
ಬಿಹಾರ ಚುನಾವಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.
ಬಿಹಾರ ವಿಧಾನಸಭೆ ಚುನಾವಣೆಗೆ ಎರಡು ಹಂತಗಳಲ್ಲಿ ನಡೆದ ಮತದಾನಗಳಲ್ಲಿ ಒಟ್ಟಾರೆ ಶೇ 66.91ರಷ್ಟು ಮತದಾನವಾಗಿದೆ. ಇದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಅತ್ಯಧಿಕ ಎಂದು ಭಾರತೀಯ ಚುನಾವಣಾ ಆಯೋಗವು (ಇಸಿಐ) ತಿಳಿಸಿದೆ.
ಮೊದಲ ಹಂತದಲ್ಲಿ ಶೇ 65.08 ಹಾಗೂ ಎರಡನೇ ಹಂತದಲ್ಲಿ ಶೇ 68.76ರಷ್ಟು ಮತದಾನವಾಗಿದೆ.
ಅಲ್ಲದೆ ರಾಜ್ಯದ ಇತಿಹಾಸದಲ್ಲಿ ಮಹಿಳಾ ಮತದಾರರು ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ ಎಂದು ಇಸಿಐ ತಿಳಿಸಿದೆ.
2020ರ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 57.29ರಷ್ಟು ಮತದಾನವಾಗಿತ್ತು.
ಬಿಹಾರದಲ್ಲಿ ಯಾರ ಕೈಗೆ ಅಧಿಕಾರದ ಚುಕ್ಕಾಣಿ ಸಿಗಲಿದೆ ಎಂಬ ಕುತೂಹಲಕ್ಕೆ ಶುಕ್ರವಾರ ತೆರೆ ಬೀಳಲಿದೆ. ಅದರೆ, ಎಲ್ಲರ ಚಿತ್ತ ರಾಘೋಪುರ ಹಾಗೂ ತಾರಾಪುರದ ಫಲಿತಾಂಶದತ್ತ ಇರಲಿದೆ.
ಈ ಕ್ಷೇತ್ರಗಳಲ್ಲಿ ಕ್ರಮವಾಗಿ ತೇಜಸ್ವಿ ಯಾದವ್ ಹಾಗೂ ಡಿಸಿಎಂ, ಬಿಜೆಪಿಯ ಸಾಮ್ರಾಟ್ ಚೌಧರಿ ಸ್ಪರ್ಧಿಸಿರುವುದು ಈ ಕುತೂಹಲಕ್ಕೆ ಕಾರಣ.
ಬೇರೆ ಬೇರೆ ಕಾರಣಗಳಿಂದಾಗಿ, ಪ್ರಸಕ್ತ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಹಾಗೂ ರಾಬ್ಡಿ ದೇವಿ ಅವರು ಸ್ಪರ್ಧಿಸಿರಲಿಲ್ಲ.
ನಿತೀಶ್ ಕುಮಾರ್ ಹಾಗೂ ರಾಬ್ಡಿ ದೇವಿ ಅವರು ಈಗಾಗಲೇ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ. ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲೂ ಪ್ರಸಾದ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಹಾಗೂ ‘ಇಂಡಿಯಾ’ ಕೂಟಗಳ ನಡುವೆ ನೇರ ಹಾಗೂ ತುರುಸಿನ ಸ್ಪರ್ಧೆ ಕಂಡುಬಂದಿತ್ತು. ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ಹೇಳಿವೆ.
ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮಾತ್ರ ಎಲ್ಲ ಮತಗಟ್ಟೆ ಸಮೀಕ್ಷೆ ಗಳನ್ನು ತಳ್ಳಿಹಾಕಿದ್ದಾರೆ. ‘ಎರಡನೇ ಹಂತದ ಮತದಾನದ ವೇಳೆ, ಜನರು ಮತ ಚಲಾಯಿಸಲು ಇನ್ನೂ ಸರದಿಯಲ್ಲಿ ನಿಂತಿದ್ದರು. ಅದೇ ವೇಳೆ ಮತಗಟ್ಟೆ ಸಮೀಕ್ಷೆಯ ವಿವರಗಳನ್ನು ಬಹಿರಂಗಪಡಿಸಲಾಗಿದೆ’ ಎನ್ನುವ ಮೂಲಕ ತಮ್ಮ ಸಮರ್ಥನೆ ನೀಡುತ್ತಾರೆ.
ಆರ್‌ಜೆಡಿ, ಕಾಂಗ್ರೆಸ್, ಸಿಪಿಐ–ಎಂಎಲ್,ಸಿಪಿಐ, ಸಿಪಿಎಂ ಹಾಗೂ ವಿಐಪಿ ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳು. ಜೆಡಿಯು, ಬಿಜೆಪಿ, ಎಲ್‌ಜೆಪಿ, ಎಚ್‌ಎಂ,ಆರ್‌ಎಲ್‌ಎಂ ಪಕ್ಷಗಳು ಎನ್‌ಡಿಎ ಭಾಗವಾಗಿದೆ.
ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೇರುವ ಪ್ರಯತ್ನದಲ್ಲಿರುವ ಎನ್‌ಡಿಎ ಮೈತ್ರಿಕೂಟವು, ತನ್ನ ಪ್ರಣಾಳಿಕೆಯಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮತ್ತು ‘ಲಖ್‌ಪತಿ ದೀದಿ’ ಯೋಜನೆಯಡಿ ಒಂದು ಕೋಟಿ ಮಹಿಳೆಯರಿಗೆ ತರಬೇತಿ ಸೇರಿದಂತೆ ಹಲವು ಭರವಸೆ ನೀಡಿದೆ. ರಾಜ್ಯದ ನಾಲ್ಕು ನಗರಗಳಲ್ಲಿ ಮೆಟ್ರೊ ರೈಲು ಸೇವೆ ಆರಂಭಿಸುವುದು ಮತ್ತು ಏಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಘೋಷಣೆ ಮಾಡಲಾಗಿದೆ.
