ADVERTISEMENT

ಬ್ಲೂಬರ್ಡ್ ಬ್ಲಾಕ್ ಉಪಗ್ರಹ ಉಡ್ಡಯನಕ್ಕೂ ಮುನ್ನ ತಿರುಪತಿಯಲ್ಲಿ ISROಅಧ್ಯಕ್ಷ ಪೂಜೆ

ಪಿಟಿಐ
Published 22 ಡಿಸೆಂಬರ್ 2025, 11:34 IST
Last Updated 22 ಡಿಸೆಂಬರ್ 2025, 11:34 IST
   

ತಿರುಪತಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಇದೇ 24ರಂದು ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್‌ ಕಂಪನಿಯ ‘ಬ್ಲೂಬರ್ಡ್ ಬ್ಲಾಕ್‌–2’ ಸಂವಹನ ಉಪಗ್ರಹವನ್ನು ಉಡ್ಡಯನ ಮಾಡಲಿದೆ. ಇದಕ್ಕೂ ಮುನ್ನ ಇಸ್ರೊ ಅಧ್ಯಕ್ಷ ವಿ. ನಾರಾಯಣನ್‌ ಅವರು ತಿರುಪತಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

ನಾರಾಯಣನ್‌ ಅವರು ಅಧಿಕಾರಿಗಳ ಜತೆಗೂಡಿ ಪೂಜೆ ಸಲ್ಲಿಸುವ ವೇಳೆ ಉಡ್ಡಯನ ವಾಹಕದ ಪ್ರತಿಕೃತಿಯನ್ನೂ ಕೊಂಡೊಯ್ದಿದ್ದರು ಎಂದು ವರದಿಯಾಗಿದೆ.

‘ಎಲ್‌ವಿಎಂ3–ಎಂ6/ಬ್ಲ್ಯೂಬರ್ಡ್‌ ಬ್ಲಾಕ್‌–2 ಮಿಷನ್‌’ ಎಂಬುದು ವಾಣಿಜ್ಯ ಒಪ್ಪಂದದ ಭಾಗವಾಗಿದೆ. ಎಲ್‌ವಿಎಂ–3 ಎಂ6 ಉಡಾವಣಾ ವಾಹಕದ ಮೂಲಕ ಅತ್ಯಾಧುನಿಕ ‘ಬ್ಲ್ಯೂಬರ್ಡ್‌ ಬ್ಲಾಕ್‌–2’ ಉಪಗ್ರಹವನ್ನು ಕಕ್ಷೆಗೆ ಕಳುಹಿಸಲು ನಿರ್ಧರಿಸಲಾಗಿದೆ.

ADVERTISEMENT

‘ನಾವು ಬಾಹುಬಲಿ ರಾಕೆಟ್‌ ಬಳಸಿ ಡಿ.24ರಂದು ‘ಬ್ಲೂಬರ್ಡ್ ಬ್ಲಾಕ್‌–2’ ಉಪಗ್ರಹವನ್ನು ಉಡ್ಡಯನ ಮಾಡಲಿದ್ದೇವೆ. ಇದು ಭಾರತದ ನೆಲದಿಂದ ಉಡ್ಡಯನ ಮಾಡುವ ಅತ್ಯಂತ ಭಾರವಾದ ಉಪಗ್ರಹವಾಗಿದೆ. 4ಜಿ ಮತ್ತು 5ಜಿ ಸಂವಹನ ಉದ್ದೇಶಗಳಿಗಾಗಿ ಈ ಉಪಗ್ರಹವನ್ನು ಉಡ್ಡಯನ ಮಾಡಲಾಗುತ್ತಿದೆ’ ಎಂದು ನಾರಾಯಣನ್‌ ವಿವರಿಸಿದ್ದಾರೆ.

‘ಬ್ಲೂಬರ್ಡ್ ಬ್ಲಾಕ್‌–2’ ಉಪಗ್ರಹ ಕುರಿತಾದ ಮತ್ತಷ್ಟು ಮಾಹಿತಿ

* ಕಕ್ಷೆಗೆ ತಲುಪಲಿರುವ ಮುಂದಿನ ತಲೆಮಾರಿನ ಸಂವಹನ ಉಪಗ್ರಹವು (ಬ್ಲ್ಯೂಬರ್ಡ್‌ ಬ್ಲಾಕ್‌–2) ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಹೈ ಸ್ಪೀಡ್ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್‌ ಪೂರೈಸುವ ಸಾಮರ್ಥ್ಯ ಹೊಂದಿದೆ.

* ಎಎಸ್‌ಟಿ ಸ್ಪೇಸ್‌ಮೊಬೈಲ್‌ ಕಂಪನಿಯು ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್‌ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ನಿರ್ಮಿಸುತ್ತಿದೆ. ಇದನ್ನು ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಳಕೆ ಮಾಡಬಹುದು. ಇದನ್ನು ಸರ್ಕಾರಿ ಮತ್ತು ವಾಣಿಜ್ಯ ಸೇವೆಗಳ ಅಪ್ಲಿಕೇಶನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

* ಜಗತ್ತಿನಲ್ಲಿರುವ ಸುಮಾರು 600 ಕೋಟಿ ಮೊಬೈಲ್‌ ಫೋನ್‌ ಚಂದಾದಾರರು ಎದುರಿಸುತ್ತಿರುವ ಸಂಪರ್ಕ ಸಮಸ್ಯೆಯನ್ನು ನಿವಾರಿಸುವ ಮತ್ತು ಸಂಪರ್ಕರಹಿತವಾಗಿ ಉಳಿದಿರುವ ಶತಕೋಟಿ ಜನರಿಗೆ ಬ್ರ್ಯಾಂಡ್‌ಬ್ಯಾಂಡ್ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಎಎಸ್‌ಟಿ ಸ್ಪೇಸ್‌ಮೊಬೈಲ್‌ ಕಂಪನಿಯು ತನ್ನ ಜಾಲತಾಣದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.