ADVERTISEMENT

ಬಿಹಾರದಲ್ಲಿ RJDಗೆ ಹೀನಾಯ ಸೋಲು: ರಾಜಕೀಯ, ಕುಟುಂಬ ತ್ಯಜಿಸಿದ ರೋಹಿಣಿ ಆಚಾರ್ಯ

ಬೀದಿಗೆ ಬಂದ ಲಾಲೂ ಕುಟುಂಬದ ‘ಕದನ’

ಪಿಟಿಐ
Published 15 ನವೆಂಬರ್ 2025, 10:24 IST
Last Updated 15 ನವೆಂಬರ್ 2025, 10:24 IST
<div class="paragraphs"><p>ರೋಹಿಣಿ ಆಚಾರ್ಯ</p></div>

ರೋಹಿಣಿ ಆಚಾರ್ಯ

   

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಹೀನಾಯ ಸೋಲುಂಡ ಬೆನ್ನಲ್ಲೇ, ಲಾಲೂ ಪ್ರಸಾದ್‌ ಕುಟುಂಬ ಮತ್ತೊಂದು ಆಘಾತ ಎದುರಿಸಿದೆ.

‘ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ಕುಟುಂಬವನ್ನು ತ್ಯಜಿಸುತ್ತಿದ್ದೇನೆ. ಸಂಜಯ್‌ ಯಾದವ್‌ ಹಾಗೂ ರಮೀಜ್‌ ಅವರು ಈ ರೀತಿ ಮಾಡಬೇಕು ಎಂದು ನನ್ನನ್ನು ಕೇಳಿಕೊಂಡಿದ್ದಾರೆ. ನಾನೇ ಎಲ್ಲಾ ಆಪಾದನೆಗಳನ್ನು ಹೊರುತ್ತಿದ್ದೇನೆ’ ಎಂದು ಲಾಲೂ ಅವರ ಕಿರಿಯ ಮಗಳು ರೋಹಿಣಿ ಅವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ADVERTISEMENT

ಲಾಲೂ ಪ್ರಸಾದ್‌ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ರೋಹಿಣಿ ಅವರೇ ಮೂತ್ರಪಿಂಡ ದಾನ ಮಾಡಿ, ತಂದೆಗೆ ಪುನರ್‌ಜನ್ಮ ನೀಡಿದ್ದರು. ಇದೀಗ ಕುಟುಂಬ ಹಾಗೂ ರಾಜಕೀಯದಿಂದಲೇ ದೂರ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಲಾಲೂ ಅವರ ಹಿರಿಯ ಮಗಳು ಮೀಸಾ ಭಾರತಿ ಅವರು ಪಾಟಲೀಪುತ್ರದ ಲೋಕಸಭಾ ಸಂಸದೆಯಾಗಿದ್ದಾರೆ. ಕಿರಿ ಮಗಳಾದ ರೋಹಿಣಿ 2024ರ ಲೋಕಸಭಾ ಚುನಾವಣೆಯಲ್ಲಿ ಸರನ್‌ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ನಾಯಕ ರಾಜೀವ್‌ ಪ್ರತಾಪ್‌ ರೂಢಿ ಎದುರು 13,661 ಮತಗಳಿಂದ ಸೋಲುಂಡಿದ್ದರು. 

‘ಸಂಜಯ್‌, ರಮೀಜ್‌ ಸೂಚಿಸಿದಂತೆ ಮಾಡಿದ್ದೇನೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ರೋಹಿಣಿ ತಿಳಿಸಿದ್ದಾರೆ.

ಸಂಜಯ್‌ ಯಾದವ್‌ ಅವರು ಆರ್‌ಜೆಡಿ ಪಕ್ಷದ ರಾಜ್ಯಸಭಾ ಸಂಸದ. ಇಬ್ಬರೂ ತೇಜಸ್ವಿ ಯಾದವ್‌ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಂಜಯ್‌ ಅನುಮತಿ ಇಲ್ಲದೇ, ತೇಜಸ್ವಿ ಅವರನ್ನು ಯಾರೂ ಭೇಟಿಯಾಗುವಂತಿಲ್ಲ. 

