ADVERTISEMENT

ಗಮನಿಸಿ: ಚಳಿಗಾಲದಲ್ಲಿ ಈ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 7:20 IST
Last Updated 15 ನವೆಂಬರ್ 2025, 7:20 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಚಳಿಗಾಲದಲ್ಲಿ ನಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿರುತ್ತದೆ. ಈ ಋತುವಿನಲ್ಲಿ ಸೂಕ್ತವಾದ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ. 

ಹಾಗಾದರೆ ಚಳಿಗಾಲದಲ್ಲಿ ಪ್ರಮುಖವಾಗಿ ಸೇವಿಸಬೇಕಾದ ಹಣ್ಣು ಹಾಗೂ ತರಕಾರಿಗಳು ಯಾವುವು ಎಂಬುದನ್ನು ತಿಳಿಯೋಣ. 

ADVERTISEMENT

ಚಳಿಗಾಲದ ಪ್ರಮುಖ ಹಣ್ಣುಗಳು: 

  • ಸಿಟ್ರಸ್ ಹಣ್ಣುಗಳು: ಚಳಿಗಾಲದಲ್ಲಿ ಕಿತ್ತಳೆ, ಮೋಸಂಬಿಯಂತಹ ಮುಂತಾದ ಸಿಟ್ರಸ್ ಹಣ್ಣುಗಳು ಸೇವಿಸಬೇಕು. ಈ ಹಣ್ಣುಗಳಲ್ಲಿ ‘ವಿಟಮಿನ್ ಸಿ’ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಶೀತ ಮತ್ತು ಕೆಮ್ಮಿನಂತಹ ಚಳಿಗಾಲದ ಕಾಯಿಲೆಗಳು ಹರಡದಂತೆ ತಡೆಯುತ್ತದೆ. ಪ್ರತಿದಿನ ಒಂದು ಕಿತ್ತಳೆ ಸೇವಿಸುವುದರಿಂದ ಚರ್ಮದ ಆರೋಗ್ಯವೂ ಉತ್ತಮವಾಗಿರುತ್ತದೆ. 

  • ಸೇಬು: ಸೇಬು ಚಳಿಗಾಲದ ಅತ್ಯುತ್ತಮ ಹಣ್ಣಾಗಿದೆ. ಇದರಲ್ಲಿ ‘ಫೈಬರ್’, ‘ಆಂಟಿಆಕ್ಸಿಡೆಂಟ್‌’ಗಳು ಮತ್ತು ‘ವಿಟಮಿನ್‌’ಗಳು ಸಮೃದ್ಧವಾಗಿವೆ. ಪ್ರತಿದಿನ ಸೇಬು ತಿನ್ನುವವರಿಗೆ ಹೃದಯ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೀರ್ಣಕ್ರಿಯೆ ಸುಧಾರಣೆಯಾಗುವುದರೊಂದಿಗೆ ತೂಕ ನಿಯಂತ್ರಣಕ್ಕೂ ಸಹಾಯಕವಾಗುತ್ತದೆ.

  • ದಾಳಿಂಬೆ: ರಕ್ತವರ್ಧಕ ಗುಣಗಳಿಂದ ಕೂಡಿರುವ ದಾಳಿಂಬೆ ಚಳಿಗಾಲದ ವಿಶೇಷ ಹಣ್ಣು. ಇದರಲ್ಲಿರುವ ಐರನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ರಕ್ತಹೀನತೆಯನ್ನು ದೂರ ಮಾಡುತ್ತವೆ. ಹೃದಯಕ್ಕೆ ಬಲ ನೀಡುವುದರೊಂದಿಗೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

  • ಅಂಜೂರ: ಒಣ ಅಂಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಸೇವಿಸುವುದರಿಂದ ಮಲಬದ್ಧತೆ ಪರಿಹಾರವಾಗುತ್ತದೆ. ಈ ಹಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಖನಿಜಗಳು ಹೇರಳವಾಗಿವೆ.

