್ತಿ ಸಮಸ್ಯೆಗಳಿಗೆ ಕಾರಣವಾಗಬಹುದು. 

‘ಬಂಜೆತನ ಇರುವ ಮಹಿಳೆಯರಲ್ಲಿ, ಶೇ 7ರಷ್ಟು ಮಹಿಳೆಯರು ಮಾತ್ರ ಸಾಕಷ್ಟು ವಿಟಮಿನ್ ಡಿ ಮಟ್ಟವನ್ನು ಹೊಂದಿದ್ದರು. ಉತ್ತಮ ಐವಿಎಫ್ ಯಶಸ್ಸಿನ ಪ್ರಮಾಣ ಹೊಂದಿದ್ದರು ಎಂದು ತೋರಿಸಿದೆ ಎಂದು ದಾವಣಗೆರೆಯ ನೋವಾ ಐವಿಎಫ್ ಫರ್ಟಿಲಿಟಿಯ, ಫರ್ಟಿಲಿಟಿ ತಜ್ಞ ಡಾ. ದೀಪಕ್‌ ಶೆಟ್ಟಿ ಹೇಳುತ್ತಾರೆ’.

ವಿಟಮಿನ್ ಡಿ ಅಂಡಾಣುವಿನ ಬೆಳವಣಿಗೆ, ಗರ್ಭಾಶಯದ ಗ್ರಹಣಶಕ್ತಿ ಮತ್ತು ವೀರ್ಯದ ಗುಣಮಟ್ಟಕ್ಕೆ ಸಹಕಾರಿಯಾಗಿದೆ. ಜೀವನಶೈಲಿ ಮತ್ತು ಆಹಾರಕ್ರಮದ ಬದಲಾವಣೆಗಳೊಂದಿಗೆ ವಿಟಮಿನ್ ಡಿ ಕೊರತೆಯನ್ನು ಸರಿಪಡಿಸುವುದು ಸುಲಭ ಎಂದು ಹೇಳುತ್ತಾರೆ. 

ವಿಟಮಿನ್ ಡಿ ಪೂರೈಕೆಯನ್ನು ಕಾಪಾಡಿಕೊಳ್ಳುವುದರಿಂದ ಫಲವತ್ತತೆಯನ್ನು ಸುಧಾರಿಸುವುದಲ್ಲದೆ, ಪ್ರಿಕ್ಲಾಂಪ್ಸಿಯಾ, ಅವಧಿಪೂರ್ವ ಜನನ ಮತ್ತು ಗರ್ಭಾವಸ್ಥೆಯ ಮಧುಮೇಹದಂತಹ ಅಪಾಯಗಳನ್ನು ಕಡಿಮೆ ಮಾಡಬಹುದು ಅವರು ಹೇಳುತ್ತಾರೆ.

ವಿಟಮಿನ್ ಡಿ ಕೊರತೆಗೆ ಕಾರಣಗಳು

  • ನಗರ ಮಾಲಿನ್ಯ: ಹೊಗೆ ಮತ್ತು ಮಂಜಿನ ಮಿಶ್ರಣ (ಸ್ಮಾಗ್‌) ಸೂರ್ಯನ ಬೆಳಕನ್ನು ಹೀರಿಕೊಳ್ಳುವುದನ್ನು ಕಡಿಮೆಗೊಳಿಸುತ್ತದೆ.

  • ಗಾಢ ಸ್ಕಿನ್ ಟೋನ್: ನೈಸರ್ಗಿಕವಾಗಿ ವಿಟಮಿನ್ ಡಿ ಸಂಶ್ಲೇಷಣೆಯನ್ನು ಕಡಿಮೆ ಮಾಡುತ್ತದೆ.

  • ಕಳಪೆ ಆಹಾರ: ವಿಟಮಿನ್ ಡಿ ಭರಿತ ಆಹಾರಗಳಾದ ಮೊಟ್ಟೆ, ಮೀನು ಮತ್ತು ಫೋರ್ಟಿಫೈಡ್‌ ಹಾಲಿನಂತಹ ಆಹಾರಗಳ ಸೀಮಿತ ಸೇವನೆ.

