ADVERTISEMENT

ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರ: ದೆಹಲಿ ಹೈಕೋರ್ಟ್ ಮೊರೆಹೋದ ಆರಾಧ್ಯ ಬಚ್ಚನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2025, 12:37 IST
Last Updated 3 ಫೆಬ್ರುವರಿ 2025, 12:37 IST
<div class="paragraphs"><p>ಆರಾಧ್ಯ ಬಚ್ಚನ್‌ ಮತ್ತು ಐಶ್ವರ್ಯಾ ರೈ ಬಚ್ಚನ್</p></div>

ಆರಾಧ್ಯ ಬಚ್ಚನ್‌ ಮತ್ತು ಐಶ್ವರ್ಯಾ ರೈ ಬಚ್ಚನ್

   

–ಪಿಟಿಐ ಚಿತ್ರ

ನವದೆಹಲಿ: ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕುಟುಂಬದ ಕುಡಿ ಆರಾಧ್ಯ ಬಚ್ಚನ್‌ ಅವರು ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಇಂದು (ಸೋಮವಾರ) ಮತ್ತೊಮ್ಮೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ನನ್ನ ಆರೋಗ್ಯ ಕುರಿತು ಹಲವು ವೆಬ್‌ಸೈಟ್‌ಗಳಲ್ಲಿ ಆಧಾರರಹಿತ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ವದಂತಿಗಳನ್ನು ಹಬ್ಬಿಸಲಾಗಿದೆ. ಇವು ನಕಲಿ ಮತ್ತು ಜನರನ್ನು ತಪ್ಪುದಾರಿಗೆಳೆಯುವಂತಹ ಮಾಹಿತಿಯಾಗಿದೆ. ಈಗಾಗಲೇ ಪ್ರಕಟವಾಗಿರುವ ಸುದ್ದಿಗಳನ್ನು ಕೂಡಲೇ ತೆಗೆದುಹಾಕುವಂತೆ ನಿರ್ದೇಶನ ನೀಡಬೇಕು’ ಎಂದು ಆರಾಧ್ಯ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

13 ವರ್ಷದ ಆರಾಧ್ಯ ಬಚ್ಚನ್‌ ಅವರ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಗೂಗಲ್‌ಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.

2023ರ ಏಪ್ರಿಲ್‌ 20ರಂದು ಆರಾಧ್ಯ ಬಚ್ಚನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌, ಆರಾಧ್ಯ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ಯೂಟ್ಯೂಬ್‌ ಚಾನೆಲ್‌ಗಳಿಗೆ ನಿರ್ಬಂಧ ಹೇರಿತ್ತು. ‘ಇದು ಸಮಾಜದಲ್ಲಿ ಬೇರೂರುತ್ತಿರುವ ರೋಗಗ್ರಸ್ತ ಮತ್ತು ವಿಕೃತ ಮನಸ್ಥಿತಿಗೆ ಹಿಡಿದ ಕೈಗನ್ನಡಿ’ ಎಂದು ವ್ಯಾಖ್ಯಾನಿಸಿತ್ತು.

ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಮತ್ತು ಅಭಿಷೇ‌ಕ್‌ ಬಚ್ಚನ್‌ ದಂಪತಿಯ ಪುತ್ರಿ ಆರಾಧ್ಯಳ ಆರೋಗ್ಯ ಕುರಿತು ಆಧಾರರಹಿತ ವದಂತಿ ಹಬ್ಬಿಸುತ್ತಿರುವ ಆಕ್ಷೇಪಾರ್ಹ ವಿಡಿಯೊಗಳನ್ನು ತಕ್ಷಣವೇ ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ಗೂಗಲ್‌ಗೆ ತಾಕೀತು ಮಾಡಿತ್ತು.

ವೀಕ್ಷಕರಿಂದ ಹೆಚ್ಚಿನ ವ್ಯೂಸ್‌ ಪಡೆಯಲು ಪೈಪೋಟಿಗೆ ಬಿದ್ದಿರುವ ಕೆಲವು ಯೂಟ್ಯೂಬ್‌ ಚಾನೆಲ್‌ಗಳು ಆರಾಧ್ಯಳ ಆರೋಗ್ಯ ತೀವ್ರ ಹದಗೆಟ್ಟಿದೆ. ಆಕೆ ಮೃತಪಟ್ಟಿದ್ದಾಳೆ ಎಂದು ಸುದ್ದಿ ಪ್ರಸಾರ ಮಾಡಿದ್ದವು. ಇದರಿಂದ ಬಚ್ಚನ್‌ ಕುಟುಂಬ ಕಸಿವಿಸಿಗೊಂಡಿತ್ತು. ಇಂಥ ಚಾನೆಲ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಿ ಆರಾಧ್ಯ ಹಾಗೂ ಅಭಿಷೇಕ್ ಬಚ್ಚನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.