ADVERTISEMENT

ಚುನಾವಣಾ ಬಾಂಡ್‌: ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಕಾಂಗ್ರೆಸ್ ಆಗ್ರಹ

‘ಪ್ರೀಪೈಡ್‌’, ‘ಪೋಸ್ಟ್‌ಪೈಡ್’ ಮತ್ತು ‘ಪೋಸ್ಟ್‌–ರೈಡ್‌’ ಲಂಚ: ಕಾಂಗ್ರೆಸ್

ಪಿಟಿಐ
Published 23 ಮಾರ್ಚ್ 2024, 10:36 IST
Last Updated 23 ಮಾರ್ಚ್ 2024, 10:36 IST
<div class="paragraphs"><p>ಜೈರಾಮ್ ರಮೇಶ್</p></div>

ಜೈರಾಮ್ ರಮೇಶ್

   

ಪಿಟಿಐ ಚಿತ್ರ

ನವದೆಹಲಿ: ಚುನಾವಣಾ ಬಾಂಡ್‌ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶನಿವಾರವೂ ವಾಗ್ದಾಳಿ ಮುಂದುವರಿಸಿದ್ದು, ‘ಅಪಾರದರ್ಶಕ ಯೋಜನೆ’ಯಡಿ ಬ್ಯಾಂಕ್‌ಗಳ ಮೂಲಕ ‘ಪ್ರೀಪೈಡ್‌’, ‘ಪೋಸ್ಟ್‌ಪೈಡ್’ ಮತ್ತು ‘ಪೋಸ್ಟ್‌–ರೈಡ್‌’ ಲಂಚ ಪಡೆಯಲಾಗಿದೆ ಎಂದು ಆರೋಪಿಸಿದೆ.

ADVERTISEMENT

ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆಯಾಗಬೇಕು ಎಂದು ಪಕ್ಷವು ಪುನಃ ಆಗ್ರಹಿಸಿದೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ‘ಕಪ್ಪು ಹಣವನ್ನು ವಾಪಸ್‌ ತರುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಭ್ರಷ್ಟಾಚಾರವನ್ನು ಕಾನೂನಾತ್ಮಕಗೊಳಿಸಿದ್ದಾರೆ’ ಎಂದು ಟೀಕಿಸಿದರು.

ಚುನಾವಣಾ ಬಾಂಡ್‌ ಮೂಲಕ ನಾಲ್ಕು ರೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ‘ದೇಣಿಗೆ ನೀಡಿ, ವ್ಯವಹಾರ ಮಾಡಿ’ (ಪ್ರೀಪೈಡ್‌) ಎನ್ನುವುದು ಒಂದು  ಬಗೆ. ‘ಲಂಚ ನೀಡಿ ಗುತ್ತಿಗೆ ಪಡೆಯಿರಿ’ (ಪೋಸ್ಟ್‌ಪೈಡ್‌)  ಇನ್ನೊಂದು ರೀತಿ.  ‘ಹಫ್ತಾ ವಸೂಲಿ’ (ಪೋಸ್ಟ್‌–ರೈಡ್‌) ಹಾಗೂ ‘ಶೆಲ್‌ ಕಂಪನಿ’ಗಳ ಮೂಲಕ ಮತ್ತೊಂದು ಬಗೆ’ ಎಂದು ಅವರು ವಾಗ್ದಾಳಿ ಮಾಡಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು 38 ಕಾರ್ಪೊರೇಟ್‌ ಕಂಪನಿಗಳಿಗೆ ₹3.84 ಲಕ್ಷ ಕೋಟಿ ವೆಚ್ಚದ 179 ಗುತ್ತಿಗೆ ನೀಡಿ ಅವುಗಳಿಂದ ₹2,004 ಕೋಟಿ ಲಂಚ ಪಡೆದಿದೆ ಎಂದು ಆರೋಪಿಸಿದರು.

ಈ ಕಂಪನಿಗಳು ₹1.32 ಲಕ್ಷ ಕೋಟಿ ವೆಚ್ಚದ ಯೋಜನೆಗಳಿಗೆ ಕ್ಲಿಯರೆನ್ಸ್ ದೊರೆತ ಮೂರು ತಿಂಗಳ ಒಳಗಾಗಿ ₹551 ಕೋಟಿ ದೇಣಿಗೆ ನೀಡಿವೆ. ಇವು ₹580 ಕೋಟಿ ದೇಣಿಗೆ ನೀಡಿದ ನಂತರ ₹62,000 ಕೋಟಿ ವೆಚ್ಚದ ಗುತ್ತಿಗೆಯನ್ನು ಸರ್ಕಾರ ಅವುಗಳಿಗೆ ವಹಿಸಿದೆ ಎಂದು ಹೇಳಿದರು.

ಹಾಗೆಯೇ, ಇ.ಡಿ, ಸಿಬಿಐ, ಆದಾಯ ತೆರಿಗೆ ಇಲಾಖೆ ದಾಳಿ ನಂತರ ಈ ಕಂಪನಿಗಳು ₹1,853 ಕೋಟಿ ದೇಣಿಗೆ ನೀಡಿವೆ ಎಂದೂ ತಿಳಿಸಿದರು. 

ಚುನಾವಣಾ ಬಾಂಡ್‌ ದೇಣಿಗೆದಾರರು ಮತ್ತು ಸ್ವೀಕರಿಸಿದವರ ಮಾಹಿತಿಯನ್ನು, ಸಾರ್ವಜನಿಕವಾಗಿ ಲಭ್ಯವಿರುವ ಗುತ್ತಿಗೆ ಒಪ್ಪಂದ, ತನಿಖಾ ಸಂಸ್ಥೆಗಳ ದಾಳಿ ಮತ್ತಿತರ ಮಾಹಿತಿಯೊಂದಿಗೆ ತಾಳೆ ಮಾಡಿ ಸೂಕ್ಷ್ಮವಾಗಿ ಗಮನಿಸಿದಾಗ ಭ್ರಷ್ಟಾಚಾರವನ್ನು ಕಾನೂನಾತ್ಮಕಗೊಳಿಸಿರುವುದು ಸ್ಪಷ್ಟವಾಗುತ್ತದೆ ಎಂದರು.

ದೇಣಿಗೆದಾರರ ವಿವರಗಳನ್ನು ಬಹಿರಂಗ ಮಾಡಲು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇಷ್ಟವಿಲ್ಲದ ಕಾರಣ, ಎಸ್‌ಬಿಐ ಜೂನ್‌ 30ರ ವರೆಗೂ ಕಾಲಾವಕಾಶ ಕೇಳಿತ್ತು. ಆದರೆ ಕೋರ್ಟ್ ಆದೇಶದ ನಂತರ ಪಕ್ಷದ ‘ತಜ್ಞರು’ 15 ಸೆಕೆಂಡ್‌ಗಳಲ್ಲಿ ಗುಪ್ತ ಸಂಖ್ಯೆ (ಪೈಥಾನ್‌) ರಚಿಸಿ, 30 ಸೆಕೆಂಡುಗಳಲ್ಲಿ ಹೊಂದಾಣಿಕೆ ಮಾಡಿದರು. ನಂತರ ಎಸ್‌ಬಿಐ ಇದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿತು ಎಂದು ಟೀಕಿಸಿದರು.

ವಿರೋಧ ಪಕ್ಷಗಳ ಮೈತ್ರಿಕೂಟ  ‘ಇಂಡಿಯಾ’ ಅಧಿಕಾರಕ್ಕೆ ಬಂದಲ್ಲಿ ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.