ADVERTISEMENT

ಅಹಮದಾಬಾದ್‌ ವಿಮಾನ ದುರಂತ | AAIB ತನಿಖಾ ವರದಿಯಲ್ಲಿ ಪಕ್ಷಪಾತ: ಪೈಲಟ್ ಸಂಘದ ಟೀಕೆ

ಪಿಟಿಐ
Published 12 ಜುಲೈ 2025, 11:14 IST
Last Updated 12 ಜುಲೈ 2025, 11:14 IST
<div class="paragraphs"><p>ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿರುವ ಏರ್‌ ಇಂಡಿಯಾ ವಿಮಾನ</p></div>

ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿರುವ ಏರ್‌ ಇಂಡಿಯಾ ವಿಮಾನ

   

ಪಿಟಿಐ ಚಿತ್ರ

ನವದೆಹಲಿ: ಅಹಮದಾಬಾದ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಏರ್‌ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ 'ವಿಮಾನಗಳ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ನಡೆಸಿರುವ ತನಿಖಾ ವರದಿಯನ್ನು ಭಾರತೀಯ ವಿಮಾನಯಾನ ಪೈಲಟ್‌ಗಳ ಸಂಘ ಟೀಕಿಸಿದೆ.

ADVERTISEMENT

ಜುಲೈ 11ರಂದು ಬಿಡುಗಡೆಯಾಗಿರುವ ವರದಿಯು ಪೈಲಟ್‌ಗಳತ್ತ ಬೊಟ್ಟು ಮಾಡುವಂತಿದೆ ಎಂದು ಆರೋಪಿಸಿರುವ ಸಂಘ, 'ತನಿಖೆಯ ದಾಟಿ ಹಾಗೂ ಅದರಲ್ಲಿನ ನಿರ್ದೇಶನಗಳು ಪೈಲಟ್‌ಗಳ ದೋಷದ ಕಡೆಗೆ ಪಕ್ಷಪಾತದ ನಿಲುವು ಹೊಂದಿರುವುದನ್ನು ಸೂಚಿಸುತ್ತವೆ. ಊಹಾತ್ಮಕ ವರದಿಯನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ನ್ಯಾಯಯುತ, ವಾಸ್ತವ ಆಧಾರಿತ ತನಿಖೆಗೆ ಒತ್ತಾಯಿಸುತ್ತೇವೆ' ಎಂದು ಹೇಳಿದೆ.

'ಸಹಿ ಇಲ್ಲದ ವರದಿ ಸೋರಿಕೆ'
'ಸಂಬಂಧಪಟ್ಟ ಅಧಿಕಾರಿಗಳ ಸಹಿ ಇಲ್ಲದ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ. ತನಿಖೆಯು ರಹಸ್ಯವಾಗಿಯೇ ಮುಂದುವರಿದಿರುವುದರಿಂದ, ವಿಶ್ವಾಸಾರ್ಹತೆ ಹಾಗೂ ಪಾರದರ್ಶಕತೆಯ ಕೊರತೆ ಕಾಡುತ್ತಿದೆ. ತನಿಖಾ ತಂಡಕ್ಕೆ ಅರ್ಹ, ಅನುಭವಿ ಸಿಬ್ಬಂದಿ, ವಿಶೇಷವಾಗಿ ನುರಿತ ಪೈಲಟ್‌ಗಳನ್ನು ಈವರೆಗೆ ಸೇರಿಸಿಲ್ಲ' ಎಂದು ಕಿಡಿಕಾರಿದೆ.

ಅಹಮದಾಬಾದ್‌ನಿಂದ ಲಂಡನ್‌ನತ್ತ ಜೂನ್‌ 12ರ ಮಧ್ಯಾಹ್ನ ಪ್ರಯಾಣ ಆರಂಭಿಸಿದ್ದ ಏರ್‌ ಇಂಡಿಯಾದ AI171 ವಿಮಾನ, ಟೇಕ್‌ ಆಫ್‌ ಆದ ಸ್ವಲ್ಪ ಹೊತ್ತಿನಲ್ಲೇ ಪತನಗೊಂಡಿತ್ತು.

ಹಾರಾಟ ಆರಂಭವಾದ ಕೆಲವೇ ಸೆಕೆಂಡುಗಳಲ್ಲಿ ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿತ್ತು. ಇದೇ ದುರಂತಕ್ಕೆ ಪ್ರಮುಖ ಕಾರಣ ಎಂದು ಎಎಐಬಿ ವರದಿಯಲ್ಲಿ ಉಲ್ಲೇಖವಾಗಿದೆ.

ಟೇಕ್‌ ಆಫ್‌ ಆಗುವ ವೇಳೆ ಸಹಾಯಕ ಪೈಲಟ್‌ ವಿಮಾನ ಚಾಲನೆ ಮಾಡುತ್ತಿದ್ದರು. ಕ್ಯಾಪ್ಟನ್‌ ಮೇಲ್ವಿಚಾರಣೆ ಮಾಡುತ್ತಿದ್ದರು. ಟೇಕಾಫ್‌ ಆದ ಕೆಲವೇ ಕ್ಷಣಗಳಿಗೆ ವಿಮಾನದ ಎರಡು ಎಂಜಿನ್‌ಗಳಿಗೆ ಇಂಧನ ಪೂರೈಕೆಯಾಗುವುದು ನಿಂತಿತ್ತು. ಪತನವಾಗುವ ಕೆಲ ಸೆಕೆಂಡುಗಳ ಮೊದಲು 'ಮೇ ಡೇ' ಘೋಷಣೆಯಾಗಿತ್ತು. ಈ ವೇಳೆ ಪೈಲಟ್‌ಗಳ ನಡುವಿನ ಸಂಭಾಷಣೆ ರೆಕಾರ್ಡ್‌ ಆಗಿದೆ. 'ಏಕೆ ಕಟ್‌ ಆಫ್‌ ಮಾಡಿದ್ದೀರಿ' ಎಂದು ಒಬ್ಬರು ಮತ್ತೊಬ್ಬರನ್ನು ಪ್ರಶ್ನಿಸಿದ್ದರು. ಆಗ, 'ನಾನು ಹಾಗೆ ಮಾಡಿಲ್ಲ' ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದರು. ಇದಾದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಪತನವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಸೇರಿದಂತೆ 260 ಜನರು ಮೃತಪಟ್ಟಿದ್ದಾರೆ. ಒಬ್ಬ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.