ಚಂದ್ರಯಾನ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಚಂದ್ರನ ಅಂಗಳಕ್ಕೆ ಗಗನ ಯಾತ್ರಿಗಳನ್ನು ಕಳುಹಿಸಿ ವೈಜ್ಞಾನಿಕ ಅಧ್ಯಯನ ನಡೆಸುವ ಉದ್ದೇಶದ ಭಾರತ– ಜಪಾನ್ ಜಂಟಿ ಸಹಭಾಗಿತ್ವದ ‘ಚಂದ್ರಯಾನ–5’ರ ಕುರಿತು ಉಭಯ ದೇಶಗಳ ವಿಜ್ಞಾನಿಗಳ ಉನ್ನತಮಟ್ಟದ ಮೂರನೇ ತಾಂತ್ರಿಕ ಸಭೆ ಬೆಂಗಳೂರಿನಲ್ಲಿ ನಡೆಯಿತು.
ಈ ಯಾನಕ್ಕೆ ಚಂದ್ರಯಾನ–5/ಲುಪೆಕ್ಸ್ ಮಿಷನ್ ಎಂಬ ಹೆಸರನ್ನು ಇಡಲಾಗಿದೆ. 2040ರಲ್ಲಿ ಬಾಹ್ಯಾಕಾಶ ನೌಕೆಯ ಉಡಾವಣೆ ನಡೆಯಲಿದೆ.
ತಾಂತ್ರಿಕ ಸಭೆಯಲ್ಲಿ ಇಸ್ರೊ ಮತ್ತು ಜಪಾನಿನ ಜಾಕ್ಸಾ ಹಾಗೂ ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್‌ನ (ಎಂಎಚ್‌ಐ) ಹಿರಿಯ ಅಧಿಕಾರಿಗಳು ಚಂದ್ರನ ಮೇಲೆ ಹೊತ್ತೊಯ್ಯುವ ಉಪಕರಣಗಳು ಮತ್ತು ಅದಕ್ಕೆ ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಕುರಿತು ತಾಂತ್ರಿಕ ವಿಚಾರಗಳನ್ನು ವಿವರವಾಗಿ ಚರ್ಚಿಸಿದರು ಎಂದು ಇಸ್ರೊ ತಿಳಿಸಿದೆ.
ಚಂದ್ರಯಾನ–4ಕ್ಕೆ ಭಾರತ ಈಗಾಗಲೇ ಸಿದ್ಧತೆ ನಡೆಸಿದ್ದು, ಆ ಯಾನದ ಮೂಲಕ ಚಂದ್ರನ ಅಂಗಳದ ಕಲ್ಲು, ಮಣ್ಣು ಮತ್ತು ಖನಿಜಗಳ ಮಾದರಿಗಳನ್ನು ಅಧ್ಯಯನಕ್ಕಾಗಿ ಹೊತ್ತು ತರಲಿದೆ. ಚಂದ್ರಯಾನ–5ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಯಂ ನೆರಳಿನ ಭಾಗದಲ್ಲಿರುವ ನೀರು ಸೇರಿದಂತೆ ಆವಿ ಸ್ಥಿತಿಯಲ್ಲಿರುವ ವಸ್ತುಗಳ ಅಧ್ಯಯನ ನಡೆಸಲಾಗುವುದು. ಇದಕ್ಕೆ ಅಗತ್ಯವಿರುವ ಆಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕುರಿತು ವಿಚಾರ ವಿನಿಮಯ ನಡೆಯಿತು.
ಇಡೀ ಯೋಜನೆಗೆ ಅಗತ್ಯವಿರುವ ತಂತ್ರಜ್ಞಾನವನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವುದು ಮತ್ತು
ಅನುಷ್ಠಾನಗೊಳಿಸುವುದರ ಜತೆಗೆ ಬಾಹ್ಯಾಕಾಶ ನೌಕೆಯನ್ನು ನಿಖರವಾಗಿ ಯಾವ ಜಾಗದಲ್ಲಿ ಇಳಿಸಬೇಕು ಎಂಬ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು ಎಂದು ಇಸ್ರೊ ತಿಳಿಸಿದೆ.
ಗಗನಯಾತ್ರಿಗಳನ್ನು ಹೊತ್ತೊಯ್ಯು ವುದರಿಂದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ‘ಚಂದ್ರಯಾನ–5’ ಮೈಲಿಗಲ್ಲು ಸೃಷ್ಟಿಸಲಿದೆ ಎಂದು ಇಸ್ರೊ ಅಭಿಪ್ರಾಯಪಟ್ಟಿದೆ.
ಜಪಾನ್‌ನ ಎಚ್ 3–24 ಎಲ್ ಉಡ್ಡಯನ ವಾಹನದ ಮೂಲಕ ಚಂದ್ರಯಾನ–5/ಲುಪೆಕ್ಸ್ ಉಡಾವಣೆ ಗೊಳ್ಳಲಿದೆ. ಇಸ್ರೊ ನಿರ್ಮಿತ ಲ್ಯಾಂಡರ್ ಮತ್ತು ಜಪಾನ್‌ನ ಮಿತ್ಸುಬಿಷಿ ನಿರ್ಮಿತ ರೋವರ್ ಪಯಣ ಬೆಳೆಸಲಿವೆ. ಅಲ್ಲದೆ ಅಧ್ಯಯನಕ್ಕೆ ಅಗತ್ಯವಿರುವ ಉಪಕರಣಗಳೂ ಇರಲಿವೆ. ಈ ಯೋಜನೆಗೆ ಅಗತ್ಯವಿರುವ ಹಣವನ್ನು ನೀಡಲು ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ಒಪ್ಪಿಗೆ ನೀಡಿದೆ.
‘ಚಂದ್ರನ ದಕ್ಷಿಣಧ್ರುವದಲ್ಲಿ ನೌಕೆಯನ್ನು ಇಳಿಸಲು ಉದ್ದೇಶಿಸಿರುವ ಪ್ರದೇಶ, ಉಪಕರಣಗಳ ಸಾಮರ್ಥ್ಯ, ಯೋಜನೆಯ ವಿನ್ಯಾಸ ಮತ್ತು ಭೂಮಿಯಿಂದ ಸಂಪರ್ಕ ಸಾಧಿಸುವ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು’ ಎಂದು ಇಸ್ರೊ ಕೇಂದ್ರ ಕಚೇರಿಯ ವಿಜ್ಞಾನ ಕಾರ್ಯಕ್ರಮಗಳ ನಿರ್ದೇಶಕ ಡಾ.ತೀರ್ಥ ಪ್ರತಿಮ್ ದಾಸ್ ವಿವರಿಸಿದರು.
ಭವಿಷ್ಯದ ಎರಡು ಪ್ರಮುಖ ಯೋಜನೆಗಳು
* 2035ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತವು ಪೂರ್ಣ ಪ್ರಮಾಣದ ನಿಲ್ದಾಣವನ್ನು ಸ್ಥಾಪಿಸಲಿದೆ
*2047ರಲ್ಲಿ ಭಾರತ ಸ್ವಾತಂತ್ರ್ಯ ಪಡೆದು 100 ವರ್ಷ ತುಂಬುವ ಕಾರಣ ಚಂದ್ರನ ಮೇಲೆ ನೆಲೆಯೊಂದನ್ನು ಸ್ಥಾಪಿಸಲು ಇಸ್ರೊ ಯೋಜನೆ ರೂಪಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.