ADVERTISEMENT

ವಾಹನ ಕಳ್ಳಸಾಗಣೆ ಪ್ರಕರಣ: ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ED ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2025, 4:26 IST
Last Updated 8 ಅಕ್ಟೋಬರ್ 2025, 4:26 IST
<div class="paragraphs"><p>ದುಲ್ಕರ್ ಸಲ್ಮಾನ್ ಮತ್ತು&nbsp;ಪೃಥ್ವಿರಾಜ್</p></div>

ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್

   

–ಪಿಟಿಐ ಚಿತ್ರಗಳು

ನವದೆಹಲಿ: ಭೂತಾನ್ ವಾಹನ ಕಳ್ಳಸಾಗಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು (ಇ,ಡಿ) ತನಿಖೆಯನ್ನು ಚುರುಕುಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಮೇರು ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಅವರ ನಿವಾಸಗಳಲ್ಲಿ ಮೇಲೆ ಶೋಧ ನಡೆಸುತ್ತಿದೆ.

ADVERTISEMENT

ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ತಮಿಳುನಾಡಿನಲ್ಲಿ ನಟರಿಗೆ ಸೇರಿದ ಮನೆಗಳು ಹಾಗೂ ಇತರೆ 17 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನ ವಾಹನಗಳ ವ್ಯಾಪಾರಿಗಳನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಭಾರತ-ಭೂತಾನ್ ಮತ್ತು ಭಾರತ-ನೇಪಾಳ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್, ಡಿಫೆಂಡರ್ ಮತ್ತು ಮಸೆರಾಟಿಯಂತಹ ಐಷಾರಾಮಿ ಕಾರುಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ತೊಡಗಿರುವ ಸಿಂಡಿಕೇಟ್ ಅನ್ನು ಬಹಿರಂಗಪಡಿಸುವ ಮಾಹಿತಿಯ ಆಧಾರದ ಮೇಲೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸುವುದರ ಜತೆಗೆ ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಆರ್‌ಟಿಒ ನೋಂದಣಿಗಳನ್ನು ಬಳಸಿಕೊಂಡು ಕಾರುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಭೂತಾನ್‌ನಿಂದ ವಾಹನಗಳ ಕಳ್ಳಸಾಗಣೆ ಸಂಬಂಧ ಕಸ್ಟಮ್ಸ್ ಇಲಾಖೆಯೂ ದಾಳಿ ನಡೆಸಿತ್ತು. ಇದೀಗ ಇ.ಡಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.