ನವದೆಹಲಿ: ಸಂಸತ್‌ನಲ್ಲಿ ಅಂಗೀಕಾರವಾಗಿರುವ, ವಕ್ಫ್ (ತಿದ್ದುಪಡಿ) ಮಸೂದೆ–2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತ್ ಉಲ್ಲಾ ಖಾನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
‘ವಕ್ಫ್ ತಿದ್ದುಪಡಿ ಮಸೂದೆಯು ಅಸಾಂವಿಧಾನಿಕ ಹಾಗೂ ಈ ಮಸೂದೆಯು ಸಂವಿಧಾನದ 14, 15, 21, 25, 26, 29, 30 ಹಾಗೂ 300–ಎ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಘೋಷಿಸಬೇಕು’ ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಹಾಗೂ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದರು.
ಈಚೆಗೆ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿತ್ತು.
ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮುಸ್ಲಿಮರ ಹಕ್ಕುಗಳನ್ನು ಈ ಮಸೂದೆಯು ಕಿತ್ತುಕೊಳ್ಳುತ್ತದೆ ಎಂಬ ಆರೋಪಗಳನ್ನು ಅಲ್ಲಗಳೆದಿದ್ದರು.
‘ಈ ಮಸೂದೆಯು ಮುಸ್ಲಿಂ ಮಹಿಳೆಯರಿಗೆ ಬಲ ತುಂಬುವ, ಮುಸ್ಲಿಮರಲ್ಲಿ ಎಲ್ಲರ ಹಕ್ಕುಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ’ ಎಂದರು. ಮಸೂದೆಯನ್ನು ವಿರೋಧಿಸಿ ವಿರೋಧ ಪಕ್ಷಗಳ ಕೆಲವು ಸದಸ್ಯರು ಸದನದಲ್ಲಿ ಗುರುವಾರ ಕಪ್ಪು ವಸ್ತ್ರ ಧರಿಸಿದ್ದರು. ಈ ಮಸೂದೆಗೂ ಧರ್ಮಕ್ಕೂ ಸಂಬಂಧ ಇಲ್ಲ. ಇದು ಆಸ್ತಿಗೆ ಮಾತ್ರ ಸಂಬಂಧಿಸಿದೆ ಎಂದು ರಿಜಿಜು ವಿವರಣೆ ನೀಡಿದ್ದರು.
ಲೋಕಸಭೆಯಲ್ಲಿ ವ್ಯಕ್ತವಾದಂತೆಯೇ, ರಾಜ್ಯಸಭೆಯಲ್ಲಿಯೂ ಈ ಮಸೂದೆಗೆ ವಿರೋಧ ಪಕ್ಷಗಳ ಸದಸ್ಯರಿಂದ ವಿರೋಧ ವ್ಯಕ್ತವಾಯಿತು. ಮಸೂದೆಯು ಮುಸ್ಲಿಮರನ್ನು ಹತ್ತಿಕ್ಕಲು ಯತ್ನಿಸುತ್ತದೆ, ಇದು ದೇಶದಲ್ಲಿ ತಾರತಮ್ಯದ ಬೀಜವನ್ನು ಬಿತ್ತುತ್ತದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.