  • ಜಡ ಜೀವನಶೈಲಿ: ಕಡಿಮೆ ಹೊರಾಂಗಣ ಚಟುವಟಿಕೆಯಿಂದ ನಿಸರ್ಗಕ್ಕೆ ತೆರೆದುಕೊಳ್ಳುವಿಕೆ ಕಡಿಮೆಯಾಗುತ್ತದೆ

ಮುಂಜಾಗರೂಕತೆ ಕ್ರಮಗಳು ಮತ್ತು ಚಿಕಿತ್ಸೆ

ವಿಟಮಿನ್ ಡಿ ಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ವಿಶೇಷವಾಗಿ ಗರ್ಭಧಾರಣೆಗೆ ಯೋಜಿಸುತ್ತಿರುವ ಮಹಿಳೆಯರು, ಹಾರ್ಮೋನ್ ಅಸಮತೋಲನದಿಂದ ಬಳಲುತ್ತಿರುವವರು ಹಾಗೂ ದೀರ್ಘಕಾಲದ ಆಯಾಸ ಹೊಂದಿರುವವರು ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.

ಚಿಕಿತ್ಸೆ ಈ ಕೆಳಗಿವುಗಳನ್ನು ಒಳಗೊಂಡಿರಬಹುದು:

  • ವಿಟಮಿನ್ ಡಿ ಯ ಪರೀಕ್ಷೆ (ವೈದ್ಯಕೀಯ ಮೇಲ್ವಿಚಾರಣೆಯಲ್ಲಿ).

  • ಹಾಲು, ಕಿತ್ತಳೆ ರಸ ಮತ್ತು ಧಾನ್ಯಗಳಂತಹ ಫೋರ್ಟಿಫೈಡ್ ಆಹಾರಗಳು.

  • ತೀವ್ರ ಕೊರತೆಯಿದ್ದರೆ ಚುಚ್ಚುಮದ್ದು ನೀಡಲಾಗುವುದು.

ಸಾಮಾನ್ಯವಾಗಿ, ನಿರಂತರ ಪೂರಕ ಸೇವನೆ ಮತ್ತು ಜೀವನಶೈಲಿಯ ಬದಲಾವಣೆಯಿಂದ 8 ರಿಂದ 12 ವಾರಗಳಲ್ಲಿ ಸುಧಾರಣೆ ಕಾಣಬಹುದು.

ವಿಟಮಿನ್ ಡಿಯನ್ನು ಸಹಜವಾಗಿ ಹೆಚ್ಚಿಸಲು ಸರಳ ಮನೆ ಆರೈಕೆ ಸಲಹೆಗಳು

ಅಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಮೂಳೆಚಿಕಿತ್ಸೆ ವಿಭಾಗದ ತಜ್ಞ ಡಾ. ಜಿ. ಎನ್. ಹರ್ಷ ಹೇಳುವಂತೆ ‘ವಿಟಮಿನ್ ಡಿ ಕೇವಲ ಮೂಳೆಗಳ ಆರೋಗ್ಯಕ್ಕೆ ಮಾತ್ರವಲ್ಲದೆ, ರೋಗನಿರೋಧಕ ಶಕ್ತಿ, ಮನಸ್ಥಿತಿ ಮತ್ತು ದೀರ್ಘಕಾಲದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಪ್ರತಿದಿನ ಬೆಳಗಿನ ಜಾವ ಸೂರ್ಯನ ಬೆಳಕಿನಲ್ಲಿ 15 ರಿಂದ 20 ನಿಮಿಷ ಕಳೆಯುವುದು, ಮೊಟ್ಟೆ, ಫೋರ್ಟಿಫೈಡ್ ಹಾಲು, ಮೀನು ಮುಂತಾದ ವಿಟಮಿನ್ ಡಿ ಸಮೃದ್ಧ ಆಹಾರಗಳನ್ನು ಸೇವಿಸುವುದರೊಂದಿಗೆ ವೈದ್ಯರು ಸೂಚಿಸಿದರೆ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವುದು ದೇಹದ ಶಕ್ತಿ ಮತ್ತು ಆರೋಗ್ಯವನ್ನು ಪುನಃಸ್ಥಾಪಿಸಲು ಸಹಾಯವಾಗುತ್ತದೆ’ ಎಂದು ಹೇಳುತ್ತಾರೆ.

