ಅರವಿಂದ ಕೇಜ್ರಿವಾಲ್
– ಪಿಟಿಐ ಚಿತ್ರ (ಕಡತ)
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 699 ಅಭ್ಯರ್ಥಿಗಳು ಕಣದಲ್ಲಿದ್ದು, ಸ್ಪರ್ಧೆಯು ಭಾರಿ ಜಿದ್ದಾಜಿದ್ದಿನಿಂದ ಕೂಡಿರಲಿದೆ ಎನ್ನಲಾಗುತ್ತಿದೆ.
2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 672 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಕೊಂಚ ಏರಿಕೆ ಕಂಡಿದೆ.
ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸ್ಪರ್ಧಿಸಲಿರುವ ನವದೆಹಲಿ ಕ್ಷೇತ್ರದಲ್ಲಿ ಅತಿ ಹೆಚ್ಚು (23) ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಪರ್ವೇಶ್ ವರ್ಮಾ ಹಾಗೂ ಕಾಂಗ್ರೆಸ್‌ನಿಂದ ಸಂದೀಪ್ ದೀಕ್ಷಿತ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಜನಕಪುರಿ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು, ರೋಹ್ತಾಸ್ ನಗರ, ಕರವಾಲ್ ನಗರ ಮತ್ತು ಲಕ್ಷ್ಮಿ ನಗರ ಕ್ಷೇತ್ರದಲ್ಲಿ ತಲಾ 15 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಪಟೇಲ್ ನಗರ ಮತ್ತು ಕಸ್ತೂರ್‌ಬಾ ನಗರದಲ್ಲಿ ತಲಾ ಐದರಂತೆ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ದೆಹಲಿ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳ 10ಕ್ಕಿಂತ ಕಡಿಮೆ ಅಭ್ಯರ್ಥಿಗಳಿದ್ದಾರೆ. ತಿಲಕ್ ನಗರ, ಮಂಗೋಲ್‌ಪುರಿ ಮತ್ತು ಗ್ರೇಟರ್ ಕೈಲಾಶ್‌ನಂತಹ ಪ್ರಮುಖ ಕ್ಷೇತ್ರಗಳಲ್ಲಿ ತಲಾ ಆರು ಅಭ್ಯರ್ಥಿಗಳಿದ್ದರೆ, ಚಾಂದಿನಿ ಚೌಕ್, ರಾಜೇಂದ್ರ ನಗರ ಮತ್ತು ಮಾಳವೀಯ ನಗರ ತಲಾ ಏಳು ಸ್ಪರ್ಧಿಗಳು ಕಣದಲ್ಲಿದ್ದಾರೆ.
ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಎಲ್ಲಾ 70 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬಿಜೆಪಿ 68ರಲ್ಲಿ ಸ್ಪರ್ಧಿಸುತ್ತಿದ್ದು, ಮಿತ್ರಪಕ್ಷಗಳಾದ ಜನತಾ ದಳ (ಯುನೈಟೆಡ್) ಮತ್ತು ಲೋಕತಾಂತ್ರಿಕ್ ಜನ ಶಕ್ತಿ ಪಕ್ಷಕ್ಕೆ ಎರಡು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಇತ್ತ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 69 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಈ ಬಾರಿ 981 ಅಭ್ಯರ್ಥಿಗಳು ಒಟ್ಟು 1,522 ನಾಮಪತ್ರಗಳನ್ನು ಸಲ್ಲಿಸಿದ್ದರು. ಜನವರಿ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.
70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.