ದುರಂತ ಸ್ಥಳದಲ್ಲಿ ಕಾರ್ಯಾಚರಣೆ
– ರಾಯಿಟರ್ಸ್ ಚಿತ್ರ
ಅಹಮಾದಾಬಾದ್: ಮೇಘನಿನಗರದಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿದ ಮೂರು ನಿಮಿಷದಲ್ಲಿ, ಎರಡು ಅಗ್ನಿ ಸೇವಾ ತಂಡಗಳು ಸ್ಥಳಕ್ಕೆ ದೌಡಾಯಿಸಿ 30ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದೆ ಎಂದು ಗುಜರಾತ್ ಸರ್ಕಾರ ಶುಕ್ರವಾರ ಹೇಳಿದೆ. ಅವಶೇಷಗಳಡಿಯಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಸಿಲುಕಿಕೊಂಡಿದ್ದರು.
ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 242 ಮಂದಿಯನ್ನು ಹೊತ್ತ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಸೆಕೆಂಡುಗಳಲ್ಲಿ ಬಿ.ಜೆ. ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು.
139 ವಿಧಧ ಅಗ್ನಿ ಹೋರಾಟ ಉಪಕರಣಗಳೊಂದಿಗೆ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿವೆ. ವಿಮಾನದ ಅವಶೇಷಗಳಡಿ ಸಿಲುಕಿಕೊಂಡವರ ರಕ್ಷಣೆಗೆ, ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲು 612 ಮಂದಿ ಅಗ್ನಿ ಶಾಮಕ ಸಿಬ್ಬಂದಿ ಆಹೋರಾತ್ರಿ ಕೆಲಸ ಮಾಡಿದ್ದಾರೆ.
‘ಕರಟಿ ಹೋಗಿದ್ದ ಶವಗಳನ್ನು ಹಾಗೂ ದೇಹದ ಭಾಗಗಳನ್ನು ಹೊರತೆಗೆಯಲು ಪೊಲೀಸರು ವಿಶೇಷ ಶ್ವಾನ ದಳವನ್ನೂ ಸ್ಥಳದಲ್ಲಿ ನಿಯೋಜಿಸಿದ್ದರು’ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಗಾಯಾಳುಗಳಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡಲು ಗ್ರೀನ್ ಕಾರ್ನರ್ ರಚಿಸಲಾಗಿತ್ತು. ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಆ್ಯಂಬುಲೆನ್ಸ್‌ಗಳು ಭಾಗಿಯಾಗಿದ್ದವು ಎಂದು ಅದು ಮಾಹಿತಿ ನೀಡಿದೆ.
16 ಮಂದಿ ಉಪ ಜಿಲ್ಲಾಧಿಕಾರಿಗಳು ಹಾಗೂ 16 ಮಮಲತದಾರರನ್ನು ಒಳಗೊಂಡು ಪ್ರತ್ಯೇಕ ತಂಡವನ್ನು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಇರಿಸಲಾಗಿತ್ತು.
ದುರಂತ ಸ್ಥಳದಲ್ಲಿ 250ಕ್ಕೂ ಅಧಿಕ ಸೇನಾ ಸಿಬ್ಬಂದಿ, ರ್‍ಯಾಪಿಡ್ ಆಕ್ಷನ್ ಫೋರ್ಸ್‌ನ ಒಂದು ತಂಡ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡ, ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಸಮನ್ವಯದೊಂದಿಗೆ ಅಪಘಾತ ಸ್ಥಳದಲ್ಲಿ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು, ರಾಜ್ಯ ಸರ್ಕಾರವು ಮಹಾನಗರ ಪಾಲಿಕೆ ಮತ್ತು ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯ ಸುಮಾರು 150 ಸಿಬ್ಬಂದಿಯನ್ನು ನಿಯೋಜಿಸಿತ್ತು. ಜೊತೆಗೆ 41 ಡಂಪರ್/ ಟ್ರ್ಯಾಕ್ಟರ್‌ಗಳು, 16 ಜೆಸಿಬಿಗಳು ಹಾಗೂ 3 ಅಗೆಯುವು ಯಂತ್ರಗಳನ್ನು ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.