ಮೂಲಗಳ ಪ್ರಕಾರ, ರೋಹಿಣಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ತೇಜಸ್ವಿ ಅವರಿಗೆ ಹೆಗಲಿಗೆ ಹೆಗಲು ನೀಡಲು ನಿರ್ಧರಿಸಿದ್ದರು. ಆದರೆ, ಸಂಜಯ್‌ ಸಲಹೆಯ ಮೇರೆಗೆ ತನಗೆ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ, ಲಾಲೂ ಅವರು ಕೂಡ ಮಗನ ಬೆನ್ನಿಗೆ ನಿಂತು ಮಗಳನ್ನು ನಿರ್ಲಕ್ಷಿಸಿದ್ದರು ಎಂದು ರೋಹಿಣಿ ಅವರು ಬಲವಾಗಿ ನಂಬಿದ್ದಾರೆ. ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿದ ನಂತರ ಸಾಮಾಜಿಕ ಜಾಲತಾಣದಲ್ಲಿ ತನ್ನ ಕುಟುಂಬದ ಎಲ್ಲ ಸದಸ್ಯರನ್ನು ‘ಅನ್‌ಫಾಲೋ’ ಮಾಡಿದ್ದಾರೆ.

ಯಾರು ಈ ರೋಹಿಣಿ?

ರೋಹಿಣಿ ಆಚಾರ್ಯ ಅವರು ಎಂಬಿಬಿಎಸ್‌ ಪದವಿ ಮುಗಿಸಿ, ಸಿಂಗಾಪುರದಲ್ಲಿ ಪತಿ ಜೊತೆಗೆ ನೆಲಸಿದ್ದರು. 2022ರಲ್ಲಿ ಸಿಂಗಾಪುರದಲ್ಲಿ ತಂದೆಗೆ ಶಸ್ತ್ರಚಿಕಿತ್ಸೆ ನಡೆದ ವೇಳೆ ಮೂತ್ರಪಿಂಡ ದಾನ ಮಾಡಿದ್ದರು. 2024ರಲ್ಲಿ ಸರನ್‌ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದರು. 1977ರಿಂದ ಲಾಲೂ ಪ್ರಸಾದ್‌ ಅವರು ಈ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಚುನಾವಣಾ ಸೋಲಿನ ಬಳಿಕ ಪಕ್ಷದಲ್ಲಿ ಮೂಲೆಗುಂಪಾಗಿದ್ದರು. ರಾಹುಲ್‌ ಗಾಂಧಿ ನಡೆಸಿದ ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಭಾಗವಹಿಸಿದರೂ ಮುನ್ನಲೆಗೆ ಬಂದಿರಲಿಲ್ಲ.

ಗಂಡು ಮಕ್ಕಳ ಏಳ್ಗೆಯಿಲ್ಲ

ಈ ವರ್ಷದ ಆರಂಭದಲ್ಲಿ ಹಿರಿಯ ಮಗ ತೇಜ್‌ ಪ್ರತಾಪ್‌ ಯಾದವ್‌ ಅವರನ್ನು ಪಕ್ಷದಿಂದಲೇ ಹೊರಹಾಕಲಾಗಿತ್ತು. ಸಾರ್ವಜನಿಕ ಜೀವನದಲ್ಲಿ ನೈತಿಕ ಮೌಲ್ಯದ ಕೊರತೆಯ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಲಾಲೂ ತಿಳಿಸಿದ್ದರು.

ಬಳಿಕ ತೇಜ್‌ ಪ್ರತಾಪ್ ‘ಜನಶಕ್ತಿ ಜನತಾದಳ’ ಪಕ್ಷವನ್ನು ಸ್ಥಾಪಿಸಿ, ಮಹುವಾ ಕ್ಷೇತ್ರದಿಂದ ಸ್ಪರ್ಧೆಗಿಳಿದು ಸೋಲುಂಡಿದ್ದರು. ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ, ಕಿರಿಯ ಮಗ ತೇಜಸ್ವಿ ಯಾದವ್ ರಾಘೋಪುರ ಕ್ಷೇತ್ರದಿಂದ ಸ್ಪರ್ಧೆಗಿಳಿದು ಪ್ರಯಾಸದ ಗೆಲುವು ಪಡೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.