ಎಎಪಿ, ಬಿಜೆಪಿ, ಕಾಂಗ್ರೆಸ್ ಧ್ವಜಗಳು
ಪ್ರಜಾವಾಣಿ ಹಾಗೂ ಪಿಟಿಐ ಚಿತ್ರಗಳು
ನವದೆಹಲಿ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭಿಸಿರುವ ರಾಷ್ಟ್ರ ರಾಜಧಾನಿಯಲ್ಲಿ ಜನವರಿ 7ರಿಂದ 20ರ ಅವಧಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬರೋಬ್ಬರಿ 439 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಶಸ್ತ್ರಾಸ್ತ್ರ, ಮದ್ಯ ಮತ್ತು ಮಾದಕವಸ್ತು ಅಕ್ರಮ ಸಾಗಣೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸಲು ಗಡಿಯ ಚೆಕ್‌ಪೋಸ್ಟ್‌ಗಳಲ್ಲಿ ಕಣ್ಗಾವಲು ಹೆಚ್ಚಿಸಿರುವುದಾಗಿ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಜನವರಿ 7ರಂದು ನೀತಿ ಸಂಹಿತೆ ಜಾರಿಯಾದಾಗಿನಿಂದ 439 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 238 ಅಕ್ರಮ ಶಸ್ತ್ರಾಸ್ತ್ರ ಮತ್ತು 332 ಮದ್ದುಗುಂಡುಗಳನ್ನು ವಶಕ್ಕೆ ಪಡಿಸಿಕೊಂಡಿರುವುದಾಗಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
₹ 1 ಕೋಟಿ ಮೌಲ್ಯದ 38,075 ಲೀ. ಮದ್ಯ, ₹ 17 ಕೋಟಿ ಬೆಲೆಯ 104.90 ಕೆ.ಜಿ ಮಾದಕವಸ್ತು; 1,200 ನಿಷೇಧಿತ ಚುಚ್ಚುಮದ್ದುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾನೂನು ಜಾರಿ ಸಂಸ್ಥೆಗಳು ₹ 3.22 ಕೋಟಿ ನಗದು ಮತ್ತು 37.39 ಕೆ.ಜಿ. ಬೆಳ್ಳಿಯನ್ನೂ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದೆ. ಮೂರು ದಿನಗಳ ಬಳಿಕ (ಫೆ.8ರಂದು) ಫಲಿತಾಂಶ ಪ್ರಕಟವಾಗಲಿದೆ. 699 ಮಂದಿ ಕಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.