
ಚಳಿಗಾಲದಲ್ಲಿ ದೇಹದ ಆರೈಕೆ ಬಹಳ ಮುಖ್ಯ. ಈ ಅವಧಿಯಲ್ಲಿ ದೇಹವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಉತ್ಪಾದಿಸುತ್ತದೆ. ಚಳಿಗಾದಲ್ಲಿ ವಿಟಮಿನ್ ಡಿ ಅನ್ನು ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀಡಬೇಕಾಗುತ್ತದೆ. ವಿಟಮಿನ್ ಡಿ ಕೊರತೆ ನಿರಂತರ ಆಯಾಸ, ದೌರ್ಬಲ್ಯ ಅಥವಾ ಅನಾರೋಗ್ಯಕ್ಕೆ ಕಾರಣವಾಗಬಹುದು.
ವಿಟಮಿನ್ ಡಿ ಯ ಪ್ರಾಮುಖ್ಯತೆ:
ವಿಟಮಿನ್ ಡಿ ಅನ್ನು ‘ಸೂರ್ಯನ ಬೆಳಕಿನಿಂದ ಪಡೆಯುವ ವಿಟಮಿನ್’ ಎಂದು ಕರೆಯಲಾಗುತ್ತದೆ. ದೇಹವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ದೇಹ ನೈಸರ್ಗಿಕವಾಗಿ ವಿಟಮಿನ್ ಡಿ ಅನ್ನು ಉತ್ಪಾದನೆ ಮಾಡುತ್ತದೆ. ಇದರ ಜೊತೆಗೆ ಸಾಕಷ್ಟು ವಿಟಮಿನ್ ಡಿ ದೇಹಕ್ಕೆ ಬೇಕಾಗುತ್ತದೆ.
ಚಳಿಗಾಲದಲ್ಲಿ ವಿಟಮಿನ್ ಡಿ ಕಡಿಮೆಯಾಗಲು ಕಾರಣಗಳು:
ಚಳಿಗಾಲದಲ್ಲಿ ಸೂರ್ಯನ ಬಿಸಿಲು ಹೆಚ್ಚಾಗಿ ಬೀಳುವುದಿಲ್ಲ. ಅಲ್ಲದೇ ಬಹುತೇಕರು ಚಳಿಗೆ ಬೆಳಗಿನ ಬಿಸಿಲಿಗೆ ಮೈಯನ್ನು ಒಡ್ಡಿಕೊಳ್ಳುವುದಿಲ್ಲ. ಇದು ವಿಟಮಿನ್ ಡಿ ಕೊರತೆಗೆ ಕಾರಣವಾಗುತ್ತದೆ. ಇದರಿಂದಾಗಿ ಕೀಲು ನೋವು, ಆಯಾಸ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಚಳಿಗಾಲದಲ್ಲಿ ವಿಟಮಿನ್ ಡಿಯನ್ನು ಹೆಚ್ಚಿಸುವ ಆಹಾರಗಳು:
ಕೊಬ್ಬಿನ ಮೀನು: ಸಾಲ್ಮನ್, ಸಾರ್ಡೀನ್ಸ್, ಟ್ಯೂನಾ ಮತ್ತು ಮ್ಯಾಕೆರೆಲ್‌ನಂತಹ ಮೀನುಗಳಲ್ಲಿ ವಿಟಮಿನ್ ಡಿ ಹೇರಳವಾಗಿದೆ. ವಾರಕ್ಕೆ ಎರಡು ಬಾರಿ ಮೀನಿನ ನಿಯಮಿತ ಸೇವನೆ ವಿಟಮಿನ್ ಡಿ ಪ್ರಮಾಣವನ್ನು ಹೆಚ್ಚಿಸುತ್ತದೆ.
ಮೊಟ್ಟೆಯ ಹಳದಿ ಭಾಗ: ಮೊಟ್ಟೆ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯೊಳಗಿರುವ ಹಳದಿ ಭಾಗ ಹೆಚ್ಚು ಪ್ರೋಟೀನ್ ಮತ್ತು ಕೊಬ್ಬಿನ ಆಮ್ಲಗಳ ಜೊತೆಗೆ ವಿಟಮಿನ್ ಡಿ ಕೂಡಾ ಅಧಿಕವಾಗಿರುತ್ತದೆ.
ಅಣಬೆಗಳು: ಅಣಬೆಗಳು ನೈಸರ್ಗಿಕವಾಗಿ ವಿಟಮಿನ್ ಡಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳ ಸೇವನೆಯಿಂದ ವಿಟಮಿನ್ ಡಿ ಪಡೆಯಬಹುದು.
ತುಪ್ಪ ಮತ್ತು ಬೆಣ್ಣೆ: ತುಪ್ಪ ಮತ್ತು ಬೆಣ್ಣೆ ವಿಟಮಿನ್ ಡಿ ಯ ಸಣ್ಣ ಪ್ರಮಾಣವನ್ನು ಹೊಂದಿರುತ್ತವೆ. ಇದು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳ ಹೀರಿಕೊಳ್ಳುವಿಕೆಯಲ್ಲಿ ಸಹಾಯ ಮಾಡುತ್ತದೆ.
ಕಾಡ್ ಲಿವರ್ ಆಯಿಲ್: ಇದು ಅತ್ಯಂತ ಸಮೃದ್ಧವಾದ ನೈಸರ್ಗಿಕ ವಿಟಮಿನ್ ಡಿ ಮೂಲಗಳಲ್ಲಿ ಒಂದು. ಪ್ರತಿದಿನ ಒಂದು ಸಣ್ಣ ಚಮಚ ಬಳಕೆ ಮಾಡಬೇಕು. ಇದು ವಿಶೇಷವಾಗಿ ಚಿಕ್ಕ ಮಕ್ಕಳು ಮತ್ತು ವಯಸ್ಸಾದವರಿಗೆ ಪ್ರಯೋಜನಕಾರಿಯಾಗಿದೆ.
ಚಳಿಗಾಲದಲ್ಲಿ ವಿಟಮಿನ್ D ಮಟ್ಟವನ್ನು ನಿರ್ವಹಿಸಲು ಸರಳ ಸಲಹೆಗಳು:
ಬೆಳಿಗ್ಗೆ ಸೂರ್ಯನ ಬೆಳಕಿನಲ್ಲಿ ಕನಿಷ್ಠ 20 ರಿಂದ 30 ನಿಮಿಷ ಕಳೆಯಿರಿ.
ಆಹಾರದಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸಿ.
ಪೌಷ್ಟಿಕ ಆಹಾರ ಸೇವನೆ, ಉತ್ತಮ ಜೀವನ ಶೈಲಿಯನ್ನು ಅನುಸರಿಸುವುದರಿಂದ ವಿಟಮಿನ್ ಡಿ ಅನ್ನು ಹೆಚ್ಚಿಸಬಹುದು.
( ಡಾ. ಅನಿಂದಿತಾ ಪಾಲ್, ಸಲಹೆಗಾರ್ತಿ, ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ, ರೇನ್ಬೋ ಮಕ್ಕಳ ಆಸ್ಪತ್ರೆ, ಬನ್ನೇರುಘಟ್ಟ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.