ADVERTISEMENT

ಪೌರತ್ವ ತಿದ್ದುಪಡಿ ಮಸೂದೆ ಸುಪ್ರೀಂ ಕೋರ್ಟ್ ಅಂಗಳಕ್ಕೆ

ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅಸ್ಸಾಂ ವಿದ್ಯಾರ್ಥಿ ಒಕ್ಕೂಟ ನಿರ್ಧಾರ

ಏಜೆನ್ಸೀಸ್
Published 11 ಡಿಸೆಂಬರ್ 2019, 2:56 IST
Last Updated 11 ಡಿಸೆಂಬರ್ 2019, 2:56 IST
ಮಸೂದೆ ವಿರೋಧಿಸಿ ಅಸ್ಸಾಂನಾದ್ಯಂತ ಮಂಗಳವಾರ ನಡೆದಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಟೈರ್ ಸುಟ್ಟು ರಸ್ತೆ ತಡೆ ನಡೆಸಿದ್ದರು
ಮಸೂದೆ ವಿರೋಧಿಸಿ ಅಸ್ಸಾಂನಾದ್ಯಂತ ಮಂಗಳವಾರ ನಡೆದಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಟೈರ್ ಸುಟ್ಟು ರಸ್ತೆ ತಡೆ ನಡೆಸಿದ್ದರು   

ಗುವಾಹಟಿ:ಪೌರತ್ವ (ತಿದ್ದುಪಡಿ) ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ‘ಅಸ್ಸಾಂ ವಿದ್ಯಾರ್ಥಿ ಒಕ್ಕೂಟ (ಎಎಎಸ್‌ಯು)’ ತಿಳಿಸಿದೆ. ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ.

‘ಈಶಾನ್ಯ ರಾಜ್ಯದ ಜನರ ಮೇಲೆ ವಿವಾದಿತ ಶಾಸನವನ್ನು ಹೇರುವುದನ್ನು ಒಪ್ಪುವುದಿಲ್ಲ’ ಎಂದುಎಎಎಸ್‌ಯು ಮುಖ್ಯ ಸಲಹೆಗಾರ ಸಮುಜ್ಜಲ್ ಭಟ್ಟಾಚಾರ್ಯ ಹೇಳಿದ್ದಾರೆ.

‘ಮಸೂದೆ ವಿರುದ್ಧ ನಾವು ಕಾನೂನು ಹೋರಾಟ ನಡೆಸಲಿದ್ದೇವೆ. ಈ ವಿಚಾರವಾಗಿ ಈಗಾಗಲೇ ನಮ್ಮ ವಕೀಲರ ಬಳಿ ಚರ್ಚಿಸಿದ್ದೇವೆ. ಅವರ ಸಲಹೆಯಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪೌರತ್ವ ತಿದ್ದುಪಡಿ ಮಸೂದೆ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಈಶಾನ್ಯ ರಾಜ್ಯಗಳನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದೆ. ಮಸೂದೆಯು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಿದೆ. ಹೀಗಾಗಿ ಅದನ್ನು ನಾವು ಪ್ರತಿಭಟಿಸಬೇಕಾಗಿದೆ.ಮಸೂದೆ ವಿರುದ್ಧದ ಪ್ರಜಾಸತ್ತಾತ್ಮಕವಾದ ನಮ್ಮ ಹೋರಾಟ ಮುಂದುವರಿಯಲಿದೆ ಎಂದೂ ಭಟ್ಟಾಚಾರ್ಯ ಹೇಳಿದ್ದಾರೆ.

ಮಸೂದೆ ವಿರೋಧಿಸಿ ನಾರ್ಥ್‌ ಈಸ್ಟ್‌ ಸ್ಟೂಡೆಂಟ್ಸ್‌ ಯೂನಿಯನ್‌ (ಎನ್‌ಇಎಸ್‌ಒ) ಕರೆ ನೀಡಿದ್ದ 11 ಗಂಟೆಗಳ ಬಂದ್‌ಗೆ ಮಂಗಳವಾರ ಈಶಾನ್ಯ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ತ್ರಿಪುರದಲ್ಲಿ ಮೊಬೈಲ್ ಡೇಟಾ, ಎಸ್‌ಎಂಎಸ್ ಸೇವೆ ಸ್ಥಗಿತ

ಪೌರತ್ವ (ತಿದ್ದುಪಡಿ) ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಕಾರಣ ತ್ರಿಪುರದಲ್ಲಿ ಮೊಬೈಲ್ ಡೇಟಾ ಮತ್ತು ಎಸ್‌ಎಂಎಸ್ ಸೇವೆ ಸ್ಥಗಿತಗೊಳಿಸಲಾಗಿದೆ.ಮಂಗಳವಾರದ ಬಂದ್ ವೇಳೆ ರಾಜ್ಯದ ಕೆಲವೆಡೆ ಹಿಂಸಾಚಾರ ನಡೆದಿತ್ತು ಎನ್ನಲಾಗಿದೆ.

‘ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬುವ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಕೃತ್ಯಗಳು ಪೊಲೀಸರ ಗಮನಕ್ಕೆ ಬಂದಿದೆ. ಬಳಿಕ ಡೇಟಾ ಮತ್ತು ಎಸ್‌ಎಂಎಸ್ ಸೇವೆ ಸ್ಥಗಿತಗೊಳಿಸಲಾಗಿದೆ’ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.