
ಚಿತ್ರ: ಗೆಟ್ಟಿ
ಚಳಿಗಾಲದಲ್ಲಿ ದೇಹದ ಆರೈಕೆ ಬಹಳ ಮುಖ್ಯ. ಈ ಅವಧಿಯಲ್ಲಿ ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಆಹಾರ ಸೇವನೆಯಲ್ಲಿ ಕಾಳಜಿ ವಹಿಸುವುದು ಅಗತ್ಯ. ಚಳಿಗಾಲದಲ್ಲಿ ಪಾನೀಯಗಳ ಸೇವನೆ ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರಿಯಾಗಿವೆ. ಯಾವೆಲ್ಲ ಪಾನೀಯಗಳು ಚಳಿಗಾಲದ ಆರೋಗ್ಯಕ್ಕೆ ಉತ್ತಮವಾಗಿವೆ ಎಂಬುದನ್ನು ತಿಳಿಯೋಣ.
ಚಳಿಗಾಲದಲ್ಲಿ ಸೇವಿಸಲೇಬೇಕಾದ ಪಾನೀಯ ಮತ್ತು ಅವುಗಳ ಪ್ರಯೋಜನ:
ಶುಂಠಿ ಚಹಾ: ಶುಂಠಿ ಚಹಾ ಚಳಿಗಾಲದ ಅತ್ಯುತ್ತಮ ಪಾನೀಯಗಳಲ್ಲಿ ಒಂದಾಗಿದೆ. ಶುಂಠಿಯಲ್ಲಿರುವ ಉಷ್ಣತೆಯ ಗುಣ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ. ಶುಂಠಿ ಚಹಾ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಪ್ರತಿದಿನ ಬೆಳಿಗ್ಗೆ ಒಂದು ಲೋಟ ಶುಂಠಿ ಚಹಾ ಸೇವಿಸುವುದರಿಂದ ದಿನವಿಡೀ ಚುರುಕುತನ ಮತ್ತು ಉತ್ಸಾಹವನ್ನು ಉಳಿಸಬಹುದು.
ಅರಿಸಿನದ ಹಾಲು : ಅರಿಸಿನದ ಹಾಲು ಅಥವಾ ಗೋಲ್ಡನ್ ಮಿಲ್ಕ್ ಚಳಿಗಾಲದ ಅದ್ಭುತ ಪಾನೀಯವಾಗಿದೆ. ಅರಿಸಿನದಲ್ಲಿರುವ ‘ಕರ್ಕ್ಯುಮಿನ್’ ಅಂಶ ಉರಿಯೂತವನ್ನು ನಿವಾರಣೆ ಮಾಡುವ ಮತ್ತು ಪ್ರತಿಜೀವಕ ಗುಣಗಳನ್ನು ಹೊಂದಿದೆ. ಈ ಪಾನೀಯ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಕಫ ಮತ್ತು ಶೀತದಿಂದ ರಕ್ಷಿಸುತ್ತದೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲಿನೊಂದಿಗೆ ಅರಿಸಿನ ಬೇರೆಸಿ ಕುಡಿಯುವುದು ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.
ತುಳಸಿ ಕಷಾಯ: ತುಳಸಿ ಕಷಾಯ ಆಯುರ್ವೇದದಲ್ಲಿ ಅತ್ಯಂತ ಮಹತ್ವದ ಔಷಧೀಯ ಪಾನೀಯವಾಗಿದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ಜೇನುತುಪ್ಪ ಮತ್ತು ನಿಂಬೆರಸವನ್ನು ಸೇರಿಸಿ ಸೇವಿಸಬಹುದು. ಇದು ಶ್ವಾಸಕೋಶದ ಸೋಂಕು ಮತ್ತು ದೇಹದಲ್ಲಿರು ವಿಷ ಅಂಶವನ್ನು ಹೊರಹಾಕುತ್ತದೆ. ತುಳಸಿಯ ಪ್ರತಿಜೀವಕ ಮತ್ತು ರೋಗನಿರೋಧಕ ಗುಣಗಳು ಚಳಿಗಾಲದ ಕಾಯಿಲೆಗಳಿಂದ ರಕ್ಷಿಸುತ್ತವೆ.
ಬಾದಾಮಿ ಹಾಲು: ಬಾದಾಮಿ ಹಾಲು ಪೌಷ್ಟಿಕಾಂಶದಿಂದ ತುಂಬಿದ ಪಾನೀಯವಾಗಿದೆ. ಬಾದಾಮಿಯಲ್ಲಿರುವ ವಿಟಮಿನ್ ಇ, ಒಮೆಗಾ-3 ಕೊಬ್ಬಿನಾಮ್ಲ ಮತ್ತು ಪ್ರೋಟೀನ್‌ಗಳು ದೇಹಕ್ಕೆ ಶಕ್ತಿ ನೀಡುತ್ತವೆ. ಈ ಪಾನೀಯವು ಮಿದುಳಿನ ಕಾರ್ಯಚಟುವಟಿಕೆ, ಚರ್ಮವನ್ನು ಆರೋಗ್ಯ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಚಳಿಗಾಲದಲ್ಲಿ ಚರ್ಮದ ಒಣಗುವಿಕೆಯನ್ನು ತಡೆಯಲು ಬಾದಾಮಿ ಹಾಲು ಅತ್ಯುತ್ತಮವಾಗಿದೆ.
ಹಸಿರು ಚಹಾ (ಗ್ರೀನ್ ಟೀ): ಹಸಿರು ಚಹಾ ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿ ಹಾಗೂ ತೂಕ ನಿರ್ವಹಣೆಗೆ ಸಹಕಾರಿಯಾಗಿದೆ. ಚಳಿಗಾಲದಲ್ಲಿ ದಿನಕ್ಕೆ 2ರಿಂದ 3 ಕಪ್ ಹಸಿರು ಚಹಾ ಸೇವಿಸುವುದರಿಂದ ದೇಹದಲ್ಲಿನ ಹಾನಿಕಾರಕ ಕಣಗಳನ್ನು ತೆಗೆದುಹಾಕಬಹುದು.
ಚಳಿಗಾಲದಲ್ಲಿ ಈ ಪಾನೀಯಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಚಳಿಗಾಲದ ಕಾಯಿಲೆಗಳಿಂದ ದೇಹಕ್ಕೆ ರಕ್ಷಣೆ ಸಿಗುತ್ತದೆ. ಪ್ರತಿಯೊಂದು ಪಾನೀಯವೂ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿದ್ದು, ನಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತವೆ.
ಲೇಖಕರು: ಡಾ. ಎಡ್ವಿನಾ ರಾಜ್, ವಿಭಾಗದ ಮುಖ್ಯಸ್ಥರು, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟೆಟಿಕ್ಸ್, ಆಸ್ಟರ್ CMI ಆಸ್ಪತ್ರೆ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.