ADVERTISEMENT

ಕೋಕಾಕೋಲಾಗೆ ಕಾಫಿ ಡೇ ಮಾರಾಟ: ಮಾತುಕತೆ ಆರಂಭಿಸಿದ್ದ ಸಿದ್ದಾರ್ಥ

ಫುರ್ಖಾನ್‌ ಮೊಹರಕಾನ್‌
Published 1 ಆಗಸ್ಟ್ 2019, 20:36 IST
Last Updated 1 ಆಗಸ್ಟ್ 2019, 20:36 IST
   

ಬೆಂಗಳೂರು: ಸಾಫ್ಟ್‌ಡ್ರಿಂಕ್ ಉದ್ಯಮದ ಜಾಗತಿಕದೈತ್ಯ ಕಂಪೆನಿ ಕೋಕಾಕೋಲಾಗೆ ಕಾಫಿ ಡೇಯಲ್ಲಿರುವ ತಮ್ಮ ಪಾಲನ್ನು ಮಾರಾಟ ಮಾಡಲುವಿ.ಜಿ.ಸಿದ್ದಾರ್ಥ ಮಾತುಕತೆ ನಡೆಸಿದ್ದರು.

ಹಲವು ಮೂಲಗಳು ಈ ಮಾಹಿತಿಯನ್ನು ಖಚಿತಪಡಿಸಿವೆ. ಸಿದ್ದಾರ್ಥ ನೇತೃತ್ವದ ಪ್ರವರ್ತಕರ ಸಮೂಹವುಕಾಫಿ ಡೇಯಲ್ಲಿರುವ ಸಿದ್ದಾರ್ಥ ಅವರ ಒಟ್ಟು ಷೇರುಗಳ ಪೈಕಿ ಶೇ 20ರಿಂದ 30ರಷ್ಟು ಪಾಲನ್ನು ಕೋಕಾಕೋಲಾಗೆ ಮಾರಾಟ ಮಾಡಲು ಮಾತುಕತೆ ಆರಂಭಿಸಿತ್ತು. ‘ಮಾರಾಟ ಮಾತುಕತೆಯು ಇನ್ನೂ ಆರಂಭಿಕ ಹಂತದಲ್ಲಿತ್ತು’ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.

‘ಈ ಮಾತುಕತೆಯ ಬಗ್ಗೆ ಆಡಳಿತ ಮಂಡಳಿ ಸಭೆಯ ನಂತರ ಘೋಷಣೆ ಹೊರಬೀಳಬಹುದು’ ಎಂದು ಕಂಪನಿಯ ಉನ್ನತ ಮೂಲಗಳು ಹೇಳಿವೆ.

ADVERTISEMENT

ಕಾಫಿ ಡೇಯಲ್ಲಿ ಪ್ರವರ್ತಕರ ಗುಂಪು ಒಟ್ಟು ಶೇ 53.93ರಷ್ಟು ಪಾಲು ಹೊಂದಿದೆ. ಈ ಪೈಕಿ ಸಿದ್ದಾರ್ಥ ಶೇ 32.75ರಷ್ಟು ಷೇರುಗಳನ್ನು ಹೊಂದಿದ್ದಾರೆ. ಸಿದ್ದಾರ್ಥ ಅವರ ಹೆಂಡತಿ (ಎಸ್‌.ಎಂ.ಕೃಷ್ಣ ಅವರ ಪುತ್ರಿ) ಮಾಳವಿಕ ಹೆಗ್ಡೆ ಶೇ 4.05ರಷ್ಟು ಪಾಲು ಹೊಂದಿದ್ದಾರೆ. ಉಳಿದ ಷೇರುಗಳು ದೇವದರ್ಶಿನಿ ಟೆಕ್ನಾಲಜಿ, ಕಾಫಿ ಡೇ ಕನ್‌ಸಾಲಿಡೇಶನ್ಸ್‌, ಗೋಣಿಬೀಡು ಕಾಫಿ ಎಸ್ಟೇಟ್ಸ್‌ ಮತ್ತು ಶಿವನ್ ಸೆಕ್ಯುರಿಟೀಸ್ ಹೆಸರಿನಲ್ಲಿವೆ.

ಕಂಪನಿಯ ಮೂಲಗಳ ಪ್ರಕಾರ ಅಟ್ಲಾಂಟಾದಲ್ಲಿರುವ ಕೋಕಾಕೋಲದ ಉನ್ನತ ಆಡಳಿತ ಮಂಡಳಿ ಸದಸ್ಯರ ಜೊತೆಗೆ ಸಿದ್ದಾರ್ಥ ಮಾತುಕತೆ ನಡೆಸುತ್ತಿದ್ದರು.ಒಂದು ವೇಳೆ ಈ ಮಾರಾಟ ಒಪ್ಪಂದ ಯಶಸ್ವಿಯಾದರೆ ಇದು ಕೋಕಾಕೋಲದ ಎರಡನೇ ಅತಿದೊಡ್ಡ ಹೂಡಿಕೆಯಾಗಲಿದೆ. ಬ್ರಿಟನ್ ಮೂಲದ ಕೋಸ್ಟಾ ಕಾಫಿಯನ್ನು ಕೋಕಾಕೋಲ 5.1 ಶತಕೋಟಿ ಡಾಲರ್‌ಗೆ ಖರೀದಿಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.