ADVERTISEMENT

ಟ್ರ್ಯಾಕ್ಟರ್‌ ಮಗುಚಿ ಒಬ್ಬ ರೈತ ಸಾವು; ದೆಹಲಿಯ ಹಲವೆಡೆ ಇಂಟರ್‌ನೆಟ್‌ ಸ್ಥಗಿತ

ಏಜೆನ್ಸೀಸ್
Published 26 ಜನವರಿ 2021, 19:50 IST
Last Updated 26 ಜನವರಿ 2021, 19:50 IST
ಟ್ರ್ಯಾಕ್ಟರ್‌ ರ್‍ಯಾಲಿ
ಟ್ರ್ಯಾಕ್ಟರ್‌ ರ್‍ಯಾಲಿ   

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಟ್ರ್ಯಾಕ್ಟರ್‌ ಏರಿ ಬಂದ ಮತ್ತಷ್ಟು ಜನರು ಮಂಗಳವಾರ ದೆಹಲಿ ಪ್ರವೇಶಿಸಿ, ಕಾಯ್ದೆ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಈ ನಡುವೆ ಕೆಂಪು ಕೋಟೆ ಗೋಪುರಗಳ ಮೇಲೆ ಏರಿದ ಕೆಲವು ಜನ ಅನ್ಯ ಧ್ವಜವನ್ನು ಹಾರಿಸಿದ್ದರೆ, ಇನ್ನಷ್ಟು ಜನರು ನಿಗದಿತ ಮಾರ್ಗದಲ್ಲಿ ಸಂಚರಿಸಲು ನಿರಾಕರಿಸಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ. ರೈತರೊಬ್ಬರು ಸಾವಿಗೀಡಾಗಿರುವುದೂ ವರದಿಯಾಗಿದೆ.

ಪ್ರತಿಭಟನೆ ಕಾವೇರುತ್ತಿದ್ದಂತೆ ಪೊಲೀಸರು ಕೆಂಪು ಕೋಟೆಯಲ್ಲಿ ಸೇರಿದ್ದವರನ್ನು ಹೊರಗೆ ಕಳುಹಿಸಿದ್ದಾರೆ, ಗುಂಪನ್ನು ಚದುರಿಸಲು ಲಾಠಿಚಾರ್ಜ್‌ ನಡೆಸಿದ್ದಾರೆ. ಗೊಂದಲಮಯ ವಾತಾವರಣ ನಿರ್ಮಾಣವಾಗಿ ಕಲ್ಲು ತೂರಾಟ ಸಹ ನಡೆದಿದೆ. ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಮುನ್ನುಗ್ಗುತ್ತಿದ್ದರೆ, ಪೊಲೀಸರು ಅಶ್ರುವಾಯು ಸಿಡಿಸುವ ಮೂಲಕ ಅವರನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾರೆ.

ದೆಹಲಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಸಿಂಘು, ಟಿಕ್ರಿ ಹಾಗೂ ಘಾಜಿಪುರ ಗಡಿ ಭಾಗಗಳು ಸೇರಿದಂತೆ ಕೆಲ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದೆ. ಬಹುತೇಕ ಮೆಟ್ರೊ ಮಾರ್ಗಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಪ್ರವೇಶಿಸುವ ಹಾಗೂ ಹೊರ ಹೋಗುವ ದ್ವಾರಗಳನ್ನು ಮುಚ್ಚಲಾಗಿದೆ. ನಾಂಗಲೋಯ್‌ ಸಮೀಪ ಟ್ರ್ಯಾಕ್ಟರ್‌ಗಳನ್ನು ಮುಂದೆ ಸಾಗಿಸಲು ಪ್ರಯತ್ನಿಸಿದವರ ಮೇಲೆ ಪೊಲೀಸರು ಲಾಠಿ ಬೀಸಿದರೆ, ಪ್ರತಿಭಟನಾ ನಿರತರು ಪೊಲೀಸರ ಮೇಲೆ ಟ್ರ್ಯಾಕ್ಟರ್‌ ನುಗ್ಗಿಸುವ ಪ್ರಯತ್ನ ಮಾಡಿದರು.

ದೆಹಲಿಯ ಐಟಿಒದಲ್ಲಿ ಟ್ರ್ಯಾಕ್ಟರ್‌ ಮಗುಚಿ ರೈತರೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪೊಲೀಸರು ಗುಂಡು ಹಾರಿಸಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.

72ನೇ ಗಣರಾಜ್ಯೋತ್ಸವದ ಪರೇಡ್‌ ಬಳಿಕ ರೈತರ ಟ್ರ್ಯಾಕ್ಟರ್‌ ರ್‍ಯಾಲಿಗೆ ಅನುಮತಿ ನೀಡಲಾಗಿದೆ. ರೈತರಿಗೆ ಪರೇಡ್‌ ನಡೆಸಲು ಮಧ್ಯಾಹ್ನ 12ರಿಂದ 5ರ ವರೆಗೂ ಅನುಮತಿ ನೀಡಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.