ADVERTISEMENT

ಸುರಕ್ಷತೆ ಉಲ್ಲಂಘನೆ | ಏರ್ ಇಂಡಿಯಾಗೆ 9 ನೋಟಿಸ್ ನೀಡಲಾಗಿತ್ತು: ಕೇಂದ್ರ

ಪಿಟಿಐ
Published 21 ಜುಲೈ 2025, 16:10 IST
Last Updated 21 ಜುಲೈ 2025, 16:10 IST
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ   

ಸಾಂದರ್ಭಿಕ ಚಿತ್ರ

ನವದೆಹಲಿ: ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಕಳೆದ ಆರು ತಿಂಗಳಲ್ಲಿ 9 ಶೋಕಾಸ್ ನೋಟಿಸ್‌ಗಳನ್ನು ಏರ್‌ ಇಂಡಿಯಾಗೆ ನೀಡಲಾಗಿತ್ತು ಎಂದು ನಾಗರಿಕ ವಿಮಾನಯಾನ ಸಚಿವಾಲಯವು ರಾಜ್ಯಸಭೆಯಲ್ಲಿ ಸೋಮವಾರ ಮಾಹಿತಿ ನೀಡಿದೆ.

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ನ ಗಾಟ್ವಿಕ್‌ನತ್ತ ಪ್ರಯಾಣ ಆರಂಭಿಸಿದ್ದ ಏರ್‌ ಇಂಡಿಯಾದ ಬೋಯಿಂಗ್‌ 787 ವಿಮಾನವು ಟೇಕ್‌ ಆಫ್‌ ಆದ ಕೆಲವೇ ಸೆಕೆಂಡುಗಳಲ್ಲಿ ಪತನಗೊಂಡಿತ್ತು. ಜೂನ್‌ 12ರಂದು ಸಂಭವಿಸಿದ ಈ ದುರಂತದಲ್ಲಿ 260 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ' ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಏರ್‌ ಇಂಡಿಯಾದ ಬೋಯಿಂಗ್‌ ವಿಮಾನಗಳ ಹೆಚ್ಚುವರಿ ತಪಾಸಣೆಗೆ ಆದೇಶಿಸಿದೆ.

ADVERTISEMENT

ಬಿಜೆಪಿ ಸಂಸದ ಎ.ಎಸ್‌. ಚವಾಣ್‌ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ವಿಮಾನಯಾನ ಸಚಿವ ಕೆ. ರಾಮ್‌ಮೋಹನ್‌ ನಾಯ್ಡು, 'ಒಟ್ಟು 33 ವಿಮಾನಗಳ ಪೈಕಿ, ಕಾರ್ಯಾಚರಣೆ ನಡೆಸುವ 31 ವಿಮಾನಗಳ ತಪಾಸಣೆ ಪೂರ್ಣಗೊಂಡಿದೆ. ಇದರಲ್ಲಿ 8 ವಿಮಾನಗಳಲ್ಲಿ ಸಣ್ಣಪುಟ್ಟ ದೋಷಗಳು ಪತ್ತೆಯಾಗಿವೆ. ದೋಷ ನಿವಾರಣೆ ಬಳಿಕ ವಿಮಾನಗಳ ಹಾರಾಟಕ್ಕೆ ಅನುಮತಿಸಲಾಗಿದೆ' ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಪ್ರತ್ಯೇಕ ಉತ್ತರ ನೀಡಿರುವ ಸಚಿವಾಲಯದ ರಾಜ್ಯ ಖಾತೆ ಸಚಿವ ಮುರಳಿಧರ್‌ ಮೋಹೊಲ್‌, ಅಪಘಾತಕ್ಕೀಡಾದ ವಿಮಾನಕ್ಕೆ ಸಂಬಂಧಿಸಿದಂತೆ ಕಳೆದ ಆರು ತಿಂಗಳಲ್ಲಿ ಯಾವುದೇ ದೋಷದ ವರದಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ, ಇದೇ ಅವಧಿಯಲ್ಲಿ (6 ತಿಂಗಳಲ್ಲಿ) ಗುರುತಿಸಲಾದ ಐದು ಸುರಕ್ಷತಾ ಮಾನದಂಡಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಏರ್‌ ಇಂಡಿಯಾಗೆ 9 ಶೋಕಾಸ್‌ ನೋಟಿಸ್‌ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ, ನಿರ್ದಿಷ್ಟ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.