ADVERTISEMENT

Fact Check: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಮೆರಿಕ ಯುದ್ದವಿಮಾನ B–1B ಇರಲಿಲ್ಲ

ಫ್ಯಾಕ್ಟ್ ಚೆಕ್
Published 2 ಮಾರ್ಚ್ 2026, 19:30 IST
Last Updated 2 ಮಾರ್ಚ್ 2026, 19:30 IST
.
.   

ಅಮೆರಿಕ–ಇಸ್ರೇಲ್‌ ಸೇನಾ ಪಡೆಗಳು ಮತ್ತು ಇರಾನ್‌ ಸೇನೆಯ ನಡುವಿನ ಸಂಘರ್ಷ ತೀವ್ರವಾಗುತ್ತಿರುವ ನಡುವೆಯೇ, ಥ್ರೆಡ್ಸ್‌ ಸಾಮಾಜಿಕ ಜಾಲತಾಣದಲ್ಲಿ @ಅಬ್ಬಾಸ್‌ಕಾಶ್ಮೀರಿ99 ಎಂಬ ಖಾತೆದಾರ ವಿಮಾನ ನಿಲ್ದಾಣವೊಂದರಲ್ಲಿ ಅಮೆರಿಕದ ಯುದ್ಧವಿಮಾನವೊಂದು ನಿಂತಿರುವ ವಿಡಿಯೊವೊಂದನ್ನು ಪೋಸ್ಟ್‌ ಮಾಡಿದ್ದು, ‘ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿ2ಬಿ ಬಾಂಬರ್‌ (ಯುದ್ಧವಿಮಾನ) ಏನು ಮಾಡುತ್ತಿದೆ? ಪ್ರದರ್ಶನಕ್ಕಾಗಿ ಇರಿಸಲಾಗಿದೆಯೇ ಅಥವಾ ಯುದ್ಧಕ್ಕಾಗಿ ಅಮೆರಿಕವು ಅದನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆಯೇ? ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ’ ಎಂದು ಅದರಲ್ಲಿ ಹೇಳಲಾಗಿದೆ.

‘ಪೋಸ್ಟ್‌ನಲ್ಲಿರುವ ವಿಡಿಯೊದಲ್ಲಿ ಬೆಂಗಳೂರಿನ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಅಮೆರಿಕದ ಬಿ–1ಬಿ ಲ್ಯಾನ್ಸರ್‌ ಬಾಂಬರ್ ಇರುವುದನ್ನು ಗಮನಿಸಿದ್ದಾರೆ’ ಎಂಬ ಒಕ್ಕಣೆ ಇದೆ. ಎರಡು ವಿಡಿಯೊ ತುಣುಕುಗಳ್ನು ಜೋಡಿಸಿ ಈ ವಿಡಿಯೊ ಮಾಡಲಾಗಿದೆ. ಅವೆರಡೂ ಈಗಿನದ್ದಲ್ಲ.

ವಿಡಿಯೊದ ಸ್ಕ್ರೀನ್‌ಶಾಟ್ ಚಿತ್ರವನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ, ಹಲವರು ಇದೇ ವಿಡಿಯೊ ಹಂಚಿಕೊಂಡಿರುವುದು ಕಂಡು ಬಂತು. ಇನ್ನಷ್ಟು ಪರಿಶೀಲನೆ ನಡೆಸಿದಾಗ 2025ರ ನವೆಂಬರ್‌ 12, 13ರಂದು ಹಲವು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಇದೇ ವಿಡಿಯೊದ ಅರ್ಧ ಭಾಗವನ್ನು ಅಪ್‌ಲೋಡ್‌ ಮಾಡಿರುವುದು ಸಿಕ್ಕಿತು. ಅಮೆರಿಕದ ವಾಯು ಪಡೆಯ ಬಿ1–ಬಿ ಲ್ಯಾನ್ಸರ್‌ ಯುದ್ಧವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಿಮಾನಗಳೊಂದಿಗೆ ನಿಲ್ಲಿಸಿರುವ ವಿಡಿಯೊವನ್ನು ಪ್ರಯಾಣಿಕರು ಸೆರೆ ಹಿಡಿದು ಹಂಚಿಕೊಂಡಿದ್ದರು.