ಚಳಿಗಾಲದ ಪ್ರಮುಖ ತರಕಾರಿಗಳು:

  • ಪಾಲಕ್, ಮೆಂತೆ ಸೊಪ್ಪು ಹಾಗೂ ಬಸಳೆ ಸೊಪ್ಪು ಚಳಿಗಾಲದ ವಿಶೇಷ ಹಸಿರು ಎಲೆಯ ತರಕಾರಿಗಳಾಗಿವೆ. ಈ ಸೊಪ್ಪುಗಳಲ್ಲಿ ಐರನ್, ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ವಿಟಮಿನ್ ಕೆ ಸಮೃದ್ಧವಾಗಿವೆ. ಪಾಲಕ್ ಸೇವನೆಯಿಂದ ಕಣ್ಣಿನ ಆರೋಗ್ಯ ಮತ್ತು ರಕ್ತದಲ್ಲಿ ಹಿಮೊಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ.

  • ‌ಕ್ಯಾರೆಟ್: ಚಳಿಗಾಲದಲ್ಲಿ ಹಸಿ ಕ್ಯಾರೆಟ್ ಸೇವನೆಯು ಉತ್ತಮವಾಗಿದೆ. ಬೀಟಾ ಕ್ಯಾರೊಟಿನ್ ಅಧಿಕವಾಗಿರುವ ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಚರ್ಮದ ಹೊಳಪು ಹೆಚ್ಚಿಸುವುದರೊಂದಿಗೆ ರೋಗ ನಿರೋಧಕ ಶಕ್ತಿಯನ್ನೂ ಬಲಪಡಿಸುತ್ತದೆ.

  • ಬೀಟ್‌ರೂಟ್: ರಕ್ತ ಶುದ್ಧೀಕರಣಕ್ಕೆ ಬೀಟ್‌ರೂಟ್ ಅತ್ಯುತ್ತಮವಾಗಿದೆ. ಇದರಲ್ಲಿರುವ ನೈಟ್ರೇಟ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಐರನ್ ಸಮೃದ್ಧವಾಗಿರುವುದರಿಂದ ರಕ್ತಹೀನತೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

  • ಕೋಸುಗಳು: ಎಲೆಕೋಸು, ಹೂಕೋಸು, ಬ್ರೊಕೊಲಿ ಮುಂತಾದ ಕೋಸುಗಳು ಚಳಿಗಾಲದಲ್ಲಿ ಹೆಚ್ಚು ಪೌಷ್ಟಿಕವಾದ ತರಕಾರಿಗಳಾಗಿವೆ. ಇವುಗಳಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಾಯಕವಾಗುತ್ತವೆ. ಜೀರ್ಣಕ್ರಿಯೆ ಸುಧಾರಿಸುವುದರೊಂದಿಗೆ ತೂಕ ನಿಯಂತ್ರಣಕ್ಕೂ ಉತ್ತಮವಾಗಿದೆ.

  • ಬಾಳೆ ದಿಂಡು ಮತ್ತು ಶುಂಠಿ: ಬಾಳೆ ದಿಂಡಿನಲ್ಲಿ ಫೈಬರ್ ಅಧಿಕವಾಗಿದ್ದು, ಮೂತ್ರಪಿಂಡಗಳ ಆರೋಗ್ಯಕ್ಕೆ ಉತ್ತಮವಾಗಿದೆ. ಶುಂಠಿ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ. ಇದು ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ಹೊಟ್ಟೆಯ ಉರಿಯೂತ ಕಡಿಮೆ ಮಾಡುವ ಗುಣವಿದೆ.

ಸೇವನೆಯ ವಿಧಾನಗಳು: 

ಈ ಹಣ್ಣು ತರಕಾರಿಗಳನ್ನು ತಾಜಾ ಮತ್ತು ಹಸಿಯಾಗಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ. ಇವುಗಳನ್ನು ಸಲಾಡ್, ಸೂಪ್, ಜ್ಯೂಸ್ ಮತ್ತು ಸಾಮಾನ್ಯ ಪಾಕ ವಿಧಾನಗಳಲ್ಲಿ ಸೇವಿಸುವುದು ಉತ್ತಮ. ಚಳಿಗಾಲದಲ್ಲಿ ಆರೋಗ್ಯವಾಗಿರಲು ಈ ಹಣ್ಣು, ತರಕಾರಿಗಳ ನಿಯಮಿತ ಸೇವನೆ ಅತ್ಯಗತ್ಯವಾಗಿದೆ.

(ಎಡ್ವಿನಾ ರಾಜ್, ಸೇವಾ ವಿಭಾಗದ ಮುಖ್ಯಸ್ಥೆ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟೆಟಿಕ್ಸ್, ಅಸ್ಟರ್ ಸಿಎಂಐ ಆಸ್ಪತ್ರೆ, ಬೆಂಗಳೂರು.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.