ADVERTISEMENT

‘ಆತ ಬೆನ್ನಿಗೆ ಚೂರಿ ಇರಿದವ‘: ಸಚಿನ್ ಪೈಲಟ್ ವಿರುದ್ಧ ಅಶೋಕ್ ಗೆಹಲೋತ್‌ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2022, 11:16 IST
Last Updated 24 ನವೆಂಬರ್ 2022, 11:16 IST
ಸಚಿನ್‌ ಪೈಲಟ್‌ ಹಾಗೂ ಅಶೋಕ್‌ ಗೆಹಲೋತ್‌ (ಪಿಟಿಐ ಚಿತ್ರ)
ಸಚಿನ್‌ ಪೈಲಟ್‌ ಹಾಗೂ ಅಶೋಕ್‌ ಗೆಹಲೋತ್‌ (ಪಿಟಿಐ ಚಿತ್ರ)   

ಪಾಲಿ (ರಾಜಸ್ಥಾನ): ರಾಜಸ್ಥಾನದ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ‘ಬೆನ್ನಿಗೆ ಚೂರಿ ಇರಿದವ’ ಎಂದು ಕಿಡಿಕಾರಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಬೆನ್ನಿಗೆ ಚೂರಿ ಇರಿದವರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ‘ ಎಂದು ಹೇಳಿದ್ದಾರೆ.

‘ಬೆನ್ನಿಗೆ ಚೂರಿ ಇರಿದವರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. 10 ಶಾಸಕರ ಬೆಂಬಲವೂ ಇಲ್ಲದ ಸಚಿನ್‌ ಪೈಲಟ್‌ ಅವರನ್ನು ಹೈಕಮಾಂಡ್‌ ಮುಖ್ಯಮಂತ್ರಿಯನ್ನಾಗಿ ಮಾಡಲು ಆಗುವುದಿಲ್ಲ. ಅವರು ಪಕ್ಷದ ವಿರುದ್ಧ ಬಂಡೆದ್ದು, ದ್ರೋಹ ಬಗೆದರು. ಅವರೊಬ್ಬ ಬೆನ್ನಿಗೆ ಚೂರಿ ಇರಿದವ‘ ಎಂದು ಗೆಹಲೋತ್‌ ಒತ್ತಿ ಹೇಳಿದ್ದಾರೆ.

ADVERTISEMENT

‘ಪಕ್ಷದ ಅಧ್ಯಕ್ಷರೊಬ್ಬರು ತಮ್ಮ ಪಕ್ಷದ ಸರ್ಕಾರವನ್ನೇ ಉರುಳಿಸಲು ಯತ್ನಿಸಿದ ಪ್ರಕರಣ ನಡೆದಿದ್ದು ಭಾರತದಲ್ಲಿ ಮೊದಲ ಬಾರಿ‘ ಎಂದು ಹೇಳಿದ್ದಾರೆ.

2020ರಲ್ಲಿ 19 ಶಾಸಕರೊಂದಿಗೆ ಸಚಿನ್‌ ಪೈಲಟ್‌ ಬಂಡಾಯ ಎದ್ದು, ದೆಹಲಿಯ ರೆಸಾರ್ಟ್‌ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಆ ವೇಳೆ ಅವರು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಲ್ಲದೇ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗಿದ್ದರು.

‘ಪೈಲಟ್ ಅವರ ಅಂದಿನ ಬಂಡಾಯಕ್ಕೆ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರು ಬೆಂಬಲ ನೀಡಿ,ಹಣಕಾಸಿನ ನೆರವುನೀಡಿದ್ದರು‘ ಎಂದು ಗೆಹಲೋತ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.