ADVERTISEMENT

ವಂದೇ ಮಾತರಂ ಗೀತೆಯನ್ನು ತುಂಡರಿಸಿದ್ದು ಭಾರತದ ವಿಭಜನೆಗೆ ಕಾರಣವಾಯ್ತು: ಅಮಿತ್ ಶಾ

ಪಿಟಿಐ
Published 9 ಡಿಸೆಂಬರ್ 2025, 11:02 IST
Last Updated 9 ಡಿಸೆಂಬರ್ 2025, 11:02 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ಪಿಟಿಐ ಚಿತ್ರ

ನವದೆಹಲಿ: ‘ಓಲೈಕೆ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಕತ್ತರಿ ಹಾಕಿದ್ದು ದೇಶದ ವಿಭಜನೆಗೆ ಕಾರಣವಾಯ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.

ADVERTISEMENT

‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ನೀಡಿರುವುದನ್ನು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಸಂಬಂಧ ಕಲ್ಪಿಸುತ್ತಿರುವುದಕ್ಕೆ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ವಂದೇ ಮಾತರಂ ಎಂಬುದು ಭಾರತದ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಜಾಗೃತಗೊಳಿಸಿದ ಮಂತ್ರವಾಗಿದೆ. ಸ್ವಾತಂತ್ರ್ಯ ಆಂದೋಲನಕ್ಕೆ ಮಾತ್ರವಲ್ಲ ಇಂದಿಗೂ ಅದು ಪ್ರಸ್ತುತತೆ ಹೊಂದಿದೆ. ವಿಕಸಿತ ಭಾರತದತ್ತ ಮುನ್ನುಗ್ಗುತ್ತಿರುವ ದೇಶಕ್ಕೆ ಭವಿಷ್ಯದಲ್ಲೂ ಅದು ಪ್ರೇರಣೆಯಾಗಲಿದೆ’ ಎಂದು ಹೇಳಿದ್ದಾರೆ.

‘ವಂದೇ ಮಾತರಂ’ ಚರ್ಚೆಯ ಪ್ರಸ್ತುತತೆಯನ್ನು ಕೇಳಿದ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ಅವರು ವಾಗ್ದಾಳಿ ನಡೆಸಿದ್ದಾರೆ. ‘ಇಡೀ ಗೀತೆಯನ್ನು 2ನೇ ಚರಣಕ್ಕೆ ಗೀತೆಯನ್ನು ಮಿತಿಗೊಳಿಸಿದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ದೇಶವನ್ನೇ ವಿಭಜಿಸಿದರು. ಗೀತೆ ಕುರಿತು ಚರ್ಚೆ ಏಕೆ ನಡೆಸಬೇಕು ಎಂದು ಲೋಕಸಭೆಯಲ್ಲಿ ಕೆಲ ಸಂಸದರು ಸೋಮವಾರ ಪ್ರಶ್ನಿಸಿದ್ದಾರೆ. ಆದರೆ, ಅದು ಈ ಹೊತ್ತಿನ ಅಗತ್ಯವಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾತ್ರವಲ್ಲ, ಇಂದು ಮತ್ತು 2047ರಲ್ಲಿ ವಿಕಸಿತ ಭಾರತವಾದಾಗಲೂ ಅದು ಪ್ರಸ್ತುತತೆ ಹಾಗೇ ಇರಲಿದೆ’ ಎಂದಿದ್ದಾರೆ.

‘ಬಂಗಾಳದ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ ವಂದೇ ಮಾತರಂ ಅನ್ನು ಈ ದೇಶದ ಯುವ ಜನತೆಗೆ ತಲುಪಿಸಬೇಕು. ಮುಸಲ್ಮಾನರ ದಾಳಿಯನ್ನು ಸಹಿಸಿಕೊಂಡ ಮತ್ತು ದೇಶದಲ್ಲಿ ಹೊಸ ಸಂಸ್ಕೃತಿ ಹೇರಿದ ಬ್ರಿಟಿಷರ ವಿರುದ್ಧ ಈ ಗೀತೆ ರಚಿಸಲಾಗಿತ್ತು. ದೇಶವನ್ನು ತಾಯಿಗೆ ಹೋಲಿಸಿದ ಈ ಗೀತೆ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಿತು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ದೇಶದ ಜನರ ಹೃದಯಕ್ಕೆ ಹತ್ತಿರವಾದ ವಂದೇ ಮಾತರಂ ಗೀತೆಯನ್ನು ಹಾಡಿದರೆ ಹಲ್ಲೆ ನಡೆಸಲಾಗುತ್ತಿತ್ತು, ಇನ್ನೂ ಕೆಲವರನ್ನು ಜೈಲಿಗೆ ಅಟ್ಟಲಾಯಿತು. ಹೀಗಾಗಿಯೇ ದೇಶವನ್ನು ಜಾಗೃತಗೊಳಿಸುವ ಮಂತ್ರ ಎಂದು ಮಹರ್ಷಿ ಅರಬಿಂದೋ ಅವರು ಹೇಳಿದ್ದಾರೆ’ ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದರು.

‘ಭಾರತ ಎಂಬುದು ಒಂದು ದೇಶ. ಅದನ್ನು ವಿಭಜಿಸಲು ಯಾರಿಂದಲೂ ಸಾಧ್ಯವಿಲ್ಲ. ಅದರ ಗಡಿಗಳನ್ನು ನಮ್ಮ ಸಂಸ್ಕೃತಿ ನಿರ್ಧರಿಸುತ್ತದೆ ಮತ್ತು ನಾವೆಲ್ಲರೂ ಸಾಂಸ್ಕೃತಿಕವಾಗಿ ಒಂದಾಗಿದ್ದೇವೆ. ಹೀಗಾಗಿ ಅತ್ಯಂತ ಪ್ರಮುಖವಾದ ಸಾಂಸ್ಕೃತಿಕ ರಾಷ್ಟ್ರೀಯವಾದವನ್ನು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ವಂದೇ ಮಾತರಂ ಗೀತೆ ಮೂಲಕ ಜಾಗೃತಗೊಳಿಸಿದರು’ ಎಂದು ಶಾ ನೆನಪಿಸಿಕೊಂಡಿದ್ದಾರೆ.

‘1937ರಲ್ಲಿ ವಂದೇ ಮಾತರಂನ 50ನೇ ವರ್ಷಾಚರಣೆ ಸಂದರ್ಭದಲ್ಲಿ ಜವಾಹರಲಾಲ್ ನೆಹರು ಅವರು ಗೀತೆಯನ್ನು ಎರಡು ಭಾಗಗಳಾಗಿ ವಿಭಜಿಸಿದರು ಮತ್ತು ಎರಡು ಚರಣಗಳಿಗಷ್ಟೇ ಸೀಮಿತಗೊಳಿಸಿದರು. ವಂದೇ ಮಾತರಂಗೆ ಕಾಂಗ್ರೆಸ್ಸಿಗರು ನೀಡುವ ಗೌರವವಿದು. ಈ ಹಂತದಿಂದಲೇ ದೇಶದಲ್ಲಿ ಓಲೈಕೆ ರಾಜಕಾರಣ ಆರಂಭವಾಯಿತು. ಇಲ್ಲವಾದರೆ ಭಾರತ ಎಂದಿಗೂ ಎರಡು ಹೋಳಾಗುತ್ತಿರಲಿಲ್ಲ. ಗೀತೆಯ 100ನೇ ವರ್ಷಾಚರಣೆ ಸಂದರ್ಭದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು’ ಎಂದು ಶಾ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.