ADVERTISEMENT

ಬಿಹಾರ ಸಮೀಕ್ಷೆ ಉಲ್ಟಾ ಆಗಲಿದೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 15:38 IST
Last Updated 12 ನವೆಂಬರ್ 2025, 15:38 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ಬೆಂಗಳೂರು: ‘ಹರಿಯಾಣ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಎಂದು ತೋರಿಸಲಾಗಿತ್ತು. ನಂತರ ಏನಾಯಿತು? ಅದೇ ರೀತಿ ಬಿಹಾರದಲ್ಲೂ ಫಲಿತಾಂಶ ಉಲ್ಟಾ ಆಗಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.‌‌

ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು, ‘ಸಮೀಕ್ಷೆಗಳಿಗಿಂತ ಭಿನ್ನವಾಗಿ ಹರಿಯಾಣದಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿತು. ಬಿಹಾರದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎಗೆ ಮುನ್ನಡೆ ಎನ್ನುತ್ತಿವೆ. ಫಲಿತಾಂಶ ಬರುವ ತನಕ ಕಾದು ನೋಡೋಣ’ ಎಂದರು.

ADVERTISEMENT

ರಾಜ್ಯದ ಮೇಲೆ ಪರಿಣಾಮ ಇಲ್ಲ: ‘ಬಿಹಾರ ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನಂಬಿಕೆ ಇಲ್ಲ. ಅಲ್ಲಿನ ಫಲಿತಾಂಶ ಕರ್ನಾಟಕದ ರಾಜಕಾರಣದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ನಮ್ಮದು ಸಾಮಾಜಿಕ ಬದಲಾವಣೆಯ ಕಾಯಕ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

‘ಕರ್ನಾಟಕ ವಿಧಾನಸಭಾ ಚುನಾವಣೆ ಸಮಯದಲ್ಲೂ ಸಮೀಕ್ಷೆಗಳನ್ನು ನಂಬಿರಲಿಲ್ಲ. ಯಾವ ಸಮೀಕ್ಷೆಗಳೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿರಲಿಲ್ಲ. ತಟ್ಟೆಮರೆ ಏಟು ಯಾವ ರೀತಿ ಬೀಳುತ್ತದೆ ಎಂದು ಹೇಳಲು ಆಗದು. ಬಿಹಾರದ ಜನರು ಬದಲಾವಣೆ ಬಯಸುತ್ತಿದ್ದು, ಮಹಾಘಟಬಂಧನ ಗೆಲ್ಲುವ ಭರವಸೆ ಇದೆ. ಚುನಾವಣೆಯಲ್ಲಿ ಗೆಲುವು–ಸೋಲು ಸಹಜ’ ಎಂದರು. 

‘ಎನ್‌ಡಿಎಗೆ ಭಾರಿ ಬಹುಮತ’

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷಾ ವರದಿಗಳು ಬುಧವಾರವೂ ಹೊರಬರುತ್ತಿವೆ. ಆ್ಯಕ್ಸಿಸ್‌ ಮೈ ಇಂಡಿಯಾ, ಟುಡೇಸ್‌ ಚಾಣಕ್ಯ ಮತ್ತು ಕಾಮಾಕ್ಯ ಅನಲಿಟಿಕ್ಸ್‌ ಸಂಸ್ಥೆಗಳು ತಮ್ಮ ವರದಿಗಳನ್ನು ಬಿಡುಗಡೆ ಮಾಡಿವೆ. ಈ ಸಮೀಕ್ಷೆಗಳ ಪ್ರಕಾರ ಎನ್‌ಡಿಎ ಮೈತ್ರಿಕೂಟವು ಭಾರಿ ಬಹುಮತ ಪಡೆದುಕೊಳ್ಳಲಿದೆ.

ಆದರೆ, ‘ಆರ್‌ಜೆಡಿ ಪಕ್ಷವು ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ (67-76). ಎನ್‌ಡಿಎ ಪಾಳಯವು ಬಹುಮತ ಪಡೆದುಕೊಳ್ಳಲಿದೆಯಾದರೂ ಬಿಜೆಪಿಯು ಕಳೆದ ಬಾರಿಗಿಂತ 18-23 ಸ್ಥಾನ ಕಳೆದುಕೊಳ್ಳಲಿದೆ. ಈ ಮೈತ್ರಿಕೂಟದಲ್ಲಿ ಜೆಡಿಯು ಪಕ್ಷವೇ ಅತಿ ದೊಡ್ಡ ಪಕ್ಷವಾಗಲಿದೆ’ ಎಂದು ಆ್ಯಕ್ಸಿಸ್‌ ಮೈ ಇಂಡಿಯಾ ಹೇಳಿದೆ.

ಜೊತೆಗೆ, ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್‌ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಶೇ 34ರಷ್ಟು ಜನರು ಒಲವು ಹೊಂದಿದ್ದಾರೆ. ನಿತೀಶ್‌ ಕುಮಾರ್‌ ಅವರ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಶೇ 22ರಷ್ಟು ಜನರು ಸಹಮತ ವ್ಯಕ್ತಪಡಿಸಿದ್ದಾರೆ ಎಂದೂ ಈ ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.