ಚುನಾವಣಾ ಆಯೋಗ
–ಪಿಟಿಐ ಚಿತ್ರ
ನವದೆಹಲಿ: ಚುನಾವಣಾ ಆಯೋಗವನ್ನು (ಇಸಿ) ಕೇವಲ ರಾಜೀವ್ ಕುಮಾರ್ ಅವರೊಬ್ಬರೆ ನಡೆಸುತ್ತಿದ್ದಾರೆ ಎಂಬ ಆಮ್ ಆದ್ಮಿ ಪಕ್ಷದ (ಎಎಪಿ) ಆರೋಪ ಕುರಿತು ಪ್ರತಿಕ್ರಿಯಿಸಿರುವ ಆಯೋಗವು, ‘ನಮ್ಮದು ಮೂವರು ಸದಸ್ಯರ ಸಂಸ್ಥೆಯಾಗಿದೆ. ಒಬ್ಬ ವ್ಯಕ್ತಿ ನಡೆಸುತ್ತಿಲ್ಲ’ ಎಂದು ತಿರುಗೇಟು ನೀಡಿದೆ.
‘ಚುನಾವಣಾ ಆಯೋಗವು ತ್ರಿಸದಸ್ಯ ಸಂಸ್ಥೆಯಾಗಿದ್ದು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಉದ್ದೇಶಪೂರ್ವಕ ಒತ್ತಡದ ತಂತ್ರಗಳನ್ನು ಬಳಸುವ ಮೂಲಕ ಚುನಾವಣಾ ಆಯೋಗವನ್ನು ಏಕ ಸದಸ್ಯ ಸಂಸ್ಥೆ ಎಂಬ ಭಾವನೆ ಮೂಡಿಸಲಾಗುತ್ತಿದೆ. ಇದು ಸರಿಯಲ್ಲ’ ಎಂದು ಕಿಡಿಕಾರಿದೆ.
'ಪ್ರಭಾವ ಬೀರುವಂತ ಅತಿಬುದ್ಧಿವಂತಿಕೆಯ ಪ್ರಕೋಪಗಳು, ಪ್ರಚೋದಿತ ಆರೋಪಗಳಿಗೆ ಹೆಚ್ಚು ಪ್ರತಿಕ್ರಿಯಸದೇ ಸಾಂವಿಧಾನಿಕ ಸಂಮಯವನ್ನು ಕಾಪಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಚುನಾವಣಾ ಆಯೋಗವು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮುಖ್ಯಮಂತ್ರಿ ಆತಿಶಿ ವಿರುದ್ಧ ದೆಹಲಿ ಪೊಲೀಸರು ಇಂದು (ಮಂಗಳವಾರ) ಎಫ್‌ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಆತಿಶಿ, ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಮತ್ತು ಅವರ ಕುಟುಂಬದ ಸದಸ್ಯರು ಬಹಿರಂಗವಾಗಿ ಗೂಂಡಾಗಿರಿ ನಡೆಸುತ್ತಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಬಗ್ಗೆ ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಚುನಾವಣಾ ಆಯೋಗ ನಿರ್ಲಕ್ಷ್ಯ ವಹಿಸುತ್ತಿದೆ. ಆಯೋಗದ ಅಧ್ಯಕ್ಷ ರಾಜೀವ್ ಕುಮಾರ್ ಅವರು ನಿವೃತ್ತಿಯ ನಂತರವೂ ಹುದ್ದೆಯನ್ನು ಪಡೆಯಲು ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಆರವಿಂದ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದರು.
70 ಸದಸ್ಯ ಬಲದ ದೆಹಲಿಯಲ್ಲಿ ನಾಳೆ (ಫೆಬ್ರುವರಿ 5ರಂದು) ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.