ಇಲ್ಲಿವೆ ಕೆಲವು ಸರಳ ಹೆಜ್ಜೆಗಳು:

  • ‌ಸೂರ್ಯಸ್ನಾನ ಮಾಡಿ: ವಾರದಲ್ಲಿ ಕನಿಷ್ಠ 3 ರಿಂದ 4 ಬಾರಿ, ಬೆಳಿಗ್ಗೆ 7 ರಿಂದ 9 ಗಂಟೆಯ ನಡುವೆ, 15 ರಿಂದ 20 ನಿಮಿಷಗಳ ಕಾಲ ಕೈ ಮತ್ತು ಕಾಲುಗಳಿಗೆ ಬಿಸಿಲು ಬೀಳುವಂತೆ ನೋಡಿಕೊಳ್ಳಿ.

  • ವಿಟಮಿನ್ ಡಿ ಇರುವ ಆಹಾರ ಸೇವಿಸಿ: ಮೀನು (ಸ್ಯಾಲ್ಮನ್, ಸಾರ್ಡಿನ್), ಮೊಟ್ಟೆ, ಫೋರ್ಟಿಫೈಡ್ ಹಾಲು ಮತ್ತು ಅಣಬೆಗಳು ಆಹಾರದ ಭಾಗವಾಗಿರಲಿ.

  • ಹೊರಾಂಗಣದಲ್ಲಿ ಸಕ್ರಿಯರಾಗಿರಿ: ಸೂರ್ಯನ ಬೆಳಕಿನಲ್ಲಿ ನಡೆಯುವುದು, ತೋಟಗಾರಿಕೆ ಅಥವಾ ಯೋಗ ಮಾಡುವುದರಿಂದ ವಿಟಮಿನ್‌ ಡಿ ಪಡೆಯಬಹುದು. 

  • ವಿಟಮಿನ್‌ ಮಟ್ಟ ಪರಿಶೀಲಿಸಿಕೊಳ್ಳಿ: ವರ್ಷಕ್ಕೆ ಒಂದು ಬಾರಿ ವಿಟಮಿನ್ ಡಿ ಪರೀಕ್ಷೆ ಮಾಡಿಸಿಕೊಂಡರೆ ದೇಹದ ಮಟ್ಟವನ್ನು ಸರಿಯಾಗಿ ಕಾಪಾಡಿಕೊಳ್ಳಬಹುದು.

ಸಣ್ಣ ಹೆಜ್ಜೆಗಳು, ದೊಡ್ಡ ಪರಿಣಾಮ:

ವಿಟಮಿನ್ ಡಿ ಮಟ್ಟವನ್ನು ಕಾಪಾಡಿಕೊಳ್ಳುವುದು ತುಂಬಾ ಸುಲಭ ಮತ್ತು ಕಡಿಮೆ ವೆಚ್ಚದ ಕ್ರಮವಾಗಿದ್ದು, ಸಂತಾನೋತ್ಪತ್ತಿ ಶಕ್ತಿಯನ್ನು ಹೆಚ್ಚಿಸಲು, ಹಾರ್ಮೋನ್ ಸಮತೋಲನ ಕಾಪಾಡಲು, ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಹಾಗೂ ಮನಸ್ಸನ್ನು ಸಂತೋಷವಾಗಿಡಲು ಸಹಾಯ ಮಾಡುತ್ತದೆ. ಪ್ರತಿದಿನ ಸ್ವಲ್ಪ ಹೊತ್ತು ಸೂರ್ಯನ ಬೆಳಕಿನಲ್ಲಿ ಕಳೆದರೆ, ಅದು ನಮ್ಮ ಸಂತಾನೋತ್ಪತ್ತಿ ಆರೋಗ್ಯಕ್ಕೂ, ಒಟ್ಟಾರೆ ದೈಹಿಕ ಮತ್ತು ಮಾನಸಿಕ ಕ್ಷೇಮಕ್ಕೂ ಸಹಕಾರಿಯಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.