ಏಳು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ, 10 ಕೈಗಾರಿಕಾ ಪಾರ್ಕ್‌ಗಳ ಅಭಿವೃದ್ಧಿ, ಬಡ ಕುಟುಂಬಗಳ ಮಕ್ಕಳಿಗೆ ಕೆ.ಜಿಯಿಂದ ಪಿ.ಜಿವರೆಗೆ ಉಚಿತ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ತಿಂಗಳಿಗೆ ₹2000 ನೆರವು ನೀಡುವುದಾಗಿ ಪ್ರಕಟಿಸಿದೆ.
ಮಹಾಮೈತ್ರಿ ಭರವಸೆ ಮಹಾಪೂರ
ಮಹಾಮೈತ್ರಿಕೂಟ ಸರ್ಕಾರ ರಚನೆಯಾದ 20 ದಿನಗಳಲ್ಲೇ, ರಾಜ್ಯದ ಪ್ರತಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲು ಕಾಯ್ದೆ ಅಂಗೀಕರಿಸಲಾಗುವುದು. ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದೆ.
‘ಮಾಯ್-ಬೆಹಿನ್ ಮಾನ್’ ಯೋಜನೆಯಡಿ ಡಿಸೆಂಬರ್ 1ರಿಂದ ಮಹಿಳೆಯರು ತಿಂಗಳಿಗೆ ₹2,500 ಮತ್ತು ಮುಂದಿನ ಐದು ವರ್ಷಗಳವರೆಗೆ ವರ್ಷಕ್ಕೆ ₹30,000 ಆರ್ಥಿಕ ಸಹಾಯ ಪಡೆಯಲಿದ್ದಾರೆ. ಬಡವರ ಪ್ರತಿ ಕುಟುಂಬವು 200 ಯೂನಿಟ್ ಉಚಿತ ವಿದ್ಯುತ್ ಪಡೆಯಲಿದೆ. ₹500ಕ್ಕೆ ಅಡುಗೆ ಅನಿಲ ಒದಗಿಸಲಾಗುವುದು. ಎಂದು ಮೈತ್ರಿಕೂಟವು ಭರವಸೆ ನೀಡಿದೆ.
ಪ್ರಣಾಳಿಕೆಯು ಐಟಿ ಪಾರ್ಕ್, ವಿಶೇಷ ಆರ್ಥಿಕ ವಲಯಗಳು (ಎಸ್‌ಇಜೆಡ್‌ಗಳು), ಡೇರಿ ಆಧಾರಿತ ಕೈಗಾರಿಕೆಗಳು, ಐದು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ 25 ಅಂಶಗಳನ್ನು ಒಳಗೊಂಡಿದೆ.
ಎನ್‌ಡಿಎ ಸರಳ ಬಹುಮತ ಪಡೆದು, ಮತ್ತೆ ಅಧಿಕಾರಕ್ಕೇರಲಿದೆ ಎಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇದು ವಿಪಕ್ಷ ಪಾಳಯದಲ್ಲಿ ಕಿರಿಕಿರಿಯನ್ನುಂಟು ಮಾಡಿದೆ. ವಿರೋಧ ಪಕ್ಷಗಳು ಸಮೀಕ್ಷೆಗಳನ್ನು ತಳ್ಳಿಹಾಕಿವೆ. ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷದ ಸಾಧನೆ ನಿರಾಶಾದಾಯಕವಾಗಿರಲಿದೆ ಎಂದೂ ಸಮೀಕ್ಷೆಗಳು ಹೇಳಿವೆ.
ನಿತೀಶ್ ಕುಮಾರ್ ಅವರು ದಾಖಲೆಯ ಐದನೇ ಬಾರಿಗೆ ಮುಖ್ಯಮಂತ್ರಿಯಾಗುವರೋ ಅಥವಾ ಬದಲಾವಣೆ ಬಯಸಿರುವ ಜನರು, ನಿತೀಶ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ‘ಇಂಡಿಯಾ’ ಒಕ್ಕೂಟದ ಕೈಗೆ ಅಧಿಕಾರದ ಚುಕ್ಕಾಣಿ ನೀಡುವರೋ ಎಂಬುದು ಶುಕ್ರವಾರ ನಿಚ್ಚಳವಾಗಲಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಗೆಲುವು ತಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿವೆ. ಭಾರಿ ಪ್ರಮಾಣದಲ್ಲಿ ಮತ ಚಲಾವಣೆ ಆಗಿರುವುದು ತನ್ನ ಉತ್ತಮ ಆಡಳಿತಕ್ಕೆ ಮತ್ತೊಮ್ಮೆ ಜನಾದೇಶ ಸಿಕ್ಕಿರುವುದರ ಸಂಕೇತ ಎಂದು ಆಡಳಿತಾರೂಢ ಎನ್‌ಡಿಎ ಹೇಳುತ್ತಿದೆ.
‘ಇಂಡಿಯಾ’ ಕೂಟ ಈ ಮಾತನ್ನು ತಳ್ಳಿಹಾಕುತ್ತಿದೆ. ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಜನರ ಈ ಇರಾದೆಯು ದಾಖಲೆಯ ಮತ ಚಲಾವಣೆ ಮೂಲಕ ವ್ಯಕ್ತವಾಗಿದೆ ಎಂದು ‘ಇಂಡಿಯಾ’ ನಾಯಕರು ವಿಶ್ಲೇಷಿಸುತ್ತಿದ್ದಾರೆ.