ADVERTISEMENT

ಭೀಮಾ ಕೋರೆಗಾಂವ್ ಪ್ರಕರಣ: ಸಾಮಾಜಿಕ ಹೋರಾಟಗಾರ ವರವರ ರಾವ್‌ಗೆ ಜಾಮೀನು 

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 7:13 IST
Last Updated 22 ಫೆಬ್ರುವರಿ 2021, 7:13 IST
ವರವರ ರಾವ್‌ (ಸಂಗ್ರಹ ಚಿತ್ರ -ಪಿಟಿಐ)
ವರವರ ರಾವ್‌ (ಸಂಗ್ರಹ ಚಿತ್ರ -ಪಿಟಿಐ)   

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ ಕವಿ – ಸಾಮಾಜಿಕ ಹೋರಾಟಗಾರ ವರವರ ರಾವ್‌ ಅವರಿಗೆ ಸೋಮವಾರ ಬಾಂಬೆ ಹೈ ಕೋರ್ಟ್‌ ವೈದ್ಯಕೀಯ ಕಾರಣಗಳಿಗಾಗಿ ಆರು ತಿಂಗಳ ಅವಧಿಗೆ ಮಧ್ಯಂತರ ಜಾಮೀನು ನೀಡಿದೆ.

ಎಲ್ಗಾರ್ ಪರಿಷದ್‌ ಪ್ರಕರಣ ಹಾಗೂ ಮಾವೊವಾದಿಗಳ ಜೊತೆ ನಂಟು ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆಗಸ್ಟ್‌ 28, 2018ರಂದು ವರವರ ರಾವ್‌(82) ಅವರನ್ನು ಬಂಧಿಸಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ರಾವ್ ಅವರಿಗೆ ಮಹಾರಾಷ್ಟ್ರ ಹೈ ಕೋರ್ಟ್‌ನ ಸೂಚನೆಯಂತೆ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ADVERTISEMENT

‌ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಶ್ ಪಿಟಾಲೆ ಅವರ ನ್ಯಾಯಪೀಠ, ರಾವ್ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆಂದು ಆದೇಶಿಸಿತು. ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ರಾವ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ರಾವ್ ಅವರಿಗೆ ವೈದ್ಯಕೀಯ ಕಾರಣಗಳ ಮೇಲೆ ಜಾಮೀನು ನೀಡದಿದ್ದರೆ, ಮಾನವ ಹಕ್ಕುಗಳ ತತ್ವಗಳನ್ನು ರಕ್ಷಿಸುವ ತನ್ನ ಕರ್ತವ್ಯದಿಂದ ದೂರ ಉಳಿದಂತಾಗುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

₹50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಜಾಮೀನುದಾರರು ಅಷ್ಟೇ ಮೊತ್ತದ ಬಾಂಡ್ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ರಾವ್ ಅವರ ಜಾಮೀನು ನೀಡುವಾಗ ನ್ಯಾಯಪೀಠವು, ಜಾಮೀನು ಪಡೆದವರು ಮುಂಬೈ ಎನ್ಐಎ ನ್ಯಾಯಾಲಯದ ವ್ಯಾಪ್ತಿಯಲ್ಲಿ ಇರಬೇಕು. ಪಾಸ್‌ಪೋರ್ಟ್‌ ಅನ್ನು ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಪ್ರಕರಣದಲ್ಲಿ ತನ್ನ ಸಹ-ಆರೋಪಿಗಳೊಂದಿಗೆ ಯಾವುದೇ ಸಂಪರ್ಕ ಹೊಂದುವಂತಿಲ್ಲ ಎಂಬ ಕಠಿಣ ಷರತ್ತುಗಳನ್ನು ವಿಧಿಸಿದೆ.

ಹೈಕೋರ್ಟ್‌ ಫೆಬ್ರವರಿ 1ರಂದು ಈ ಪ್ರಕರಣದ ಎಲ್ಲ ವಾದಗಳನ್ನು ಮುಕ್ತಾಯಗೊಳಿಸಿತು. ರಾವ್ ಅವರ ವೈದ್ಯಕೀಯ ಜಾಮೀನು ಅರ್ಜಿಯ ವಿಚಾರಣೆ ಮತ್ತು ಅವರ ಪತ್ನಿ ಹೆಮ್ಲತ್‌ ಅವರ ರಿಟ್ ಅರ್ಜಿಯ ಪರಿಶೀಲನೆ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಪೊಲೀಸರು, ಮಾವೊವಾದಿ ಸಂಪರ್ಕ ಹೊಂದಿರುವ ಜನರು ಈ ಸಮಾವೇಶವನ್ನು ಆಯೋಜಿಸಿದ್ದಾರೆ ಎಂದು ಆರೋಪಿಸಿದ್ದರು.

ಪ್ರಕರಣ ಏನು?

ದಲಿತರು ಮರಾಠಾ ಪೇಶ್ವೆಗಳ ವಿರುದ್ಧ ಯುದ್ಧದಲ್ಲಿ ಜಯಗಳಿಸಿದ ದ್ವಿಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಭೀಮಾ ಕೋರೆಗಾಂವ್‌ನಲ್ಲಿ 2018ರ ಜನವರಿ 1ರಂದು ಹಿಂಸಾಚಾರ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಹಿಂಸಾಚಾರಕ್ಕೆ ನಕ್ಸಲರ ನಂಟು ಇದೆ ಎಂದು ಆರೋಪಿಸಿದ್ದರು. 2017ರ ಡಿಸೆಂಬರ್‌ 31ರಂದು ನಡೆದ ಸಭೆಗೆ ನಕ್ಸಲರೇ ಹಣಕಾಸು ನೆರವು ನೀಡಿದ್ದರು. ಈ ಸಭೆಯಲ್ಲಿ ಉದ್ರೇಕಕಾರಿ ಭಾಷಣಗಳನ್ನು ಮಾಡಲಾಗಿತ್ತು. ಅದು ಹಿಂಸೆಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಕವಿ ವರವರರಾವ್‌, ವಕೀಲೆ ಸುಧಾ ಭಾರದ್ವಾಜ್‌, ಸಾಮಾಜಿಕ ಕಾರ್ಯಕರ್ತರಾದ ವರ್ನನ್‌ ಗೊನ್ಸಾಲ್ವೆಸ್‌ ಮತ್ತು ರೋನಾ ವಿಲ್ಸನ್‌, ಮಾನವ ಹಕ್ಕು ಹೋರಾಟಗಾರರಾದ ಅರುಣ್‌ ಫೆರೇರಾ ಮತ್ತು ಗೌತಮ್‌ ನವಲ್ಖಾ ಅವರನ್ನು ಬಂಧಿಸಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.