ದೆಹಲಿ ಮುಖ್ಯಮಂತ್ರಿ ಆತಿಶಿ
–ಪಿಟಿಐ ಚಿತ್ರ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಆತಿಶಿ ಅವರು ವಿಧಾನಸಭಾ ಚುನಾವಣೆಗಾಗಿ ₹40 ಲಕ್ಷ ಸಂಗ್ರಹಿಸಲು ಕ್ರೌಡ್ ಫಂಡಿಂಗ್ (ದೇಣಿಗೆ) ಅಭಿಯಾನವನ್ನು ಇಂದು (ಭಾನುವಾರ) ಆರಂಭಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ರಾಜಕೀಯ ಪಯಣದುದ್ದಕ್ಕೂ, ದೊಡ್ಡ ಉದ್ಯಮಿಗಳಿಗಿಂತ ಸಾಮಾನ್ಯ ನಾಗರಿಕರ ಬೆಂಬಲವೇ ಪ್ರಚಾರದ ಮೂಲಾಧಾರವಾಗಿದೆ’ ಎಂದು ಹೇಳಿದ್ದಾರೆ.
‘ಜನರಿಂದ ಸಣ್ಣ ದೇಣಿಗೆಗಳು ರಾಜಕೀಯಕ್ಕೆ ಪಕ್ಷದ ಪ್ರಾಮಾಣಿಕ ವಿಧಾನವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಕಾರ್ಪೊರೇಟ್ ದೇಣಿಗೆಗಳನ್ನು ಅವಲಂಬಿಸಿರುವ ಮತ್ತು ವ್ಯಾಪಾರದ ಹಿತಾಸಕ್ತಿಗಳನ್ನು ಹೊಂದಿರುವ ಇತರ ಪಕ್ಷಗಳಿಗಿಂತ ನಾವು ಭಿನ್ನವಾಗಿದ್ದೇವೆ’ ಎಂದು ಆತಿಶಿ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
‘2013ರಲ್ಲಿ ನಾವು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಜನರಿಂದ ದೇಣಿಗೆಗಳನ್ನು ಪಡೆಯಲು ಮನೆ-ಮನೆಗೆ ಹೋಗಿದ್ದೆವು. ಬೀದಿಗಳಲ್ಲೇ ಸಭೆಗಳನ್ನು ನಡೆಸುತ್ತಿದ್ದೆವು. ಸಭೆ ನಂತರ ಒಂದು ಬಟ್ಟೆಯನ್ನು ಹರಡುತ್ತಿದ್ದೆವು. ಜನರು ₹10, ₹50, ₹100ರಂತೆ ತಮ್ಮ ಕೈಲಾದಷ್ಟು ಕೊಡುಗೆ ನೀಡುತ್ತಿದ್ದರು. ಯಾವುದೇ ಕಾರ್ಪೊರೇಟ್ ಅಥವಾ ವ್ಯಾಪಾರ ಸಂಬಂಧಗಳಿಂದ ಮುಕ್ತವಾಗಿ ಪ್ರಾಮಾಣಿಕ ಪ್ರಚಾರವನ್ನು ನಡೆಸಲು ಈ ವಿಧಾನವು ನಮಗೆ ನೆರವಾಗುತ್ತದೆ’ ಎಂದು ತಿಳಿಸಿದ್ದಾರೆ.
ಈ ಬಾರಿಯ ವಿಧಾನಸಭಾ ಚುನಾವಣೆಗಾಗಿ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಆರಂಭಿಸಲಾಗಿದೆ. ಇದರೊಂದಿಗೆ ₹40 ಲಕ್ಷ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇವೆ. ಚುನಾವಣಾ ಪ್ರಚಾರಕ್ಕೆ ಹಣದ ಅಗತ್ಯತೆ ಇರುವುದರಿಂದ ಸಾರ್ವಜನಿಕರು ತಮ್ಮ ಕೈಲಾದಷ್ಟು ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ.
ಆಸಕ್ತರು atishi.aamaadmiparty.org ನಲ್ಲಿ ಲಗತ್ತಿಸುರುವ ಲಿಂಕ್ ಮೂಲಕ ದೇಣಿಗೆ ನೀಡಬಹುದು ಎಂದು ಆತಿಶಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.