
ಎಎಪಿ ಶಾಸಕರು ಮಾಸ್ಕ್ ಧರಿಸಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು
–ಪಿಟಿಐ ಚಿತ್ರ
ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರವು ನಾಲ್ವರು ಎಎಪಿ ಶಾಸಕರನ್ನು ಅಮಾನತುಗೊಳಿಸಿದೆ.
ವಿಧಾನಸಭೆಯ ಚಳಿಗಾಲದ ಅಧಿವೇಶನದ ಉಳಿದ ಮೂರು ದಿನಗಳವರೆಗೆ ಎಎಪಿ ಶಾಸಕರಾದ ಸಂಜೀವ್ ಝಾ, ಸೋಮ್ ದತ್, ಕುಲದೀಪ್ ಕುಮಾರ್ ಮತ್ತು ಜರ್ನೈಲ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.
ಅಧಿವೇಶನವನ್ನು ಉದ್ದೇಶಿಸಿ ಸಕ್ಸೇನಾ ಅವರು ಭಾಷಣ ಮಾಡುತ್ತಿದ್ದ ವೇಳೆ ಎಎಪಿ ಶಾಸಕರು ದೆಹಲಿಯ ವಾಯುಮಾಲಿನ್ಯದ ಬಗ್ಗೆ ಪ್ರಸ್ತಾಪಿಸಿ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಸಭಾಧ್ಯಕ್ಷ ವಿಜೇಂದರ್ ಗುಪ್ತಾ ಅವರು ವಿಪಕ್ಷ ನಾಯಕರನ್ನು ಸದನದಿಂದ ಹೊರಗೆ ಕರೆದೊಯ್ಯಲು ಮಾರ್ಷಲ್‌ಗಳಿಗೆ ಆದೇಶಿಸಿದ್ದರು.
ಸಕ್ಸೇನಾ ಭಾಷಣಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಸಂಜೀವ್ ಝಾ, ಕುಲದೀಪ್ ಕುಮಾರ್, ಸೋಮ್ ದತ್ ಮತ್ತು ಜರ್ನೈಲ್ ಸಿಂಗ್ ಅವರನ್ನು ಅಧಿವೇಶನದ ಉಳಿದ ಮೂರು ದಿನಗಳವರೆಗೆ ಅಮಾನತುಗೊಳಿಸಬೇಕು ಎಂದು ಲೋಕೋಪಯೋಗಿ ಸಚಿವ ಪರ್ವೇಶ್ ಸಾಹಿಬ್ ಸಿಂಗ್ ನಿರ್ಣಯ ಮಂಡಿಸಿದರು. ಸದನವು ಈ ನಿರ್ಣಯವನ್ನು ಅಂಗೀಕರಿಸಿತು.
ಸೂಕ್ತ ಕಾರಣವಿಲ್ಲದೆ ಸದನದಲ್ಲಿ ಗದ್ದಲ ಉಂಟು ಮಾಡುವ ಮೂಲಕ ಎಎಪಿ ಶಾಸಕರು ಸದನ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಸ್ಪೀಕರ್ ಗುಪ್ತಾ ಹೇಳಿದ್ದಾರೆ.
'ಸದನದಲ್ಲಿ ವಾಯುಮಾಲಿನ್ಯದ ಬಗ್ಗೆ ಪ್ರಸ್ತಾಪಿಸಿದ್ದಕ್ಕಾಗಿ ನಮ್ಮನ್ನು ಅಮಾನತುಗೊಳಿಸಲಾಗಿದೆ’ ಎಂದು ಸರ್ಕಾರದ ಕ್ರಮವನ್ನು ಸಂಜೀವ್ ಝಾ ಖಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.