ಅಜಯ್ ಮಾಕೆನ್
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ಬಿರುಸಿನಿಂದ ಸಾಗುತ್ತಿರುವಂತೆಯೇ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ಕಾಂಗ್ರೆಸ್ ಗಂಭೀರವಾದ ಆರೋಪ ಮಾಡಿದೆ.
ದೆಹಲಿಯ ಆರೋಗ್ಯ ಕ್ಷೇತ್ರದಲ್ಲಿ ಎಎಪಿ ಸರ್ಕಾರವು ₹382 ಕೋಟಿ ಹಗರಣ ಮಾಡಿದೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಕೆನ್, 'ಹಿಂದಿನ ಕಾಂಗ್ರೆಸ್ ಸರ್ಕಾರದ ಮೇಲೆ ಸಿಎಜಿ ವರದಿಗಳ ಆಧಾರದಲ್ಲಿ ಆರೋಪ ಮಾಡಲಾಗುತ್ತಿತ್ತು. ಈಗ 14 ಸಿಎಜಿ ವರದಿಗಳು ಎಎಪಿ ಸರ್ಕಾರದ ವಿರುದ್ಧ ಗಂಭೀರವಾದ ಭ್ರಷ್ಟಾಚಾರ ಆರೋಪಗಳನ್ನು ತೋರಿಸುತ್ತಿವೆ' ಎಂದು ಹೇಳಿದ್ದಾರೆ.
ಸಿಎಜಿ ವರದಿಯನ್ನೇ ಉಲ್ಲೇಖ ಮಾಡಿರುವ ಮಾಕೆನ್, 'ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸರ್ಕಾರವು ₹382 ಕೋಟಿ ಹಗರಣ ಮಾಡಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.
'ನಿಗದಿತ ಅವಧಿಗೂ ಮುಂಚಿತವಾಗಿ ಕೆಲಸವನ್ನು ಪೂರ್ಣಗೊಳಿಸುತ್ತೇವೆ ಎಂದು ಎಎಪಿ ಭರವಸೆ ನೀಡಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಮೂರು ಹೊಸ ಆಸ್ಪತ್ರೆಗಳನ್ನು ಮಾತ್ರ ನಿರ್ಮಿಸಲಾಗಿದೆ ಎಂದು ಸಿಎಜಿ ವರದಿ ಹೇಳುತ್ತದೆ' ಎಂದು ಅವರು ಹೇಳಿದ್ದಾರೆ.
'ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಎಲ್ಲ ಮೂರು ಆಸ್ಪತ್ರೆಗಳು ಆರಂಭವಾಗಿದ್ದವು. ಇಂದಿರಾಗಾಂಧಿ ಆಸ್ಪತ್ರೆಯು ಐದು ವರ್ಷ, ಬುರಾರಿ ಆಸ್ಪತ್ರೆ ಆರು ವರ್ಷ ಮತ್ತು ಮೌಲಾನಾ ಆಜಾದ್ ದಂತ ಆಸ್ಪತ್ರೆ ಮೂರು ವರ್ಷಗಳಷ್ಟು ವಿಳಂಬಗೊಂಡಿತು' ಎಂದು ಅವರು ಹೇಳಿದ್ದಾರೆ.
'ಇದಲ್ಲದೆ ಮೂರು ಆಸ್ಪತ್ರೆಗಳಲ್ಲಿ ಟೆಂಡರ್ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ವ್ಯಯ ಮಾಡಲಾಗಿದೆ. ಇಂದಿರಾಗಾಂಧಿ ಆಸ್ಪತ್ರೆಗೆ ₹314 ಕೋಟಿ, ಬುರಾರಿ ಆಸ್ಪತ್ರೆಗೆ ₹41 ಕೋಟಿ ಮತ್ತು ಮೌಲಾನಾ ಆಜಾದ್ ದಂತ ಆಸ್ಪತ್ರೆಗೆ ₹26 ಕೋಟಿ ಹೆಚ್ಚು ಮೊತ್ತ ವ್ಯಯ ಮಾಡಲಾಗಿದೆ. ಇದನ್ನು ನಾನು ಹೇಳುತ್ತಿಲ್ಲ. ಸಿಎಜಿ ವರದಿಯೇ ಹೇಳುತ್ತದೆ' ಎಂದು ಅವರು ಉಲ್ಲೇಖಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.