ಭಾರತೀಯ ಸೇನೆ
ನವದೆಹಲಿ/ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಬಳಿ ಒಳನುಸುಳಲು ಯತ್ನಿಸಿದ್ದ ಏಳು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಕ್ತಾರರು ತಿಳಿಸಿದ್ದಾರೆ.
ಗುರುವಾರ ತಡರಾತ್ರಿ ಸಾಂಬಾ ಸೆಕ್ಟರ್‌ನಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರ ಚಲನವಲನವನ್ನು ಗಮನಿಸಿ ಸೇನೆಯು ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಉಗ್ರರು ಹಾಗೂ ಸೇನಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಬಿಎಸ್‌ಎಫ್ ವಕ್ತಾರರು ಹೇಳಿದ್ದಾರೆ.
ಗುಂಡಿನ ಚಕಮಕಿಯ ವಿಡಿಯೊವನ್ನು ಬಿಎಸ್‌ಎಫ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತದ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ’ದ ಮೂಲಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಗಡಿಯಲ್ಲಿ ಎರಡೂ ದೇಶಗಳ ನಡುವೆ ಸೇನಾ ಸಂಘರ್ಷ ತೀವ್ರಗೊಂಡಿದೆ.
‘ದೇಶದ ಪಶ್ಚಿಮ ಭಾಗದಲ್ಲಿರುವ ಭಾರತೀಯ ವಾಯುಪಡೆಯ 13 ಸೇರಿದಂತೆ ಒಟ್ಟು 15 ಸೇನಾ ನೆಲೆಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಿ ಧ್ವಂಸಗೊಳಿಸುವ ಪಾಕಿಸ್ತಾನದ ಪ್ರಯತ್ನವನ್ನು ಭಾರತೀಯ ಸಶಸ್ತ್ರ ಪಡೆಗಳು ವಿಫಲಗೊಳಿಸಿವೆ. ಪಾಕ್ ಕ್ರಿಯೆಗೆ ಪ್ರತಿದಾಳಿಯ ಮೂಲಕ ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಗೊಳಿಸಲಾಗಿದೆ’ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.