ನವದೆಹಲಿ: ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರೇ ಮುಂದುವರಿಯಲಿದ್ದು, ಪಕ್ಷದ ಹೊಸ ಮುಖ್ಯಸ್ಥರ ಆಯ್ಕೆ ಆದಷ್ಟು ಬೇಗ ನಡೆಯಲಿದೆ ಎಂದು ಪಕ್ಷದ ಮುಖಂಡ ಕೆ.ಎಚ್. ಮುನಿಯಪ್ಪ ಸೋಮವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಮಹತ್ವದ ಸಭೆಯ ನಂತರ ಹೇಳಿದರು.
ಮೇಡಂ (ಸೋನಿಯಾ ಗಾಂಧಿ) ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಮತ್ತು ಆದಷ್ಟು ಶೀಘ್ರವಾಗಿ ಅಧ್ಯಕ್ಷ ಹುದ್ದೆಗೆ ಚುನಾವಣೆಯು ನಡೆಯಲಿದೆ. ಇದು ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ತೆಗೆದುಕೊಂಡ ತೀರ್ಮಾನವಾಗಿದೆ ಎಂದು ಸಿಡಬ್ಲ್ಯುಸಿಗೆ ವಿಶೇಷ ಆಹ್ವಾನಿತರಾದ ಮುನಿಯಪ್ಪ ತಿಳಿಸಿದ್ದಾರೆ.
ನಾಯಕತ್ವದ ಬಗ್ಗೆ ಈಗ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಗುಲಾಂ ನಬಿ ಆಜಾದ್ ಜಿ, ಮುಕುಲ್ ವಾಸ್ನಿಕ್ ಜಿ ಮತ್ತು ಆನಂದ್ ಶರ್ಮಾಜಿ ಕೂಡ ನಾಯಕತ್ವದ ಬಗ್ಗೆ ಯಾವುದೇ ವಿವಾದಗಳಿಲ್ಲ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸಿಡಬ್ಲ್ಯುಸಿ ಸದಸ್ಯರು ಒಂದು ವರ್ಷದಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಬಗ್ಗೆ ಮಾತನಾಡಿದರೆ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆರು ತಿಂಗಳಲ್ಲಿಯೇ ಈ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ.
ಎಐಸಿಸಿ ಅಧಿವೇಶನವನ್ನು ಮುಂದಿನ ಆರು ತಿಂಗಳಲ್ಲಿಯೇ ಕರೆಯುವ ಸಾಧ್ಯತೆಯಿದೆ ಮತ್ತು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಹಲವಾರು ನಾಯಕರು ರಾಹುಲ್ ಗಾಂಧಿಯವರೇ ಪಕ್ಷದ ಅಧ್ಯಕ್ಷರಾಗಲಿ ಎಂದು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.
ಏಳು ಗಂಟೆಗಳ ಕಾಲ ನಡೆದ ಪ್ರಮುಖ ಸಿಡಬ್ಲ್ಯುಸಿ ಸಭೆಯಲ್ಲಿ, ಪಕ್ಷಕ್ಕೆ ಪೂರ್ಣಾವಧಿಯ ನಾಯಕತ್ವದ ಅಗತ್ಯವಿದೆ ಎಂದು ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 20ಕ್ಕೂ ಹೆಚ್ಚಿನ ನಾಯಕರ ಬೇಡಿಕೆಯ ವಿವಾದಕ್ಕೀಗ ತೆರೆ ಬಿದ್ದಿದೆ.
ವರ್ಚುವಲ್ ಮೀಟಿಂಗ್‌ನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ಎ.ಕೆ ಆ್ಯಂಟನಿ ಭಾಗವಹಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆಯನ್ನು ಹೊತ್ತ ರಾಹುಲ್ ಗಾಂಧಿ ಅವರು ಪಕ್ಷದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ನಂತರ ಸೋನಿಯಾ ಗಾಂಧಿಯವರನ್ನು 2019ರ ಆಗಸ್ಟ್ 10 ರಂದು ಸಿಡಬ್ಲ್ಯುಸಿ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು.
ಇನ್ನಷ್ಟು ಸುದ್ದಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.