ADVERTISEMENT

ಅಸ್ಸಾಂ, ತ್ರಿಪುರಾದಲ್ಲಿ ಸೇನಾಪಡೆ ನಿಯೋಜನೆ, ಗುವಾಹಟಿಯಲ್ಲಿ ಕರ್ಫ್ಯೂ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 13:28 IST
Last Updated 11 ಡಿಸೆಂಬರ್ 2019, 13:28 IST
ಗುವಾಹಟಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸುತ್ತಿರುವ ಸೇನಾಪಡೆ
ಗುವಾಹಟಿಯಲ್ಲಿ ಪ್ರತಿಭಟನಾಕಾರರನ್ನು ಚದುರಿಸುತ್ತಿರುವ ಸೇನಾಪಡೆ   

ಗುವಾಹಟಿ: ಈಶಾನ್ಯ ರಾಜ್ಯಗಳಲ್ಲಿಪೌರತ್ವ (ತಿದ್ದುಪಡಿ) ಮಸೂದೆಗೆ (ಸಿಎಬಿ) ಭಾರೀ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಸೇನಾಪಡೆಯನ್ನು ನಿಯೋಜಿಸಿದ್ದು, ಗುವಾಹಟಿಯಲ್ಲಿ ಕರ್ಫ್ಯೂ ಹೇರಲಾಗಿದೆ.

ಬುಧವಾರ ತ್ರಿಪುರಾದಲ್ಲಿ ಸೇನಾಪಡೆಯ ಎರಡು ತುಕಡಿ ಮತ್ತು ಅಸ್ಸಾಂನ ಬೊನಾಯಿಗಾಂವ್‌ನಲ್ಲಿ ಒಂದು ತುಕಡಿ ನಿಯೋಜಿಸಲಾಗಿದೆ.

ಪೌರತ್ವ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದ ಬೆನ್ನಲ್ಲೇ ಈಶಾನ್ಯ ರಾಜ್ಯಗಳಲ್ಲಿ ವಿರೋಧದ ದನಿ ಎದ್ದಿತ್ತು. ಮಸೂದೆಯನ್ನು ವಿರೋಧಿಸಿ ನಾರ್ಥ್‌ ಈಸ್ಟ್‌ ಸ್ಟೂಡೆಂಟ್ಸ್‌ ಯೂನಿಯನ್‌ (ಎನ್‌ಇಎಸ್‌ಒ) ಮಂಗಳವಾರಕರೆ ನೀಡಿದ್ದ 11 ಗಂಟೆಗಳ ಬಂದ್‌ಗೆ ಈಶಾನ್ಯ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಈ ನಡುವೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೇಂದ್ರ ಸರ್ಕಾರ 5000 ಅರೆ ಸೇನಾ ಸಿಬ್ಬಂದಿಗಳನ್ನು ನಿಯೋಜಿಸಿತ್ತು.

ಬುಧವಾರ ಇಲ್ಲಿ ಬಂದ್ ಇರಲಿಲ್ಲ. ಆದರೆ ಸಾವಿರಾರು ಪ್ರತಿಭಟನಾಕಾರರು ಗುವಾಹಟಿ, ಜೋರಟ್, ಗೋಲಾಘಾಟ್, ದಿಬ್ರುಘಡ್, ತಿನ್ಸುಕಿಯ, ಶಿವಸಾಗರ್, ಬೊನಾಯಿಗಾಂವ್, ನಾಗೋನ್ ಮತ್ತು ಸೋನಿತ್‌ಪುರ್‌ನಲ್ಲಿ ರಸ್ತೆಗಿಳಿದು ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದಿಸ್‌ಪುರ್‌ನಲ್ಲಿ ವಿಧಾನಸಭೆಯ ಹೊರಗಡೆ ಜನರು ಪ್ರತಿಭಟಿಸಿದ್ದು, ಹತ್ತಿರದ ರಸ್ತೆಗಳನ್ನು ವಿದ್ಯಾರ್ಥಿಗಳು ಬಂದ್ ಮಾಡಿದ್ದಾರೆ. ಜನರ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿ ಅಶ್ರುವಾಯು ಪ್ರಹಾರ ಮಾಡಿದ್ದಾರೆ.

ಜಪಾನ್ ಪ್ರತಿನಿಧಿ ಶಿಂಜೊಅಬೆ ಅವರ ಜತೆಗೆ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದು ಅದಕ್ಕಾಗಿ ಸಿದ್ಧಪಡಿಸಿದ್ದ ವೇದಿಕೆಯನ್ನು ಭಾನುವಾರ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಾಳುಗೆಡವಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.