ADVERTISEMENT

ಈ ಬಗ್ಗೆ ಹಲವು ಮಾಧ್ಯಮಗಳು ಕೂಡ ವರದಿ ಮಾಡಿದ್ದವು. ಭಾರತದ ಮತ್ತು ಅಮೆರಿಕದ ವಾಯುಪಡೆಗಳು 2025ರ ನವೆಂಬರ್‌ 10ರಿಂದ 13ರವರೆಗೆ ನಾಲ್ಕು ದಿನ ದಕ್ಷಿಣ ಭಾರತದಲ್ಲಿ ಜಂಟಿ ಸಮರಾಭ್ಯಾಸ ನಡೆಸಿದ್ದವು. ಬಿ1–ಬಿ ಲ್ಯಾನ್ಸರ್‌ ಯುದ್ಧವಿಮಾನ ಈ ಅಭ್ಯಾಸದಲ್ಲಿ ಪಾಲ್ಗೊಂಡಿತ್ತು. ಮಾಧ್ಯಮಗಳ ವರದಿ ಪ್ರಕಾರ, ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಬಂದಿದ್ದ ಯುದ್ಧವಿಮಾನವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು.

ಈ ಸಮರಾಭ್ಯಾಸದ ಕುರಿತಾಗಿ ಭಾರತೀಯ ವಾಯುಪಡೆ ನವೆಂಬರ್‌ 13ರಂದು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ನಲ್ಲಿ ಬಿ1–ಬಿ ಲ್ಯಾನ್ಸರ್‌ ಬಾಂಬರ್‌ ಅಭ್ಯಾಸದಲ್ಲಿ ಭಾಗವಹಿಸಿರುವುದನ್ನೂ ಪ್ರಸ್ತಾಪಿಸಿತ್ತು. ಈಗ ಹಂಚಿಕೊಳ್ಳಲಾಗುತ್ತಿರುವ ವಿಡಿಯೊದಲ್ಲಿ 13 ಸೆಕೆಂಡುಗಳ ನಂತರ ವಿಮಾನದ ಇನ್ನೊಂದು ದೃಶ್ಯ ಇದ್ದು, ಅದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ್ದಲ್ಲ. 2025ರ ಫೆಬ್ರುವರಿಯಲ್ಲಿ ಯಲಹಂಕದ ವಾಯುನೆಲೆಯಲ್ಲಿ ನಡೆದಿದ್ದ ಏರೋ ಇಂಡಿಯಾದಲ್ಲಿ ಬಿ1–ಬಿ–ಲ್ಯಾನ್ಸರ್‌ ಭಾಗವಹಿಸಿದ್ದಾಗಿನ ವಿಡಿಯೊ ತುಣುಕು ಅದು.

ಚೆನ್ನೈನ ಅಮೆರಿಕದ ಕಾನ್ಸುಲೆಟ್‌ ಜನರಲ್‌ ಕಚೇರಿಯ ಫೇಸ್‌ಬುಕ್‌ ಪುಟದಲ್ಲಿ ಆ ವಿಡಿಯೊವನ್ನು 2025ರ ಫೆ.13ರಂದೇ ಪೋಸ್ಟ್‌ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಯುದ್ಧವಿಮಾನವನ್ನು ನಿಲ್ಲಿಸಿದ್ದ ಹಳೆಯ ವಿಡಿಯೊಗೆ, ಮತ್ತೊಂದು ಹಳೆಯ ವಿಡಿಯೊವನ್ನು ಜೋಡಿಸಿ, ಅಮೆರಿಕದ ಯುದ್ಧವಿಮಾನವನ್ನು ಈಗ ಬೆಂಗಳೂರು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂಬರ್ಥದ ಪೋಸ್ಟ್‌ ಮಾಡಲಾಗುತ್ತಿದೆ ಎಂಬುದು ‘ಪ್ರಜಾವಾಣಿ’ ಫ್ಯಾಕ್ಟ್‌ಚೆಕ್‌ ಮಾಡಿದಾಗ ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.